ಕನ್ನಡಪ್ರಭ ವಾರ್ತೆ ಕೊರಟಗೆರೆ
ರಾಮನಗರದ ೪೦ ಜನ ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಐಜೂರು ಪೊಲೀಸ್ ಠಾಣೆಯ ಪಿಎಸ್‌ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿ ಸುಳ್ಳು ಪ್ರಕರಣವನ್ನು ರದ್ದುಪಡಿಸುವಂತೆ ಇಲ್ಲಿನ ವಕೀಲರ ಸಂಘದ ವತಿಯಿದಿಂದ ಸೋಮವಾರ ಪ್ರತಿಭಟನೆ ನಡೆಸಿ ಒತ್ತಾಯ ಮಾಡಿದರು.ಪಟ್ಟಣದ ಸಿವಿಲ್ ಜೆಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆವರಣದಿಂದ ತಾಲೂಕು ಕಚೇರಿಯವರೆಗೆ ವಕೀಲರ ಸಂಘದ ೩೦ಕ್ಕೂ ಅಧಿಕ ವಕೀಲರು ಕಾಲ್ನಡಿಗೆಯಲ್ಲಿ ಆಗಮಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೊರಟಗೆರೆ ವಕೀಲರ ಸಂಘದ ಹಿರಿಯ ವಕೀಲ ಟಿ. ಕೃಷ್ಣಮೂರ್ತಿ ಮಾತನಾಡಿ, ಜ್ಞಾನವ್ಯಾಪಿ ದೇವಾಲಯದ ವಿಚಾರದಲ್ಲಿ ಲಕ್ನೋ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ವಿರುದ್ಧ ವಕೀಲ ಚಾಂದುಪಾಷ ಕೆಟ್ಟ ಮಾತುಗಳಿಂದ ನಿಂದಿಸಿದ್ದ ಪರಿಣಾಮ ವಕೀಲರ ಸಂಘದಿಂದ ಅಮಾನತು ಮಾಡಲಾಗಿದೆ. ಐಜೂರು ಪಿಎಸ್‌ಐ ತನ್ವಿರ್ ಹುಸೇನ್ ತನಿಖೆ ನಡೆಸದೇ ಸುಳ್ಳು ಪ್ರಕರಣ ದಾಖಲಿಸಿ ವಕೀಲರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಪಿಎಸೈ ಅಮಾನತು ಮಾಡಿ ಸುಳ್ಳು ಪ್ರಕರಣ ರದ್ದು ಮಾಡಬೇಕು ಎಂದು ಆಗ್ರಹ ಮಾಡಿದರು.ಹಿರಿಯ ವಕೀಲ ಸಂಜೀವರಾಜು ಮಾತನಾಡಿ, ಪಿಎಸ್‌ಐ ತನ್ವಿರ್ ಹುಸೇನ್ ವಿರುದ್ದ ವಕೀಲರ ಸಂಘದಿಂದ ನಮ್ಮ ರಾಜ್ಯಾದ್ಯಂತ ಪ್ರತಿಭಟನೆ ನಡೆತಿದೆ. ೪೦ಜನ ವಕೀಲರ ಮೇಲೆ ಸುಳ್ಳು ಪ್ರಕರಣದ ಮಾಹಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕಿದೆ. ವಕೀಲರಿಗೆ ಭದ್ರತೆ ನೀಡಬೇಕಾದ ಪೊಲೀಸರ ವರ್ತನೆ ಖಂಡನೀಯ. ಪಿಎಸ್‌ಐ ರನ್ನು ಅಮಾನತು ಮಾಡಿ ಕೆಲಸದಿಂದ ವಜಾ ಮಾಡಬೇಕು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಶಿವರಾಮಯ್ಯ, ನಾಗೇಂದ್ರಪ್ಪ, ಜಿ.ಎಂ. ಕೃಷ್ಣಮೂರ್ತಿ, ಪುಟ್ಟರಾಜು, ವಕೀಲರಾದ ರಾಮಚಂದ್ರಯ್ಯ, ಸಂತೋಷ್, ನರಸಿಂಹರಾಜು, ಮಧುಸೂಧನ್, ವೃಷಬೇಂದ್ರಸ್ವಾಮಿ, ಅನಿಲ್, ದೇವರಾಜು, ಮಂಜುನಾಥ, ತಿಮ್ಮರಾಜು, ಕೃಷ್ಣಪ್ಪ, ವಿನೋದ್, ನಾಗೇಂದ್ರಪ್ಪ, ತಿಮ್ಮೇಶ್, ಅನಂತರಾಜು, ಸುನೀಲ್, ಲಕ್ಷ್ಮೀಸಂತೋಷ್, ಅರುಂಧತಿ, ಶಿಲ್ಪಾ, ಕೆಂಪಲಕ್ಷ್ಮಮ್ಮ ಸೇರಿದಂತೆ ಇತರರು ಇದ್ದರು.ಫೋಟೊ
ರಾಮನಗರದ ಐಜೂರು ಪಿಎಸ್ಐ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕೊರಟಗೆರೆ ವಕೀಲರ ಸಂಘ.