ಕೊಪ್ಪಳದಲ್ಲಿ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಬಂದ್‌

KannadaprabhaNewsNetwork |  
Published : Feb 25, 2025, 12:48 AM IST
24ಕೆಪಿಎಲ್21 ಕಾರ್ಖಾನೆ ಸ್ಥಾಪನೆ ವಿರೋಧಿಸಿ ಹಮ್ಮಿಕೊಂಡಿರುವ ಬೃಹತ್   ಪ್ರತಿಭಟನಾ ಮೆರವಣಿಗೆಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಚಾಲನೆ ನೀಡಿದರು. | Kannada Prabha

ಸಾರಾಂಶ

ಕೊಪ್ಪಳ ಬಳಿ ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ 130ಕ್ಕೂ ಹೆಚ್ಚು ಸಂಘಟನೆಗಳು, ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಬಂದ್ ಹಿನ್ನೆಲೆಯಲ್ಲಿ ಇಡೀ ಕೊಪ್ಪಳ ನಗರ ಸೋಮವಾರ ಅಕ್ಷರಶಃ ಸ್ತಬ್ಧವಾಗಿತ್ತ. ಜನಜೀವನ ಅಸ್ತವ್ಯಸ್ತವಾಗಿ ಕಾರ್ಖಾನೆಗೆ ಭಾರೀ ವಿರೋಧ ವ್ಯಕ್ತವಾಯಿತು.

ಕೊಪ್ಪಳ: ಕೊಪ್ಪಳ ಬಳಿ ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ 130ಕ್ಕೂ ಹೆಚ್ಚು ಸಂಘಟನೆಗಳು, ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಬಂದ್ ಹಿನ್ನೆಲೆಯಲ್ಲಿ ಇಡೀ ಕೊಪ್ಪಳ ನಗರ ಸೋಮವಾರ ಅಕ್ಷರಶಃ ಸ್ತಬ್ಧವಾಗಿತ್ತ. ಜನಜೀವನ ಅಸ್ತವ್ಯಸ್ತವಾಗಿ ಕಾರ್ಖಾನೆಗೆ ಭಾರೀ ವಿರೋಧ ವ್ಯಕ್ತವಾಯಿತು.ಫುಟ್‌ಪಾತ್‌ ಅಂಗಡಿಗಳು, ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು, ಸಿನಿಮಾ ಮಂದಿರಗಳು, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬಸ್‌, ಆಟೋಗಳು ಸೇರಿದಂತೆ ಎಲ್ಲ ಕಾರ್ಯಚಟುವಟಿಕೆ ಸ್ಥಗಿತಗೊಂಡಿತ್ತು. ಇಡೀ ಕೊಪ್ಪಳದಲ್ಲಿ ಯಾವುದೇ ವಹಿವಾಟು ಹಾಗೂ ಸಂಚಾರ ಇರಲಿಲ್ಲ.

ಗವಿಮಠ ಶ್ರೀಗಳ ಚಾಲನೆ: ಕೊಪ್ಪಳ ಬಂದ್ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಗೆ ಗವಿಮಠ ಆವರಣದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಚಾಲನೆ ನೀಡಿದರು. ಶ್ರೀಗಳು ಚಾಲನೆ ನೀಡುತ್ತಿದ್ದಂತೆ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಅಶೋಕ ವೃತ್ತದ ಮಾರ್ಗವಾಗಿ ಜವಾಹರ ರಸ್ತೆಯ ಮೂಲಕ ಸಾಗಿತು. ಶಾಸಕರು, ಸಂಸದರು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ನಾಯಕರು, ಸಾಹಿತಿಗಳು, ಹೋರಾಟಗಾರರು, ರೈತ ಸಂಘಟನೆಗಳ ಮುಖಂಡರು, ಎಲ್ಲ ಧರ್ಮ ಗುರುಗಳು, ಹಲವಾರು ಸಂಘಟನೆಗಳ ಮುಖಂಡರು, ಸಹಸ್ರಾರು ಸಂಖ್ಯೆಯ ಜನ ಸಾಮಾನ್ಯರು ಭಾಗವಹಿಸಿದ್ದರು.

