ಕೊಲ್ಲೂರು ಶ್ರೀ ಮನ್ಮಹಾರಥೋತ್ಸವ ಸಂಪನ್ನ

KannadaprabhaNewsNetwork | Published : Mar 23, 2025 1:32 AM

ಸಾರಾಂಶ

ಇತಿಹಾಸ ಪ್ರಸಿದ್ಧ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವವು ಶನಿವಾರ ವೈಭವದಿಂದ ಸಂಪನ್ನಗೊಂಡಿತು. ಶ್ರೀ ದೇವಿಯ ವಿಜೃಂಭಣೆಯ ಉತ್ಸವಕ್ಕೆ ಆಸು-ಪಾಸಿನ ಗ್ರಾಮಗಳಿಂದ, ರಾಜ್ಯದ ವಿವಿಧ ಭಾಗಗಳಿಂದ, ಹೊರ ರಾಜ್ಯದಿಂದ ಹಾಗೂ ವಿದೇಶದಿಂದ ಬಂದಿದ್ದ ದೊಡ್ಡ ಸಂಖ್ಯೆಯ ಭಕ್ತರು ಸಾಕ್ಷಿಯಾದರು.

ರಥೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು । ಇಂದು ಓಕುಳಿ ಹಾಗೂ ಅವಭೃತ ಸ್ನಾನ

ಕನ್ನಡಪ್ರಭ ವಾರ್ತೆ ಕುಂದಾಪುರ

ಇತಿಹಾಸ ಪ್ರಸಿದ್ಧ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವವು ಶನಿವಾರ ವೈಭವದಿಂದ ಸಂಪನ್ನಗೊಂಡಿತು.ಶ್ರೀ ದೇವಿಯ ವಿಜೃಂಭಣೆಯ ಉತ್ಸವಕ್ಕೆ ಆಸು-ಪಾಸಿನ ಗ್ರಾಮಗಳಿಂದ, ರಾಜ್ಯದ ವಿವಿಧ ಭಾಗಗಳಿಂದ, ಹೊರ ರಾಜ್ಯದಿಂದ ಹಾಗೂ ವಿದೇಶದಿಂದ ಬಂದಿದ್ದ ದೊಡ್ಡ ಸಂಖ್ಯೆಯ ಭಕ್ತರು ಸಾಕ್ಷಿಯಾದರು.

ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ದೇಗುಲದ ಪ್ರಧಾನ ತಂತ್ರಿ ನಿತ್ಯಾನಂದ ಅಡಿಗ ನೇತೃತ್ವದಲ್ಲಿ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ ಮಧ್ಯಾಹ್ನ 12.30ರ ವೇಳೆಗೆ ಜೋಡಿ ಉತ್ಸವ ಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತಂದು, ಸುತ್ತು ಪೌಳಿಯಲ್ಲಿ ಮೂರು ಸುತ್ತು ಉತ್ಸವ ನಡೆಸಿ, ಬಳಿಕ ಓಡು ಬಲಿ ಸೇವೆಗಾಗಿ ಸೌಪರ್ಣಿಕ ನದಿ ತೀರಕ್ಕೆ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥ ಪೂಜೆ ನಡೆಸಿದ ಬಳಿಕ, ಸಾವಿರಾರು ಭಕ್ತರ ಜಯಘೋಷದ ನಡುವೆ, ಬೀದಿ ಗಣಪತಿ ದೇವಸ್ಥಾನದ ವರೆಗೆ ರಥೋತ್ಸವ ನಡೆಸಲಾಯಿತು.

ಸಂಜೆ 5 ಗಂಟೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿ ರಥಬೀದಿಯಲ್ಲಿ ಶಂಕರಾಶ್ರಮದ ವರೆಗೆ ಬ್ರಹ್ಮರಥ ಕೊಂಡೊಯ್ಯಲಾಯಿತು. ವಾರ್ಷಿಕ ಜಾತ್ರೆಯ ತೇರಿನ ವೈಭವಕ್ಕೆ ದೇಶ-ವಿದೇಶದಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು. ಪರಂಪರೆಯಂತೆ ರಥಬೀದಿಯ ಸಂಭ್ರಮದ ಉತ್ಸವಾಚರಣೆಯ ಬಳಿಕ ಶ್ರೀ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು.

