ಸಂಸ್ಕಾರ ಉಳಿಸಿ, ಬೆಳೆಸುವುದು ಜವಾಬ್ದಾರಿ: ರಾಘವೇಂದ್ರ ಭಟ್‌

KannadaprabhaNewsNetwork |  
Published : Sep 28, 2026, 02:15 AM IST
ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್.ಭಟ್‌ ಉದ್ಘಾಟಿಸಿದರು | Kannada Prabha

ಸಾರಾಂಶ

ಸಂಘನಿಕೇತನದಲ್ಲಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಸಾಲಿಗ್ರಾಮ ಇದರ ಕೇಂದ್ರೀಯ ಮಹಾಧಿವೇಶನ ಹಾಗೂ ‘ಕೋಟದವರ ಹಬ್ಬ’ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು: ಸಮಾಜದ ಏಳಿಗೆಗೆ ಒಗ್ಗಟ್ಟು ಅತ್ಯಗತ್ಯ. ಹಿರಿಯರು ನಮಗೆ ನೀಡಿರುವ ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಎಸ್. ಭಟ್ ಹೇಳಿದ್ದಾರೆ.

ಭಾನುವಾರ ನಗರದ ಸಂಘನಿಕೇತನದಲ್ಲಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಸಾಲಿಗ್ರಾಮ ಇದರ ಕೇಂದ್ರೀಯ ಮಹಾಧಿವೇಶನ ಹಾಗೂ ‘ಕೋಟದವರ ಹಬ್ಬ’ ಉದ್ಘಾಟಿಸಿ ಮಾತನಾಡಿದರು.

ಕೂಟ ಬಾಂಧವರು ವರ್ಷಕ್ಕೊಮ್ಮೆಯಾದರೂ ಸಾಲಿಗ್ರಾಮಕ್ಕೆ ಆಗಮಿಸಿ ಶ್ರೀ ಗುರುನರಸಿಂಹನ ಆಶೀರ್ವಾದ ಪಡೆಯುವ ಪರಂಪರೆ ಮುಂದುವರಿಯಬೇಕು. ನಾವೆಲ್ಲರೂ ವಿಪ್ರರು ಎಂಬ ಭಾವನೆಯೊಂದಿಗೆ ಒಗ್ಗಟ್ಟಿನಿಂದ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕು. ವೈಯಕ್ತಿಕ ಪ್ರಗತಿಯ ಜತೆಗೆ ಸಮುದಾಯದ ಏಳಿಗೆಯ ಬಗ್ಗೆಯೂ ಚಿಂತನೆ ಅಗತ್ಯ ಎಂದರು.

ಕೇಂದ್ರ ಅಧ್ಯಕ್ಷ ಎಚ್.ಸತೀಶ್ ಹಂದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೂಟ ಮಹಾಜಗತ್ತು ಸಮಾಜದ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. ಸಮಾಜವನ್ನು ಗುರುತಿಸಿ ಸಂಘಟಿಸುವ ಜತೆಗೆ ಸದಸ್ಯರ ವೈಚಾರಿಕ ದೃಷ್ಟಿಯನ್ನು ವಿಸ್ತರಿಸುವ ಕೆಲಸವೂ ನಡೆಯಬೇಕು ಎಂದರು.

ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಯುವಜನರು ವಿದೇಶಗಳಿಗೆ ತೆರಳುವುದು ಅನಿವಾರ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಕುಟುಂಬ ವ್ಯವಸ್ಥೆ ಕ್ಷೀಣಿಸುತ್ತಿದೆ. ಕುಟುಂಬಗಳಲ್ಲಿ ಸಂಬಂಧಗಳು ಕಡಿಮೆಯಾಗುತ್ತಿದ್ದು, ವೃದ್ಧಾಪ್ಯದಲ್ಲಿ ಹಿರಿಯರ ಆರೈಕೆಯೂ ಕುಸಿಯುತ್ತಿದೆ. ಚಿಕ್ಕ ಕುಟುಂಬ ವ್ಯವಸ್ಥೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಧರ್ಮಾಚರಣೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ವಿಭು ಅಕಾಡೆಮಿಯ ಸಂಸ್ಕೃತಿ ಚಿಂತಕಿ ಡಾ.ಆರತಿ ವಿ.ಬಿ. ಧಾರ್ಮಿಕ ಉಪನ್ಯಾಸ ನೀಡಿ, ದೇವಯಜ್ಞ, ಋಷಿಯಜ್ಞ, ಪಿತೃಯಜ್ಞ, ಮನುಷ್ಯಯಜ್ಞ ಹಾಗೂ ಭೂತಯಜ್ಞಗಳ ಮಹತ್ವ ವಿವರಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್, ಶ್ರೀ ಗುರುನರಸಿಂಹ ದೇವಳದ ಆಡಳಿತ ಮೊಕ್ತೇಸರ ಪ್ರಕಾಶ್ ಕಾರಂತ್, ಕೇಂದ್ರ ಸಂಸ್ಥೆಯ ಉಪಾಧ್ಯಕ್ಷರಾದ ಸಿಎ ಚಂದ್ರಶೇಖರ ಐತಾಳ, ನ್ಯಾಯವಾದಿ ಸದಾಶಿವ ಐತಾಳ, ಕೇಂದ್ರಾಧಿವೇಶನ ಸಮಿತಿಯ ಗೌರವಾಧ್ಯಕ್ಷ ರಘುನಾಥ್ ಸೋಮಯಾಜಿ, ಶ್ರೀ ಗುರುನರಸಿಂಹ ಬಿಲಿಯನ್ಸ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಗೋಪಾಲಕೃಷ್ಣ ಹೇರ್ಳೆ ಮತ್ತಿತರರಿದ್ದರು.ಸಾಧಕರಿಗೆ ಸನ್ಮಾನ: ಮಹಾಧಿವೇಶನದ ಅಂಗವಾಗಿ ಕೇಂದ್ರಾಧಿವೇಶನ ಸಮಿತಿ ಅಧ್ಯಕ್ಷ ರಘುನಾಥ್ ಸೋಮಯಾಜಿ, ಪಾಕಶಾಸ್ತ್ರಜ್ಞ ಮೋಹನ್ ಹೊಳ್ಳ, ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್.ಭಟ್ ಅವರನ್ನು ಸನ್ಮಾನಿಸಲಾಯಿತು. ಕೂಟ ಮಹಾಜಗತ್ತಿನ ಪರಂಪರೆ, ಚಿಂತನೆ, ಸಂಘಟನಾ ಚಟುವಟಿಕೆಗಳು ಹಾಗೂ ಸಮಾಜದ ವಿವಿಧ ಆಯಾಮಗಳನ್ನು ದಾಖಲಿಸುವ ‘ನರಸಿಂಹ ಪ್ರಭಾ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿದರು. ಕೇಂದ್ರ ಸಮಿತಿಯ ಕಾರ್ಯದರ್ಶಿ ಸುರೇಶ್ ತುಂಗಾ ವಂದಿಸಿದರು. ಪ್ರದೀಪ್ ಉಪಧ್ಯಾಯ, ಮಾಧುರಿ ಶ್ರೀರಾಮ್ ಮತ್ತು ರವಿಚಂದ್ರ ಹೊಳ್ಳ ನಿರೂಪಿಸಿದರು.

ಧರ್ಮವೇ ಸುಖದ ಮೂಲ: ಶೃಂಗೇರಿ ಶ್ರೀ

ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ದಕ್ಷಿಣಾನ್ಮಯ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ವೀಡಿಯೋ ಸಂದೇಶದ ಮೂಲಕ ಆಶೀರ್ವಚನ ನೀಡಿ, ನಮ್ಮ ಹಿರಿಯರು ಧರ್ಮ, ಸಂಸ್ಕಾರ ಹಾಗೂ ಸತ್ಸಂಪ್ರದಾಯದ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಲೌಕಿಕ ಪ್ರಪಂಚದೊಂದಿಗೆ ಸಾಗುವ ಭರದಲ್ಲಿ ಧಾರ್ಮಿಕ ಸಂಸ್ಕಾರದಿಂದ ದೂರವಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಧಾರ್ಮಿಕ ಸಂಸ್ಕಾರ ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಬೇಕು. ಹಿರಿಯರು ತೋರಿಸಿಕೊಟ್ಟ ಧರ್ಮದ ಮಾರ್ಗವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಧರ್ಮದ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಸುಖ, ನೆಮ್ಮದಿ ಹಾಗೂ ಶ್ರೇಯಸ್ಸು ನೆಲೆಸುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಶಾಸಕರಿಗೇ ಸರ್ಕಾರದ ಮೇಲೆ ವಿಶ್ವಾಸವಿಲ್ಲ: ಮಟ್ಟಾರು
ಕುಟುಂಬದ ಭದ್ರತೆಗೆ ಮನೆಯ ಹಿರಿಯರು ಬೇರು ಇದ್ದಂತೆ : ನ್ಯಾ. ರಾಮಲಿಂಗಪ್ಪ