ಜವಾಹರ ರಸ್ತೆ, ಅಶೋಕ ವೃತ್ತದ ಮೂಲದ ಮೆರವಣಿಗೆ ಕೊಪ್ಪಳ ತಾಲೂಕು ಕ್ರೀಡಾಂಗಣ ತಲುಪಿತು. ಕಾರ್ಖಾನೆ ವಿರುದ್ಧ ಘೋಷಣೆಗಳು ಮೊಳಗಿದವು. ಕಾರ್ಖಾನೆ ಕಳುಹಿಸಿ, ಕೊಪ್ಪಳ ಉಳಿಸಿ ಎನ್ನುವ ಘೋಷಣೆ ಮುಗಿಲು ಮುಟ್ಟಿತ್ತು.ಬೀದಿ ಕವಿಗೋಷ್ಠಿ: ಸಾಹಿತಿಗಳು ಕಾರ್ಖಾನೆಯ ಸ್ಥಾಪನೆ ವಿರುದ್ಧ ರಚಿಸಿದ ಕವನಗಳನ್ನು ಬೀದಿಯಲ್ಲಿಯೇ ನಿಂತು ವಾಚಿಸಿದರು. ಸಾಹಿತಿ ಹಾಗೂ ವಕೀಲ ವಿಜಯ ಅಮೃತರಾಜ ನೇತೃತ್ವದಲ್ಲಿ ಅನೇಕರು ತಮ್ಮ ಕವನ ವಾಚನ ಮಾಡಿ, ಕಾರ್ಖಾನೆ ವಿರೋಧಿಸಿ ಹೋರಾಟಕ್ಕೆ ಬೆಂಬಲ ನೀಡಿದರು.ರೈತರೊಬ್ಬರು ತಮ್ಮ ಟ್ರ್ಯಾಕ್ಟರ್‌ನಲ್ಲಿ ಕಪ್ಪಾಗಿರುವ ಗಿಡ ಮತ್ತು ತಮ್ಮ ಬೆಳೆಗಳನ್ನು ಹೇರಿಕೊಂಡು ಬಂದು, ಮೆರವಣಿಗೆಯುದ್ದಕ್ಕೂ ಪ್ರದರ್ಶನ ಮಾಡಿದರು.ಕಣ್ಣೀರಿಟ್ಟ ಶ್ರೀಗಳು: ಕಾರ್ಖಾನೆಯಿಂದಾದ ಸಮಸ್ಯೆ, ಜನರು ಅನುಭವಿಸುತ್ತಿರುವ ಯಾತನೆಯನ್ನು ವಿವರಿಸುತ್ತ ಶ್ರೀಗಳು ಕಣ್ಣೀರು ಹಾಕಿದರು. "ನಾನು ಸೇರಿ ಮಠದ 18 ಸ್ವಾಮೀಜಿಗಳಿಗೆ ಭೀಕ್ಷೆ ನೀಡಿದ್ದೀರಿ, ಮಕ್ಕಳಿಗೆ ಅನ್ನ ನೀಡದ್ದೀರಿ, ಮಠದ ಬೆಳವಣಿಗೆಗೆ ಶ್ರಮಿಸಿದ್ದೀರಿ, ಈಗ ನಿಮಗೆ ಕಷ್ಟ ಬಂದಾಗ ನಾನು ಬರದಿದ್ದರೆ ಹೇಗೆ? " ಎಂದು ಭಾವುಕರಾಗಿ ಕಣ್ಣೀರಿಟ್ಟರು. ಹೀಗೆ ಮಾತನಾಡುವಾಗ ನಾಲ್ಕಾರು ಬಾರಿ ಭಾವುಕರಾದರು. ಇದನ್ನು ನೋಡಿದ ನೆರೆದಿದ್ದ ಜನರು ಕಣ್ಣೀರು ಹಾಕಿದರು.ಯುಸೂಫಿಯಾ ಮಸೀದಿಯ ಧರ್ಮಗುರು ಮುಫ್ತಿ ನಜೀರ್ ಅಹ್ಮದ್ ಖಾದ್ರಿ, ಕ್ರೈಸ್ತ ಧರ್ಮಗುರು ಜೆ. ರವಿಕುಮಾರ ಹಾಗೂ ಅನೇಕ ಸ್ವಾಮೀಜಿಗಳು ಸಾನ್ನಿಧ್ಯವಹಿಸಿದ್ದರು.ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಗಾಲಿ ಜನಾರ್ದನ ರೆಡ್ಡಿ, ವಿಪ ಸದಸ್ಯರಾದ ಹೇಮಲತಾ ನಾಯಕ, ಬಸನಗೌಡ ಬಾದರ್ಲಿ, ಶರಣೇಗೌಡ ಪಾಟೀಲ್, ಮುಖಂಡರಾದ ಸಂಗಣ್ಣ ಕರಡಿ, ಮಾಜಿ ಸಚಿವ ಹಾಲಪ್ಪ ಆಚಾರ್, ಸಿ.ವಿ. ಚಂದ್ರಶೇಖರ, ಡಾ. ಬಸವರಾಜ ಕ್ಯಾವಟರ, ಕೆ. ವಿರೂಪಾಕ್ಷಪ್ಪ, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ರಾಘವೇಂದ್ರ ಕುಷ್ಟಗಿ ಮೊದಲಾದವರು ಭಾಗವಹಿಸಿದ್ದರು.

