ಸೋಮರಡ್ಡಿ ಅಳವಂಡಿ
ಕೊಪ್ಪಳ : ಸಂಪ್ರದಾಯದಂತೆ ಸ್ಥಳೀಯ ನಗರ ಸಂಸ್ಥೆಗಳ ಬಜೆಟ್ ಮಾ.31 ರೊಳಗಾಗಿ ಮಂಡನೆ ಮಾಡಬೇಕು. ಆದರೆ, ಕೊಪ್ಪಳ ನಗರಸಭೆಯಲ್ಲಿ ಮಾತ್ರ ಈ ವರ್ಷ ಬಜೆಟ್ ಮಾಡುವುದನ್ನೇ ಮರೆತಿದೆ. ಇದು ಅಚ್ಚರಿಯಾದರೂ ಸತ್ಯ.
ಮಾ. 29ರ ವರೆಗೂ ಬಜೆಟ್ ಮಂಡನೆ ಆಗಿಲ್ಲ ಮತ್ತು ಮಾ.30, 31 ರಜೆ ಇರುವುದರಿಂದ ಈ ವರ್ಷ ಕೊಪ್ಪಳ ನಗರಸಭೆಯಲ್ಲಿ ಮಾ. 31 ರೊಳಗಾಗಿ ಬಜೆಟ್ ಮಂಡನೆ ಮಾಡಲು ಸಾಧ್ಯವೇ ಇಲ್ಲ.
ಕೊಪ್ಪಳ ನಗರಸಭೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಜೆಟ್ ಮಂಡನೆ ಮಾಡದೆ ಆರ್ಥಿಕ ವರ್ಷವೊಂದು ಬದಲಾಗುತ್ತಿರುವುದು ಇದೇ ಮೊದಲು ಎನ್ನುತ್ತಾರೆ ಸದಸ್ಯರು.
ಜಿಲ್ಲಾಧಿಕಾರಿಗಳಿಗೆ ದೂರು: ನಗರಸಭೆಯ ಬಜೆಟ್ ಮಂಡನೆ ಮಾಡಿ ಎಂದು ಅಧ್ಯಕ್ಷ ಅಮ್ಜದ್ ಪಟೇಲ್ ಅವರಿಗೂ ಸದಸ್ಯರು ದುಂಬಾಲು ಬಿದ್ದಿದ್ದಾರೆ. ಲಿಖಿತ ಮನವಿ ನೀಡಿದ್ದಾರೆ. ಆದರೂ ಬಜೆಟ್ ಮಂಡನೆಗೆ ಕರೆಯದೇ ಇರುವುದು ಹಲವಾರು ಚರ್ಚೆ ಹುಟ್ಟು ಹಾಕಿದೆ. ಅಷ್ಟಕ್ಕೂ ಬಜೆಟ್ ಸಭೆ ಕರೆಯದಿರುವುದಕ್ಕೆ ಕಾರಣವೇನು ಎನ್ನುವುದೇ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಸದಸ್ಯರು.
ಇದರಿಂದ ಬೇಸತ್ತ ಕೆಲ ಸದಸ್ಯರು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹಾಗೂ ಪೌರಾಯುಕ್ತ ಗಣಪತಿ ಪಾಟೀಲ ಅವರಿಗೆ ಮನವಿ ಮಾಡಿದರೂ ಕ್ಯಾರೆ ಎನ್ನದೇ ಇರುವುದರಿಂದ ಜಿಲ್ಲಾಧಿಕಾರಿಗಳಿಗೂ ಸಹ ದೂರು ಸಲ್ಲಿಸಿದ್ದಾರೆ.
ಬಜೆಟ್ ಮಂಡನೆ ಮಾಡದೆ ಆರ್ಥಿಕ ವರ್ಷದ ಹಣ ಬಳಕೆಗೆ ಅವಕಾಶ ಇರುವುದಿಲ್ಲ. ಇದು ತಾಂತ್ರಿಕ ಸಮಸ್ಯೆಗೂ ಕಾರಣವಾಗುತ್ತದೆ. ಆದರೆ, ಇದ್ಯಾವುದಕ್ಕೂ ಅಧ್ಯಕ್ಷ ಅಮ್ಜದ್ ಪಟೇಲ್ ಹಾಗೂ ಪೌರಾಯುಕ್ತ ಗಣಪತಿ ಪಾಟೀಲ ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಕಡ್ಡಾಯವೇನಲ್ಲ: ಬಜೆಟ್ ನ್ನು ಮಾರ್ಚ್ ಅಂತ್ಯದೊಳಗೆ ಮಾಡಬೇಕು ಎನ್ನುವುದು ಸಂಪ್ರದಾಯ. ಆದರೆ, ಅದು ಕಡ್ಡಾಯವೇನಲ್ಲ. ನಾವೆಲ್ಲ ಆ ದಿಸೆಯಲ್ಲಿ ಪ್ರಯತ್ನ ನಡೆಸಿದ್ದೇವೆ. ಶೀಘ್ರದಲ್ಲಿಯೇ ಮಾಡುತ್ತೇವೆ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್.
ಪೌರಾಯುಕ್ತರ ಗಣಪತಿ ಪಾಟೀಲ್ ಸಹ ಹೇಳುವುದು ಇದನ್ನೇ ಮಾರ್ಚ್ ಒಳಗಾಗಿಯೇ ಮಾಡಬೇಕು. ಹಾಗಂತ ಕಡ್ಡಾಯವೇನು ಅಲ್ಲ. ಏಪ್ರಿಲ್ ತಿಂಗಳಲ್ಲಿಯೂ ಬಜೆಟ್ ಮಾಡಿದ ಉದಾಹರಣೆಗಳು ಇವೆ ಎಂದು ಸಮಜಾಯಿಸಿ ನೀಡುತ್ತಾರೆ.
