ಕನ್ನಡಪ್ರಭ ವಾರ್ತೆ ಕುಂದಾಪುರಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಜಾತ್ರಾ ಮಹೋತ್ಸವ ಮಾ.15 ರಂದು ಗಣಪತಿ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದ್ದು, ಧ್ವಜಾರೋಹಣ, ಯಾಗ ಶಾಲೆ ಪ್ರವೇಶ, ಭೇರಿ ತಾಡನ, ಕೌತುಕ ಬಂಧನ ಹಾಗೂ ನಗರೋತ್ಸವ ನಡೆಯಲಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಹೇಳಿದ್ದಾರೆ.
ದೇಗುಲದ ವಾರ್ಷಿಕ ಜಾತ್ರೆ ಹಾಗೂ ಶ್ರೀ ಮನ್ಮಹಾರಥೋತ್ಸವದ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.16 ರಿಂದ 21 ರವರೆಗೆ ಪ್ರತಿ ದಿನ ರಾತ್ರಿ ಮಯೂರ, ಡೋಲಾ, ಪುಷ್ಪಮಂಟಪ, ವೃಷಭ, ಗಜ, ಸಿಂಹ ವಾಹನೋತ್ಸವದ ಪುರಮೆರವಣಿಗೆ ಓಲಗ ಮಂಟಪದವರೆಗೂ ನಡೆಯಲಿದೆ. ಪ್ರತಿ ದಿನ ಸಂಜೆ ಕಟ್ಟೆ ಉತ್ಸವ, ಸ್ವರ್ಣಮುಖಿ ರಂಗ ಮಂದಿರದಲ್ಲಿ ದೇಶದ ವಿವಿಧ ಭಾಗದ ಕಲಾವಿದರುಗಳಿಂದ ಸೇವಾ ರೂಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.22 ರಂದು ಬೆಳಗ್ಗೆ 11.15 ಕ್ಕೆ ರಥಾರೋಹಣ ಹಾಗೂ ಸಂಜೆ 4 ಕ್ಕೆ ರಥ ಅವರೋಹಣ ನಡೆಯಲಿದೆ. ಮಾ.23 ಕ್ಕೆ ಓಕುಳಿ ಉತ್ಸವ, ತೆಪ್ಪೋತ್ಸವ ಹಾಗೂ ಅವಭೃತ ಸ್ನಾನ ನಡೆಯಲಿದ್ದು, 24 ರಂದು ಬೆಳಗ್ಗೆ 7 ಕ್ಕೆ ಅಶ್ವಾರೋಹಣೋತ್ಸವದಲ್ಲಿ ಶ್ರೀದೇವಿಯನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಕುಳ್ಳಿರಿಸಿ, ಯಾಗ ಶಾಲೆಯಲ್ಲಿ ಶಾಂತಿ ತತ್ವ ಕಲಾಭಿವೃದ್ಧಿ ಹೋಮದ ಪೂರ್ಣಾಹುತಿ ನಡೆಸಲಾಗುವುದು ಎಂದರು.ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ತಂತ್ರಿ ಕೆ.ನಿತ್ಯಾನಂದ ಅಡಿಗ, ಮಹಾಲಿಂಗ ವೆಂಕ ನಾಯ್ಕ್, ಧನಾಕ್ಷಿ, ಸುಧಾ ಕೆ, ಸುರೇಂದ್ರ ಶೆಟ್ಟಿ, ಅಭಿಲಾಷ್ ಪಿ.ವಿ, ಯು.ರಾಜೇಶ್ ಕಾರಂತ್, ರಘುರಾಮ ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಅರ್ಚಕರು, ಸಿಬ್ಬಂದಿ, ಭಕ್ತರು ಹಾಗೂ ಸ್ಥಳೀಯರ ಸಹಕಾರದಲ್ಲಿ ಪೂರ್ವ ಸಿದ್ದತೆಗಳು ನಡೆಯುತ್ತಿದೆ ಎಂದು ಅಧ್ಯಕ್ಷ ಕೆ.ಬಾಬು ಶೆಟ್ಟಿ ತಿಳಿಸಿದರು.ಒತ್ತುವರಿ ತೆರವು:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪರಿಸರದ ಸುತ್ತ-ಮುತ್ತ ಇರುವ ಅತಿಕ್ರಮಣವಾಗಿರುವ ಹಾಗೂ ಒತ್ತುವರಿಯಾಗಿರುವ ದೇಗುಲದ ಜಾಗದ ತೆರವಿಗೆ ಹಾಗೂ ರಾಜ್ಯದ ಇತರ ಭಾಗದಲ್ಲಿ ಇರುವ ದೇವಳದ ಜಾಗಗಳನ್ನು ಗುರುತಿಸಿ ದೇವಸ್ಥಾನದ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಲಾಗುವುದು. ಒತ್ತುವರಿ ಜಾಗವನ್ನು ಗುರುತಿಸಿ, ತೆರವು ಮಾಡುವ ಕುರಿತು ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆಯ ಮಾರ್ಗದರ್ಶನ ಹಾಗೂ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.ಲಲಿತಾಂಬಿಕಾ ವಸತಿ ಗೃಹದ ನವೀಕರಣ ಹಾಗೂ ದುರಸ್ತಿಗಾಗಿ ಅಂದಾಜು 2 ಕೋಟಿ ರು. ಯೋಜನೆ ತಯಾರಿಸಲಾಗಿದೆ. ಜೀರ್ಣಗೊಂಡಿರುವ ಸೌಪರ್ಣಿಕ ವಸತಿಗೃಹವನ್ನು ತೆರವುಗೊಳಿಸಿ ಅಲ್ಲಿ ಅಂದಾಜು 19 ಕೋಟಿ ರು. ವೆಚ್ಚದಲ್ಲಿ 65 ಕೊಠಡಿಗಳ ಬಹುಮಹಡಿ ವಸತಿಗೃಹ ನಿರ್ಮಾಣಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದ್ದು, ಅದನ್ನು 100 ಕೊಠಡಿಗಳಿಗೆ ಹೆಚ್ಚಿಸಬೇಕು ಎನ್ನುವ ಯೋಚನೆ ಇದೆ ಎಂದರು.
ದೇವಸ್ಥಾನದ ಪಾರ್ಕಿಂಗ್‌ನಲ್ಲಿ ಟೆಂಡರ್‌ನಲ್ಲಿ ನಮೂದಾಗಿರುವ ಮೊತ್ತಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲು ಮಾಡಲಾಗುತ್ತಿದೆ ಎನ್ನುವ ಕುರಿತು ಸಾರ್ವಜನಿಕ ದೂರುಗಳಿದ್ದು, ಷರತ್ತು ಉಲ್ಲಂಘನೆಯ ಕುರಿತು ಈಗಾಗಲೇ ಗುತ್ತಿಗೆದಾರರಿಗೆ ನೋಟಿಸು ನೀಡಲಾಗಿದ್ದು, ಸಮಂಜಸ ಉತ್ತರ ಬಾರದೆ ಇದ್ದಲ್ಲಿ, ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ತಿಳಿಸಿದರು.ಗೋಷ್ಠಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ ಪೂಜಾರಿ, ಸುರೇಂದ್ರ ಶೆಟ್ಟಿ ಇದ್ದರು. ಸಿಬ್ಬಂದಿ ಸಂತೋಷ್ ಕೊಠಾರಿ ಸ್ವಾಗತಿಸಿದರು.