ಕೊಲ್ಲೂರು: ಧರ್ಮ ಸಂರಕ್ಷಣಾ ಯಾತ್ರೆಗೆ ಚಾಲನೆ

KannadaprabhaNewsNetwork | Published : Oct 29, 2023 1:00 AM

ಸಾರಾಂಶ

ಕೊಲ್ಲೂರಿನಿಂದ ಹೊರಟ ರಥಯಾತ್ರೆ ಉಡುಪಿ, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಮಾರ್ಗವಾಗಿ ಭಾನುವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಲಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರ ಕೊಲ್ಲೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಎರಡು ದಿನಗಳ ಕಾಲ ನಡೆಯುವ ಧರ್ಮ ಸಂರಕ್ಷಣಾ ಯಾತ್ರೆಗೆ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಶನಿವಾರ ಬೆಳಗ್ಗೆ ಕೊಲ್ಲೂರಿನಲ್ಲಿ ಚಾಲನೆ ನೀಡಿದರು. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅರ್ಚಕ ವಿವೇಕ್ ಅಡಿಗರ ಮೂಲಕ ಪೂಜೆ ಸಲ್ಲಿಸಿದ ಬಳಿಕ, ಧ್ವಜ ಸ್ತಂಭದ ಬಳಿ ಅರ್ಚಕರು ಧರ್ಮ ಧ್ವಜವನ್ನು ಬಿ.ಅಪ್ಪಣ್ಣ ಹೆಗ್ಡೆ ಅವರಿಗೆ ಹಸ್ತಾಂತರಿಸಿದರು. ಶ್ರೀ ದೇವಿಯ ಗಂಧ ಪ್ರಸಾದಗಳನ್ನು ರಥದಲ್ಲಿ ಇಟ್ಟು, ರಥಕ್ಕೆ ಈಡುಗಾಯಿ ಒಡೆದು ಬಳಿಕ ಧರ್ಮ ಧ್ವಜವನ್ನು ಮೇಲಕ್ಕೆ ಎತ್ತಿ ನಿಶಾನೆ ತೋರುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ಸಂಘಟನೆಯ ಪ್ರಮುಖರಾದ ವಸಂತ್ ಗಿಳಿಯಾರ್, ಶರತ್ ಚಂದ್ರ ಪಡ್ವೆಟ್ನಾಯ, ಕುಲದೀಪ್ ಚೌಟ ಮೂಡುಬಿದಿರೆ, ಶರತ್ ಶೆಟ್ಟಿ ಉಪ್ಪುಂದ, ಶ್ರೀಕಾಂತ್ ಪೂಜಾರಿ ಗೋಳಿಹೊಳೆ, ಜಿತೇಶ್ ಜೈನ್, ದರ್ಶನ್ ಜೈನ್, ಶಶಿಧರ ಶೆಟ್ಟಿ ಬರೋಡಾ, ಪುಷ್ಪರಾಜ್ ಹೆಗ್ಡೆ ಮಡಂತ್ಯಾರು, ನೇಮಿರಾಜ್ ಅರಿಗ, ಉಮೇಶ್ ಶೆಟ್ಟಿ ಕಲ್ಗದ್ದೆ, ಶರತ್ ಶೆಟ್ಟಿ ವಡ್ಡರ್ಸೆ, ನಿಖಿಲ್ ನಾಯ್ಕ್, ಸುನೀಲ್ ಪಾಂಡೇಶ್ವರ, ರಾಘವೇಂದ್ರ ರಾಜ್ ಪಾಂಡೇಶ್ವರ, ಭರತರಾಜ್ ಜೈನ್ ಕಾರ್ಕಳ, ಚಿರಂಜೀವಿ ಕಾರ್ಕಳ, ಅವಿನಾಶ್ ಜೈನ್ ಬೆಳ್ತಂಗಡಿ, ಶಿಥಲ್ ಜೈನ್ ಕಾರ್ಕಳ, ಶಿವರಾಮಕೃಷ್ಣ ಭಟ್ ಕೊಲ್ಲೂರು, ವಿಶ್ವೇಶ್ವರಪ್ರಸಾದ್ ವೇಣೂರು, ಸುಬ್ರಹ್ಮಣ್ಯ ಶೆಟ್ಟಿ ಕೋಟೇಶ್ವರ, ನವೀನಚಂದ್ರ ಶೆಟ್ಟಿ ರಟ್ಟಾಡಿ ಇದ್ದರು. ಕೊಲ್ಲೂರಿನಿಂದ ಹೊರಟ ರಥಯಾತ್ರೆ ಉಡುಪಿ, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಮಾರ್ಗವಾಗಿ ಭಾನುವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಲಿದೆ. ಕೊಲ್ಲೂರಿನಿಂದ ಹೊರಟ ರಥಕ್ಕೆ ಚಿತ್ತೂರು, ತಲ್ಲೂರು, ಕುಂಭಾಸಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಮಹಿಳೆಯರು ಆರತಿ ಎತ್ತಿ ಭಕ್ತಿ ತೋರಿದರು. ಪುಷ್ಪಾರ್ಚನೆ ಮಾಡಲಾಯಿತು, ಭಜನಾ ತಂಡದವರಿಂದ ಭಜನೆ ನಡೆಯಿತು, ಜಯಘೋಷ ಹಾಕಲಾಯಿತು. ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಿದ ರಥಕ್ಕೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಎ.ಕಿರಣಕುಮಾರ ಕೊಡ್ಗಿ ಅವರ ನೇತೃತ್ವದಲ್ಲಿ, ತೆಕ್ಕಟ್ಟೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ ಅವರ ನೇತೃತ್ವದಲ್ಲಿ, ಸಾಲಿಗ್ರಾಮದಲ್ಲಿ ಉದ್ಯಮಿ ಆನಂದ್ ಸಿ. ಕುಂದರ್ ಅವರ ನೇತೃತ್ವದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಆಕರ್ಷಕ ಯಾತ್ರೆ: ಅಲಂಕೃತ ರಥ ವಾಹನದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಪ್ರಸಾದ ಇರಿಸಲಾಗಿದೆ. ಮುಂಭಾಗದಲ್ಲಿ ಧರ್ಮಸ್ಥಳದ ಟ್ಯಾಬ್ಲೋ, ಅಣ್ಣಪ್ಪ, ಶಿವ ಪಾರ್ವತಿ ಟ್ಯಾಬ್ಲೋ, ಭಜನೆ ಹಾಗೂ ಚಂಡೆ ವಾದನ ತಂಡಗಳೊಂದಿಗೆ ಸಾಗುತ್ತಿರುವ ರಥಯಾತ್ರೆಯಲ್ಲಿ ನೂರಾರು ವಾಹನಗಳ ಮೂಲಕ ಭಕ್ತರು ಸಾಥ್ ನೀಡುತ್ತಿದ್ದಾರೆ. ರಥಯಾತ್ರೆಯ ದಾರಿಯುದ್ದಕ್ಕೂ ಧಾರ್ಮಿಕ ಮುಖಂಡರು, ರಾಜಕೀಯ, ಸಾಮಾಜಿಕ ನಾಯಕರು ಹಾಗೂ ಜನ ಸಾಮಾನ್ಯರು ವಿಭಿನ್ನವಾಗಿ ರಥವನ್ನು ಸ್ವಾಗತಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು.

Share this article