ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊಪ್ಪಳ ಚೇತರಿಕೆ

KannadaprabhaNewsNetwork |  
Published : Apr 24, 2026, 01:00 AM IST
ಸಸಸಸ | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಫಲಿತಾಂಶ ಸುಧಾರಣೆಗಾಗಿಯೇ ಅತ್ಯಂತ ಕಡಿಮೆ ಫಲಿತಾಂಶ ಇರುವ ಕೊಪ್ಪಳ ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ ದತ್ತು ಪಡೆದಿದ್ದರು.

ಸೋಮರಡ್ಡಿ ಅಳವಂಡಿ ಕೊಪ್ಪಳ

ಹಲವಾರು ಸುಧಾರಣೆ ಕ್ರಮ, ದತ್ತು ಯೋಜನೆ ಮತ್ತು ಮಿಷನ್ 40 ಕೈ ಹಿಡಿದಿದ್ದರಿಂದ ಕೊಪ್ಪಳ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳೆದ ಬಾರಿಗಿಂತಲೂ ಸುಧಾರಣೆಯಾಗಿದ್ದು, ಸ್ಥಾನದಲ್ಲಿಯೂ 30ರಿಂದ 25ಕ್ಕೆ ಜಿಗಿತ ಕಂಡಿದೆ.

ಗುರುವಾರ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಶೇ. ೯೩ರಷ್ಟು ತೇರ್ಗಡೆಯಾಗುವ ಮೂಲಕ ರಾಜ್ಯದಲ್ಲಿ 25ನೇ ಸ್ಥಾನ ಪಡೆದಿದ್ದಾರೆ. ರಾಜ್ಯಮಟ್ಟದಲ್ಲಿ ಐದು ಸ್ಥಾನ ಸುಧಾರಣೆಯಾಗಿದೆ. ಪ್ರಸಕ್ತ ವರ್ಷ ಮೊದಲ ಪರೀಕ್ಷೆಯಲ್ಲಿ ೨೧೪೩೩ ವಿದ್ಯಾರ್ಥಿಗಳು ಹಾಜರಾಗಿ, ೧೯೮೦೨ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಮೂಲಕ ಶೇ. 93ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದೇ ಮೊದಲ ಬಾರಿಗೆ ಜಿಲ್ಲೆಯ ಫಲಿತಾಂಶ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂದಿದೆ.

ನೂರಕ್ಕೆ ನೂರು ಫಲಿತಾಂಶ: ೯೬ ಪ್ರೌಢಶಾಲೆಗಳು ಶೇ. ೧೦೦ರಷ್ಟು ಫಲಿತಾಂಶ ಪಡೆಯುವ ದಾಖಲೆ ಬರೆದಿವೆ. ಇದೇ ಮೊದಲ ಬಾರಿ ಶೇ. 100ರಷ್ಟು ಫಲಿತಾಂಶ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು. ಸರ್ಕಾರಿ ಪ್ರೌಢಶಾಲೆಗಳ ಪೈಕಿ 34, ಅನುದಾನಿತ ಪ್ರೌಢಶಾಲೆಗಳ ಪೈಕಿ 5, ಅನುದಾನರಹಿತ ಶಾಲೆಗಳ ಪೈಕಿ 39 ಹಾಗೂ ವಸತಿ ಶಾಲೆಗಳಲ್ಲಿ 18 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದಿರುವುದು ದಾಖಲೆಯೇ ಸರಿ.

ಯಲಬುರ್ಗಾ (ಶೇ. ೯೫.೧೪), ಗಂಗಾವತಿ (ಶೇ. ೯೨.೮೮), ಕುಷ್ಟಗಿ (ಶೇ. ೯೨.೪೫), ಕೊಪ್ಪಳ (ಶೇ. ೮೯.೫೩) ಫಲಿತಾಂಶ ಪಡೆದಿದ್ದು, ಕಳೆದ ಬಾರಿಯಂತೆ ಯಲಬುರ್ಗಾ ಪ್ರಥಮ ಇದ್ದರೆ ಕೊಪ್ಪಳ ತಾಲೂಕು ಕೊನೆಯ ಸ್ಥಾನದಲ್ಲಿದೆ.