ದೇವಸ್ಥಾನದ ಋತ್ವಿಜರಾದ ಶ್ರೀಧರ ಅಡಿಗ, ಕೆ.ಎನ್.ಗೋವಿಂದ ಅಡಿಗ, ರಾಮಚಂದ್ರ ಅಡಿಗ, ಸುಬ್ರಹ್ಮಣ್ಯ ಅಡಿಗ, ವಿಘ್ನೇಶ್ ಅಡಿಗ‌, ಗಜಾನನ ಜೋಯಿಸ್, ಸುದರ್ಶನ್ ಜೋಯಿಸ್, ಕಾಳಿದಾಸ ಭಟ್, ಸುರೇಶ್ ಭಟ್, ಶಿವಾನಂದ ಜೋಯಿಸ್, ಅಶ್ವಿನ್ ಭಟ್ ದಳಿ ಇದ್ದರು. ಸಂಜೆ ನಡೆದ ವೈಭವದ ರಥೋತ್ಸವದಲ್ಲಿ ಚೆಂಡೆ ವಾದನ, ತಟ್ಟಿರಾಯ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು. ದೇವಸ್ಥಾನದ ಹೊರ ಹಾಗೂ ಒಳಾವರಣವನ್ನು ಹೂವು ಹಾಗೂ ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಮಾ.15ರಂದು ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಶ್ರೀ ಕ್ಷೇತ್ರದ ವಾರ್ಷಿಕ ಉತ್ಸವಾಚರಣೆಯ ಅಂಗವಾಗಿ ಪ್ರತಿ ದಿನವೂ ವಿಶೇಷ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾ.16ರಂದು ಮಾಂಗಲ್ಯೋತ್ಸವ ಮಯೂರಾರೋಹಣೋತ್ಸವ, ಮಾ.17ರಂದು ಡೋಲಾರೋಹಣೋತ್ಸವ, ಮಾ.18 ರಂದು ಪುಷ್ಪಮಂಟಪಾರೋಹಣೋತ್ಸವ, ಮಾ.19 ರಂದು ವೃಷಭಾರೋಹಣೋತ್ಸವ, ಮಾ.20 ರಂದು ಗಜಾರೋಹಣೋತ್ಸವ, ಮಾ.21 ರಂದು ಸಿಂಹಾರೋಹಣೋತ್ಸವ ಆಚರಣೆಗಳನ್ನು ನಡೆಸಲಾಗಿತ್ತು. ಭಾನುವಾರ ಓಕುಳಿ ಹಾಗೂ ಅವಭೃತ ಸ್ನಾನ, ಸೋಮವಾರ ಅಶ್ವರೋಹಣೋತ್ಸವ, ಧ್ವಜಾವರೋಹಣ ಮಹಾಪೂರ್ಣಾಹುತಿ, ಪೂರ್ಣಕುಂಭಾಭಿಷೇಕ ಹಾಗೂ ಅಂಕುರ ಪ್ರಸಾದ ವಿತರಣೆ ನಡೆಯಲಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಉಪ ವಿಭಾಗಾಧಿಕಾರಿ ಕೆ.ಮಹೇಶ್ಚಂದ್ರ,‌ ಜಯರತ್ನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ್ ಹೆಗ್ಡೆ ಮೊಳಹಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ರಾಜೇಶ್ ಕಾರಂತ್, ಡಾ.ಅಭಿಲಾಶ್ ಪಿ.ವಿ , ರಘುರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ್ ಪೂಜಾರಿ, ಕೆ.ಸುಧಾ, ಮಹಾಲಿಂಗ ನಾಯ್ಕ್, ಸುರೇಂದ್ರ ಶೆಟ್ಟಿ, ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳಾರ ಎಸ್.ಪಿ.ಬಿ.ಮಹೇಶ್, ಅರವಿಂದ್ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಚುಚ್ಚಿ ನಾರಾಯಣ ಶೆಟ್ಟಿ, ಮೋಹನಚಂದ್ರ ನಂಬಿಯಾರ್, ರತ್ನ ರಮೇಶ್ ಕುಂದರ್, ಸಂಧ್ಯಾ ರಮೇಶ್, ಜಯಂತಿ ವಿಜಯ್‌ಕೃಷ್ಣ, ನರಸಿಂಹ ಹಳಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನ ಶರ್ಮಾ, ಉಪಾಧ್ಯಕ್ಷ ನಾಗಾ ಪೂಜಾರಿ, ಮಾಜಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಸದಾಶಿವ ಶೆಟ್ಟಿ, ಪ್ರಮುಖರಾದ ಉದಯ್‌ಕುಮಾರ ಶೆಟ್ಟಿ ಮುನಿಯಾಲು, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಶರತ್‌ಕುಮಾರ ಶೆಟ್ಟಿ ಉಪ್ಪುಂದ, ಕರುಣಾಕರನ್ ಬೇಕಲ್, ಉದ್ಯಮಿಗಳಾದ ವೆಂಕಟೇಶ್ ಬೆಂಗಳೂರು, ಭಾಸ್ಕರ್ ಮಾಲೂರು, ಕುರಿಪ್ಪು ಕೇರಳ, ಸುಧೀರ್ ಕೆ.ಎಸ್, ದೇಗುಲದ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್ ಇದ್ದರು.

ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸವಿತ್ರತೇಜ, ಉಪ ನಿರೀಕ್ಷಕರಾದ ವಿನಯ್ ಕೊರ್ಲಹಳ್ಳಿ, ಪ್ರಸಾದ್, ಪುಷ್ಪ ಅವರ ನೇತೃತ್ವದಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿತ್ತು.

Share this article