ಕೋಟ: ಹಾಡಿಕೆರೆ ಶನೀಶ್ವರ ದೇಗುಲದ ನೂತನ ಸಭಾಭವನ ಲೋಕಾರ್ಪಣೆ

KannadaprabhaNewsNetwork | Published : Feb 23, 2025 12:37 AM

ಸಾರಾಂಶ

ಕೋಟದ ಶ್ರೀ ಶಾಂತಮೂರ್ತಿ ಶನೀಶ್ವರ ದೇಗುಲದ ನೂತನ ಸಭಾಭವನವನ್ನು ಹರಿಹರಪುರ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳು ಸಭಾಭವನ ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಮಾನವ ಜನ್ಮ ಎಲ್ಲ ಜೀವಿಗಳಿಗಿಂತ ಶ್ರೇಷ್ಠವಾದದ್ದು, ಅದನ್ನು ಸಮಾಜ ಸೇವೆಯ ಮೂಲಕ ಸದ್ವಿನಿಯೋಗ ಮಾಡಿ, ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಹರಿಹರಪುರ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳು ಕರೆ ನೀಡಿದರು.ಅವರು ಇಲ್ಲಿನ ಕೋಟದ ಶ್ರೀ ಶಾಂತಮೂರ್ತಿ ಶನೀಶ್ವರ ದೇಗುಲದ ನೂತನ ಸಭಾಭವನ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ ದೊಡ್ಡ ಕೊಡುಗೆ ಎಂದರೆ ಶಾಂತಿ ಮಂತ್ರ. ಅದನ್ನು ಮನಗಂಡು ಪ್ರತಿ ವ್ಯಕ್ತಿಯನ್ನು ಪ್ರೀತಿಸುವ, ಸ್ನೇಹ ಸಂಬಂಧ ವೃದ್ಧಿಸುವ ಸಮಾಜ ನಿರ್ಮಾಣಗೊಳ್ಳಬೇಕು. ಭಗವಂತನಿಗೆ ಅತಿ ಹತ್ತಿರವಾಗುವ ಕಾರ್ಯವನ್ನು ಮಾಡಬೇಕು, ಅದು ಈ ಕ್ಷೇತ್ರದಲ್ಲಿ ಕಾಣುತಿದ್ದೇವೆ ಎಂದರು.

ಇದೇ ವೇಳೆ ಪಾಕಶಾಲೆಯನ್ನು ಉದ್ಯಮಿ ಡಾ.ಗೋವಿಂದಬಾಬು ಪೂಜಾರಿ ಉದ್ಘಾಟಿಸಿದರು. ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ದೇಗುಲದ ಧರ್ಮದರ್ಶಿ ಕೆ.ಭಾಸ್ಕರ್ ಸ್ವಾಮಿ ವಹಿಸಿದ್ದರು.ಸಭಾಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಆನಂದ್ ಸಿ. ಕುಂದರ್, ಡಾ.ಗೋವಿಂದಬಾಬು ಪೂಜಾರಿ, ದೇಗುಲದಲ್ಲಿ ಕಾರ್ಯನಿರ್ವಹಿಸುವ ಗೌರಿ ಅಜ್ಜಿ ಅವರನ್ನು ಗೌರವಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮುಜರಾಯಿ ಇಲಾಖೆಯ ಆಪ್ತ ಸಹಾಯಕ ಶಂಕರ್ ಶೆಟ್ಟಿ, ಜನತಾ ಸಂಸ್ಥೆ ನಿರ್ದೇಶಕ ಪ್ರಶಾಂತ್ ಎ. ಕುಂದರ್, ಉದ್ಯಮಿಗಳಾದ ಸತೀಶ್ ಶೆಟ್ಟಿ, ಕೆ.ಆರ್. ನಾಯಕ್, ನೇರಳಕಟ್ಟೆ ಗಿರಿ ಕ್ಷೇತ್ರದ ಧರ್ಮದರ್ಶಿ ಶಂಕರ್ ಪೈ, ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಬಿ. ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ ಕುಂದರ್ ಉಪಸ್ಥಿತರಿದ್ದರು.ಉತ್ಸವ ಸಮಿತಿಯ ಪ್ರಮುಖ ದಿನೇಶ್ ಗಾಣಿಗ ಸ್ವಾಗತಿಸಿ ಪ್ರಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಂಜುನಾಥ್ ನಿರೂಪಿಸಿದರು. ದೇಗುಲದ ಪ್ರಧಾನ ಅರ್ಚಕ ಜಯರಾಜ ಸಾಲಿಯಾನ್ ವಂದಿಸಿದರು.

Share this article