ಸುಧಾರಣೆಗೆ ನಾನಾ ಕ್ರಮ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಮಾಡಬೇಕು ಎಂದು ಈ ಬಾರಿ ಹಲವಾರು ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಮಿಷನ್ 40 ಎನ್ನುವ ಯೋಜನೆ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಕನಿಷ್ಠ ಪಾಸ್ ಆಗುವುದಕ್ಕೆ ಬೇಕಾಗುವಷ್ಟು ಪಠ್ಯ ಮಕ್ಕಳಿಗೆ ಮನವರಿಕೆ ಮಾಡಲಾಯಿತು.

ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಸ್ಫೂರ್ತಿ ನಡೆ ಎನ್ನುವ ಕಾರ್ಯಕ್ರಮ ಹಾಕಿಕೊಂಡಿದ್ದು, ಅಲ್ಲದೆ ದಿನಕ್ಕೊಂದು ಪ್ರಶ್ನೆ, ವಾರಕ್ಕೊಂದು ಪ್ರಶ್ನೆ ಹಾಗೂ ಬೋರ್ಡ್‌ನಿಂದ ನಡೆಸಲಾದ ಪೂರ್ವಸಿದ್ಧತಾ ಪರೀಕ್ಷೆ, ಆನ್‌ಲೈನ್ ಕ್ಲಾಸ್ ಸೇರಿದಂತೆ ಹಲವಾರು ರೀತಿಯಲ್ಲಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಲಾಯಿತು. ಅಲ್ಲದೇ ಕನ್ನಡಪ್ರಭ- ಏಷಿಯಾ ನೆಟ್‌ ಸುವರ್ಣ ವಾಹಿಸಿ ನಡೆಸಿದ ಪರೀಕ್ಷಾ ಭಯ ನಿವಾರಣೆ ಶಿಬಿರ ಇತ್ಯಾದಿಗಳು ಫಲಿತಾಂಶ ಸುಧಾರಣೆಗೆ ಸಹಕಾರಿಯಾದವು ಎಂದು ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ತಿಳಿಸಿದ್ದಾರೆ.

ಡಿಸಿ ದತ್ತು ಪಡೆದ ಶಾಲೆಗೆ ಬಂಪರ್ ಫಲಿತಾಂಶ: ಕೊಪ್ಪಳ ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಫಲಿತಾಂಶ ಕಳೆದ ವರ್ಷ ಅಧೋಗತಿಗೆ ಹೋಗಿತ್ತು. ಇದು ಕಳೆದ ಐದು ವರ್ಷಗಳಿಂತಲೂ ಜಿಲ್ಲೆಯಲ್ಲಿಯೇ ಅತ್ಯಂತ ಕಳಪೆ ಫಲಿತಾಂಶಕ್ಕೆ ಈ ಶಾಲೆ ಹೆಸರಾಗಿತ್ತು. ಆದರೆ, ಈ ವರ್ಷ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಫಲಿತಾಂಶ ಸುಧಾರಣೆಗಾಗಿಯೇ ಅತ್ಯಂತ ಕಡಿಮೆ ಫಲಿತಾಂಶ ಇರುವ ಕೊಪ್ಪಳ ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ ದತ್ತು ಪಡೆದಿದ್ದರು. ಹೀಗಾಗಿ ಈ ವರ್ಷ ಫಲಿತಾಂಶ ಭರ್ಜರಿ ಬಂದಿದೆ.

