ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣದ ಕುರಿತು ಯಾವುದೇ ಮನವಿ ಬಂದಿಲ್ಲ: ಸಂಸದಕನ್ನಡಪ್ರಭ ವಾರ್ತೆ ಕೊಪ್ಪಳ
ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಮರು ನಾಮಕರಣ ಮಾಡಬೇಕು ಎನ್ನುವ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ. ಈ ಕುರಿತು ಚರ್ಚೆ ಮಾಡಲು ಕೊಪ್ಪಳ ವರ್ತಕರ ಸಂಘ ಬುಧವಾರ ಕರೆದಿದ್ದ ಸಭೆ ದಿಢೀರ್ ರದ್ದಾಗಿದ್ದು, ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.ಸಭೆ ನಿಗದಿ ಮಾಡಿ ಹೇಳಿಕೆ ಬಿಡುಗಡೆ ಮಾಡಿದ್ದ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ನಾಲ್ವಡ ಅವರೇ ಮರು ಹೇಳಿಕೆ ಬಿಡುಗಡೆ ಮಾಡುವ ಮೂಲಕ ಸಭೆಯನ್ನು ರದ್ದು ಮಾಡಿದ್ದಾರೆ.
ಏನಿದು ವಿವಾದ:ಹುಲಿಗಿ, ಗಂಗಾವತಿ, ಭಾನಾಪೂರ ರೈಲ್ವೆ ನಿಲ್ದಾಣಕ್ಕೆ ಮರು ನಾಮಕರಣ ಮಾಡುವುದಕ್ಕೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಕೊಪ್ಪಳವನ್ನೇ ಕೈಬಿಟ್ಟಿದ್ದರು. ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣ ಮಾಡುವ ಕುರಿತು ಯಾವುದೇ ಮನವಿ ಬಂದಿಲ್ಲವಾದ್ದರಿಂದ ಪ್ರಸ್ತಾವನೆ ಕಳುಹಿಸಿಲ್ಲ ಎಂದು ಹೇಳಿಕೆ ನೀಡಿದ್ದರು.
ಇದು ಹಲವಾರು ಚರ್ಚೆ ಹುಟ್ಟುಹಾಕುವಂತೆ ಮಾಡಿತ್ತು. ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಹೆಸರು ನಾಮಕರಣ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಭಕ್ತರು ಅಭಿಯಾನ ನಡೆಸಿದ್ದಾರೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರು ನಾಮಕರಣ ಮಾಡಿದ ವೇಳೆಯಲ್ಲಿ ಈ ಕುರಿತು ದೊಡ್ಡ ಕೂಗು ಎದ್ದಿತ್ತು. ಆದರೂ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರ ಹೇಳಿಕೆ ಭಾರಿ ಚರ್ಚೆಯನ್ನೇ ಹುಟ್ಟು ಹಾಕಿತು.ಹೀಗಾಗಿ, ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಹಲವು ಹೆಸರುಗಳು ಪ್ರಸ್ತಾಪಗಳು ಬರಲಾರಂಭಿಸಿದವು. ಸಾಮ್ರಾಟ ಅಶೋಕ, ಜೈನಕಾಶಿ, ಮುಂಡರಗಿ ಭೀಮರಾಯ, ಕೆಲವರು ಕೊಪ್ಪಳವೇ ಇರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಪ್ರಾರಂಭಿಸಿದರು. ಇದರ ಜೊತೆಗೆ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಶ್ರೀ ಗವಿಸಿದ್ಧೇಶ್ವರ ಎಂದು ಮರುನಾಮಕರಣ ಮಾಡಬೇಕು ಎನ್ನುವ ಕೂಗು ದೊಡ್ಡದಾಯಿತು.
ಹೀಗಾಗಿಯೇ ಈ ಕುರಿತು ಒತ್ತಾಯ ಮಾಡಲು ನಗರದ ಮಧುಶ್ರೀ ಗಾರ್ಡನ್ ನಲ್ಲಿ ವರ್ತಕರ ಸಂಘ ಹಾಗೂ ವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಲು ಸರ್ವಾನುಮತದ ತೀರ್ಮಾನ ಮಾಡಲು ಸಹ ಅನೇಕ ಮುಖಂಡರು ಸೇರಿ, ಪ್ರತ್ಯೇಕವಾಗಿ ಸಭೆ ನಡೆಸಿ, ಚರ್ಚೆಸಿದ್ದರು. ಆದರೆ, ಏನಾಯಿತು ಗೊತ್ತಿಲ್ಲ. ದಿಢೀರ್ ರದ್ದು ಮಾಡಲಾಗಿದೆ. ಆದರೆ, ಇದುವರೆಗೂ ಶ್ರೀಮಠದಿಂದ ಈ ಚರ್ಚೆಯ ಕುರಿತು ಹೇಳಿಕೆ ನೀಡಿಲ್ಲ.