ಸೋಮರಡ್ಡಿ ಅಳವಂಡಿ ಕೊಪ್ಪಳ
ಹೊಸಪೇಟೆ ರಸ್ತೆಯ ಅಗಡಿ ಲೇ ಔಟ್‌ನಲ್ಲಿ ವಿಧಾನಸೌಧ ಮಾದರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ, ಬಿಗಿ ಭದ್ರತೆ ಒದಗಿಸಲಾಗಿದೆ. ಇದಕ್ಕಾಗಿ ನಗರದಾದ್ಯಂತ ಬ್ಯಾನರ್, ಬಂಟಿಗ್ಸ್, ಪ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ರಾಜಕೀಯ ನಾಯಕರು ಪೈಪೋಟಿಯಲ್ಲಿ ಬ್ಯಾನರ್ ಹಾಕಿಸಿಕೊಂಡು ತಮ್ಮ ನಾಯಕರ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ ಸೇರಿದಂತೆ ಹತ್ತಾರು ಸಚಿವರು ಭಾಗಿಯಾಗಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ ಕೋರ್ಟ್ ಕೆಲಸ ನಿಮಿತ್ತ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ.ಏನೇನು ಕಾರ್ಯಕ್ರಮ?:ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ₹2005 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 34 ವಸತಿ ನಿಲಯಗಳು ಹಾಗೂ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಕ್ಕೆ 2 ವಸತಿ ನಿಲಯಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತಳಕಲ್‌ನಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ, ಕುಕನೂರು, ಯಲಬುರ್ಗಾ, ಕನಕಗಿರಿ ತಾಲೂಕು ಕೇಂದ್ರಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ, ಕೊಪ್ಪಳ ಕಿಮ್ಸ್ ಆಸ್ಪತ್ರೆಯ ಉದ್ಘಾಟನೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ, ಗಂಗಾವತಿ ತಾಲೂಕಿನ 27 ಕೆರೆ ತುಂಬಿಸುವ ಯೋಜನೆಗೆ ಭೂಮಿಪೂಜೆ, ಕನಕಗಿರಿ ತಾಲೂಕಿನ ಶಿರವಾರದಲ್ಲಿ ಹೈಟೆಕ್ ತೋಟಗಾರಿಕಾ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿದಂತೆ ಹತ್ತು ಹಲವು ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಭದ್ರತೆಗಾಗಿ ಕ್ಯಾಮೆರಾ: ಮುಖ್ಯ ಹಾಗೂ ಸಮಾನಾಂತರ ಮೂರು ಬೃಹತ್ ವೇದಿಕೆಯಲ್ಲಿ ಸುರಕ್ಷತೆಗೆ ಅನುಕೂಲವಾಗುವಂತೆ ಎಲ್ಲ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಸವಲತ್ತು ವಿತರಣೆ: ಬೃಹತ್ ಪ್ರಮಾಣದಲ್ಲಿ ಕೃಷಿ, ತೋಟಗಾರಿಕಾ ಹಾಗೂ ಇನ್ನಿತರ ಸಲಕರಣೆ ಮತ್ತು ಯಂತ್ರಗಳನ್ನು ವೇದಿಕೆಯ ಪಕ್ಕದಲ್ಲಿ ಇಡಲಾಗಿದ್ದು, ಈ ಸವಲತ್ತು ವಿತರಣೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.
ಮುಖ್ಯಮಂತ್ರಿ ಈಗಲಾದರೂ ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಗಿತಕ್ಕೆ ತಾವು ಮಾಡಿರುವ ಮೌಖಿಕ ಆದೇಶವನ್ನು ಲಿಖಿತ ರೂಪದಲ್ಲಿ ಮಾಡುವ ಮೂಲಕ ಕೊಪ್ಪಳ ಜಿಲ್ಲೆಯ ಜನರ ಹಿತ ಕಾಯುವಂತೆ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸ್ವಾಗತಕ್ಕೆ ಮತ್ತು ವೇದಿಕೆಯ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಕ್ಷಕ್ಕೂ ಅಧಿಕ ಜನರು ಸೇರಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.