ಕಳೆದ ವರ್ಷ ಕೇವಲ ಶೇ. 29 ವಿದ್ಯಾರ್ಥಿಗಳು ಮಾತ್ರ ಪ್ರಥಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಆದರೆ, ಈ ವರ್ಷ ಪ್ರಥಮ ಪರೀಕ್ಷೆಯಲ್ಲಿ 80 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಪರೀಕ್ಷೆಗೆ ಹಾಜರಾದ 94 ವಿದ್ಯಾರ್ಥಿಗಳ ಪೈಕಿ 76 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 18 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. ಈ ಶಾಲೆಯ ಫಲಿತಾಂಶ ಸುಧಾರಣೆಗಾಗಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅನೇಕ ಬಾರಿ ಭೇಟಿ ನೀಡಿದ್ದರು. ಮಕ್ಕಳೊಂದಿಗೆ ಚರ್ಚೆ ಮಾಡಿ ಮಕ್ಕಳಲ್ಲಿ ವಿಶ್ವಾಸ ಹೆಚ್ಚಿಸಿದ್ದರು. ಅಲ್ಲದೆ ಕಾಲಕಾಲಕ್ಕೆ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಕೈಗೊಂಡು ಕ್ರಮಗಳ ಬಗ್ಗೆಯೂ ಚರ್ಚೆ ಮಾಡಿ ಮಾರ್ಗದರ್ಶನ ಮಾಡಿದ್ದರು.

ಫಲಿತಾಂಶ ಸುಧಾರಣೆಗಾಗಿ ದತ್ತು ತೆಗೆದುಕೊಳ್ಳುವ ಕುರಿತು ಸಭೆಯಲ್ಲಿ ಚರ್ಚೆಯಾದಾಗ ನನಗೊಂದು ಶಾಲೆ ಕೊಡಿ, ಅದು ಅತಿ ಕಡಿಮೆ ಫಲಿತಾಂಶ ಇರುವ ಶಾಲೆ ಕೊಡಿ ಎಂದು ಖುದ್ದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಕೇಳಿ ಪಡೆದಿದ್ದರು. ಈಗ ಈ ಶಾಲೆ ಹಿಂದಿನ ಎಲ್ಲ ದಾಖಲೆ ಮೀರಿ ಅತ್ಯುತ್ತಮ ಫಲಿತಾಂಶ ಬಂದಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಮಾಹೆರಾ ಎನ್ನುವ ವಿದ್ಯಾರ್ಥಿನಿ 552 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಅನುಷಾ ಎಸ್‌ಎಫ್‌ಎಸ್‌ ಶಾಲೆ, ಕುಕನೂರು 622 ಶೇ. 92.52

ನಾಗರಾಜ ಎಂಡಿಆರ್‌ಎಸ್‌ ಶಾಲೆ, ಕನಕಗಿರಿ 621 (99.36)

ಶ್ವೇತಾ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ತಳಕಲ್621 (99.36)

ಶುಭಪ್ರಿಯಾ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ಹೊಸಳ್ಳ 620 (99.20)

ಅಭಿ ಹನುಕುಂಟಿ ಎಂಡಿಆರ್‌ಎಸ್‌ ಕಾಟಾಪುರ 620(99.20)

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯಾಗಿದೆಯಾದರೂ ಇನ್ನು ಅಗಬೇಕಾಗಿತ್ತು ಎನ್ನುವ ಕೊರಗು ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅನುಸರಿಸಿದ ಕ್ರಮಗಳಿಂದ ಉತ್ತಮ ಫಲಿತಾಂಶ ಬಂದಿದೆ ಎಂದು ಕೊಪ್ಪಳ ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿಜಯನಗರ ಜಿಲ್ಲೆ 10 ಸ್ಥಾನಕ್ಕೆ ಏರಿಕೆ
ಹರಪನಹಳ್ಳಿ ತಾಲೂಕಿಗೆ ಶೇ.96.33 ಫಲಿತಾಂಶ; ಜಿಲ್ಲೆಗೆ ಮೂರನೇ ಸ್ಥಾನ