ಮಾರ್ಚ್ ಒಳಗೆ ಮಾಡಬೇಕು: ಬಜೆಟ್ ನ್ನು ಮಾರ್ಚ್ ಒಳಗೆ ಮಂಡನೆ ಮಾಡಬೇಕು. ನಂತರ ಮಾಡುವುದು ತಪ್ಪು. ಈ ಹಿಂದಿನಿಂದ ಮಾರ್ಚ್ ತಿಂಗಳ ಕೊನೆಯ ದಿನವಾದರೂ ಮಂಡನೆ ಮಾಡಿ, ಅನುಮತಿ ಪಡೆದಿದ್ದೇವೆ. ಈ ರೀತಿ ಬಜೆಟ್ ಮಾಡುವುದನ್ನೇ ಮುಂದೂಡುವುದು ಸರಿಯಲ್ಲ ಎನ್ನುತ್ತಾರೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಮಹೇಂದ್ರ ಛೋಪ್ರಾ.
ಈ ಕುರಿತು ಸಾಕಷ್ಟು ಹೇಳಿದ್ದೇವೆ, ಸದಸ್ಯರೆಲ್ಲವೂ ಮನವಿ ಮಾಡಿದ್ದೇವೆ. ಆದರೂ ಅಧ್ಯಕ್ಷ ಅಮ್ಜದ್ ಪಟೇಲ್ ಯಾಕೆ ಬಜೆಟ್ ಮಂಡನೆ ಮಾಡುತ್ತಿಲ್ಲ ಎನ್ನುವುದೇ ನಮಗೂ ಅರ್ಥವಾಗುತ್ತಿಲ್ಲ.
ಹೊಂದಾಣಿಕೆ ಸಮಸ್ಯೆ: ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹಾಗೂ ಪೌರಾಯುಕ್ತ ಗಣಪತಿ ಪಾಟೀಲ್ ನಡುವೆ ಹೊಂದಾಣಿಕೆ ಇಲ್ಲದೆ ಇರುವುದೇ ಬಜೆಟ್ ಮಂಡನೆ ಆಗದಿರುವುದಕ್ಕೆ ಕಾರಣ ಎನ್ನಲಾಗಿದೆ. ಇಬ್ಬರ ನಡುವೆ ಶೀತಲ ಸಮರ ಇರುವುದರಿಂದ ಬಜೆಟ್ ಸೇರಿದಂತೆ ಯಾವೊಂದು ಕಾರ್ಯವೂ ಸಮಯನುಸಾರ ಆಗುತ್ತಿಲ್ಲ ಎನ್ನಲಾಗುತ್ತಿದೆ.
ಬಜೆಟ್ ನ್ನು ಮಾರ್ಚ್ ಒಳಗೆ ಇದುವರೆಗೂ ಮಾಡಲಾಗುತ್ತಿದೆ. ಈ ವರ್ಷ ಮಾಡಿ ಎಂದು ಮನವಿ ಮಾಡಿದರೂ ಮಾಡದೆ ಇರುವುದು ಅಚ್ಚರಿಗೆ ಕಾರಣವಾಗಿದೆ ಎಂದು ನಗರಸಭೆ ಸದಸ್ಯ ಮಹೇಂದ್ರ ಛೋಪ್ರಾ ಹೇಳಿದರು.
ಬಜೆಟ್ ಮಂಡನೆ ಮಾಡಬೇಕಾಗಿತ್ತು. ಮಾಡಿಲ್ಲ. ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ ಹೇಳಿದರು.
ಬಜೆಟ್ ಮಂಡನೆಗೆ ತಯಾರಿ ಮಾಡುತ್ತಿದ್ದೇವೆ.ಮಾರ್ಚ್ ಒಳಗೆ ಮಾಡಬೇಕು ಎಂದೇನೂ ಇಲ್ಲ, ಆದಷ್ಟು ಬೇಗನೇ ಮಾಡುತ್ತೇವೆ ಎಂದು ಕೊಪ್ಪಳನಗರಸಭೆ
ಅಧ್ಯಕ್ಷ ಅಮ್ಜದ್ ಪಟೇಲ್ ತಿಳಿಸಿದ್ದಾರೆ.
ನಾವು ನಗರಸಭೆ ಸದಸ್ಯರೇ ಆಗಿದ್ದೇವೆ ಎನ್ನುವುದನ್ನು ಮರೆತಿದ್ದೇವೆ. ಅಲ್ಲಿ ಏನು ಉಪಯೋಗ ಇಲ್ಲವೇ ಇಲ್ಲ. ಯಾವಾಗ ಬಜೆಟ್ ಮಾಡುತ್ತಾರೆ ಎನ್ನುವುದನ್ನು ನಾವು ಕಾದು ನೋಡುತ್ತೇವೆ ಎಂದು ನಗರಸಭೆ ಸದಸ್ಯ ಅಜೀಮ್ ಅತ್ತಾರ ಹೇಳಿದರು.
ಫೆಬ್ರುವರಿ ತಿಂಗಳಲ್ಲಿಯೇ ಮಾಡುವಂತೆ ಮನವಿ ಮಾಡಿದರೂ ಮಾಡುತ್ತಿಲ್ಲ. ಹೇಳಿ ಹೇಳಿ ಸಾಕಾಗಿ, ಸುಮ್ಮನಾಗಿದ್ದೇವೆ ಎಂದು ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ ಹೇಳಿದರು.