ಬರದಂತೆ ತಡೆಯೋಣ: ನಾನು ಸೇರಿದಂತೆ ಸ್ವಾಮೀಜಿಗಳು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದು, ಅವರು ಸಹ ಕೊಪ್ಪಳ ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ನಾವೆಲ್ಲರೂ ಸೇರಿ ಕಾರ್ಖಾನೆಯನ್ನು ಇಲ್ಲಿ ಬರದಂತೆ ತಡೆಯೋಣ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ಈಗಾಗಲೇ ಇರುವ ಕಾರ್ಖಾನೆಗಳು ಸಾಕಾಗಿ ಹೋಗಿದ್ದು, ಇನ್ಮುಂದೆ ಕಾರ್ಖಾನೆ ಬೇಡವೇ ಬೇಡ. ಈ ದಿಸೆಯಲ್ಲಿ ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿಬಾಗಿಲು ಹಾಕಿದಂತೆ ಆಗಿದೆ. ಆದರೂ ಇನ್ನಾದರೂ ಯಾವೊಂದು ಕಾರ್ಖಾನೆ ಕೊಪ್ಪಳ ಬಳಿ ಬರುವುದಕ್ಕೆ ಬಿಡಬಾರದು. ಈಗಿರುವ ಕಾರ್ಖಾನೆಯಿಂದ ಧೂಳಿನದೆ ಗೋಳಾಗಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.ಎಂಎಸ್‌ಪಿಎಲ್ ಕಾರ್ಖಾನೆ ವಿರೋಧಿಸುವ ಜತೆಗೆ ಅಣು ಸ್ಥಾವರ ಸ್ಥಾಪಿಸುವುದನ್ನೂ ವಿರೋಧಿಸೋಣ. ಎಲ್ಲರೂ ಒಗ್ಗೂಡಿ ಇದರ ವಿರುದ್ಧ ಹೋರಾಟ ಮಾಡೋಣ ಎಂದು ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.ಕೊಪ್ಪಳವನ್ನು ನರಕರನ್ನಾಗಿ ಮಾಡಲು ನಾವು ಬಿಡುವುದಿಲ್ಲ. ಈಗಿರುವ ಕಾರ್ಖಾನೆಗಳಿಂದಲೇ ಸಮಸ್ಯೆಯಾಗಿದ್ದು, ಈಗ ಮತ್ತೊಂದು ಬೃಹತ್ ಕಾರ್ಖಾನೆಯಾಗುವುದಕ್ಕೆ ಬಿಡುವುದಿಲ್ಲ ಎಂದು ಯುಸೂಫಿಯಾ ಮಸೀದಿ ಗುರು ಹಜರತ್ ಮುಫ್ತಿ ಅಹ್ಮದ್ ನಜೀರ್ ಖಾದ್ರಿ ಹೇಳಿದರು.ಈಗಾಗಲೇ ನಾವು ಸಿಎಂ ಅವರನ್ನು ಭೇಟಿಯಾದಾಗ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರೂ ಒಗ್ಗೂಡಿ ಪ್ರಯತ್ನ ಮಾಡಬೇಕಾಗಿದೆ. ರೈತರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಮತ್ತು ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಹೇಳಿದರು.ಇದೊಂದು ಐತಿಹಾಸಿಕ ಹೋರಾಟವಾಗಿದ್ದು, ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಹೆಜ್ಜೆ ಕೋಟಿ ಜನರ ಹೆಜ್ಜೆಗೆ ಸಮಾನವಾಗಿದೆ. ಅವರ ನೇತೃತ್ವ ವಹಿಸಿರುವುದರಿಂದ ಯಶಸ್ವಿ ಖಚಿತ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರು ಸಿ.ವಿ. ಚಂದ್ರಶೇಖರ ಹೇಳಿದರು.ನಮ್ಮ ಮುಂದಿನ ಪೀಳಿಗೆ ಭವಿಷ್ಯದ ದೃಷ್ಟಿಯಿಂದ ಕೊಪ್ಪಳ ಬಳಿ ಬೃಹತ್ ಕಾರ್ಖಾನೆ ಸ್ಥಾಪಿಸುವುದಕ್ಕೆ ಅವಕಾಶ ನೀಡಬಾರದು. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಪ್ರಯತ್ನ ಮಾಡಬೇಕು ಎಂದು ವಿಪ ವಿರೋಧ ಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಹೇಳಿದರು.ಈ ಹೋರಾಟ ಇಂದೇ ಕೊನೆಯಾಗಬೇಕು. ಖುದ್ದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಸ್ವತಃ ಅವರ ಆಪ್ತರಾಗಿರುವ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. ಹೀಗಾಗಿ, ನಾವೆಲ್ಲರೂ ಸೇರಿ, ಪಕ್ಷಾತೀತವಾಗಿ ಸಿಎಂ ಅವರ ಬಳಿಗೆ ಹೋಗಿ, ಒತ್ತಡ ಹಾಕೋಣ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.ಜನರ ಬದುಕು ಕಿತ್ತುಕೊಂಡು ಅಭಿವೃದ್ಧಿ ಮಾಡುವ ಅಗತ್ಯವಿಲ್ಲ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು. ಇಲ್ಲಿಯ ಜನರಿಗೆ ತೊಂದರೆಯಾಗುವುದಾದರೆ ಅಂಥ ಕಾರ್ಖಾನೆ ಬೇಡವೇ ಬೇಡ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ: ಮಹೇಶ್ವರ್ ರಾವ್ ಸೂಚನೆ
ರಸ್ತೆ ಅಪಘಾತ ಸೈಕಲ್‌ ಸವಾರ ಸಾವು