ಕೊಪ್ಪಳ:
ಇದು, ಅಪರ ಜಿಲ್ಲಾಧಿಕಾರಿ ರುಜು ಇರುವ ಆದೇಶ ಪ್ರತಿಯಲ್ಲಿರುವ ಒಕ್ಕಣಿಕೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಸ್‌ಪಿಎಲ್ ಕಾರ್ಖಾನೆ ಆರಂಭದ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರೂ ಪಾಲಿಸಿರಲಿಲ್ಲ. ಈ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಬುಧವಾರ ಪ್ರತಿಕ್ರಿಯೆ ನೀಡಲೂ ನಿರಾಕರಿಸಿದ್ದ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರೇ ಅಪರ ಜಿಲ್ಲಾಧಿಕಾರಿಗಳಿಂದ ಕಾರ್ಖಾನೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ಬಿಡುಗಡೆ ಮಾಡಿಸಿದ್ದಾರೆ.ಇದರಿಂದ ಕೊಪ್ಪಳ ಬಳಿ ತಲೆ ಎತ್ತಲು ಮುಂದಾಗಿದ್ದ ಬಿಎಸ್‌ಪಿಎಲ್ ಕಾರ್ಖಾನೆಗೆ ಬ್ರೇಕ್ ಬಿದ್ದಿದೆ. ಜಿಲ್ಲಾಡಳಿತದ ಪ್ರಕಟಣೆ ಬಿಡುಗಡೆಯಾಗುತ್ತಿದ್ದಂತೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಾಮಗಾರಿ ನಿಲ್ಲಿಸಲಾಗಿತ್ತು. ಬುಧವಾರ ಕಾರ್ಖಾನೆ ಗೇಟ್ ಒಳಗೆ ಬಿಡಲು ನಿರಾಕರಿಸಿದ್ದ ಭದ್ರತಾ ಸಿಬ್ಬಂದಿಯೂ ಗುರುವಾರ ಯಾರಿಗೂ ಅಡೆತಡೆ ಮಾಡಲಿಲ್ಲ. ಕೇವಲ ಭೂಮಿಯ ಸಮತಟ್ಟು ಕಾರ್ಯದ ಹೊರತಾಗಿ ಯಾವುದೇ ಯಂತ್ರ ಬಂದಿಲ್ಲ ಎಂಬುದು ಕಂಡು ಬಂದಿತು. ಆದರೆ, ಈಗಾಗಲೇ ಇರುವ ಎಂಎಸ್‌ಪಿಎಲ್ ಕಾರ್ಖಾನೆ ಎಂದಿನಂತೆ ಕಾರ್ಯ ನಿರ್ವಹಿಸುವುದು ಕಂಡು ಬಂದಿತು.ಬಿಎಸ್‌ಪಿಎಲ್ ಕಂಪನಿಗೆ ಭಾರಿ ಹಿನ್ನಡೆ
ಸಿಎಂ ಆದೇಶಿಸಿದರೂ ಕಾರ್ಖಾನೆ ಕಾಮಗಾರಿ ಮುಂದುವರಿಸಿರುವುದನ್ನು ತಡೆಯಲು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬಿಎಸ್‌ಪಿಎಲ್ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿ, ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆ ಗೇಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಕಿತ್ತು ಹಾಕಿದರು. ಜನರು ಧೂಳಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಕಾರ್ಖಾನೆ ಪ್ರಾರಂಭಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ದಲಿತ ಸಂಘಟನೆಗಳನ್ನು ಒಡೆಯುವ ನಿಮ್ಮ ಕಂಪನಿ ಆಟ ನಡೆಯಲು ಬಿಡುವುದಿಲ್ಲ. ನಿಮ್ಮ ಕಾರ್ಖಾನೆಯನ್ನು ಇಲ್ಲಿಂದ ಓಡಿಸುತ್ತೇವೆ ಎಂದರು. ಈ ವೇಳೆ ದಲಿತ ಸಂಘಟನೆ ಮಲ್ಲಿಕಾರ್ಜುನ ಪೂಜಾರ, ಸಿದ್ದು ಮಣ್ಣಿನವರ, ಯಂಕಪ್ಪ ಹೊಸಳ್ಳಿ, ಮೂಕಪ್ಪ ಮೇಸ್ತ್ರಿ, ಗವಿ ಹೂಗಾರ ಇದ್ದರು.