ಕೋಟನೂರ್‌ ಅಂಬೇಡ್ಕರ್‌ ಪ್ರತಿಮೆ ಅಪಮಾನ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ಯತ್ನ: ಆಂದೋಲಾ ಶ್ರೀ

KannadaprabhaNewsNetwork |  
Published : Aug 01, 2024, 12:17 AM IST
ಫೋಟೋ- ಆಂದೋಲಾ | Kannada Prabha

ಸಾರಾಂಶ

ಕೋಟನೂರ್‌ ಅಂಬೇಡ್ಕರ್‌ ಪ್ರತಿಮೆ ಅಮಾನ ಪ್ರಕರಣಕ್ಕೂ ಮಗೂ ಸಂಬಂಧವೇ ಇಲ್ಲ. ಆ ದಿನ ತಾವು ಕಲಬುರಗಿಯಿಂದ ರಾತ್ರಿ ಜೇವರ್ಗಿ ಮಾರ್ಗವಾಗಿ ಆಂದೋಲಾಕ್ಕೆ ಹೋಗಿದ್ದನ್ನೇ ಬಂಡವಾಳ ಮಾಡಿಕೊಂಡು ಈ ರೀತಿ ಸಂಚು ರೂಪಿಸಲಾಗಿದೆ. ಇದಕ್ಕೆ ಪ್ರಕರಣದ ತನಿಖಾಧಿಕಾರಿ ರಾಜಣ್ಣ ಕಾರಣ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಹೊರ ವಲಯ ಕೋಟನೂರಲ್ಲಿ ಕಳೆದ ಜ.22ರಂದು ನಡೆದಿರುವ ಅಂಬೇಡ್ಕರ್‌ ಪ್ರತಿಮೆ ಅಪಮಾನ ಪ್ರಕರಣದಲ್ಲಿ ವಿನಾಕಾರಣ ತಮ್ಮನ್ನು ಸಿಲುಕಿಸಲು ಎಸಿಪಿ ದರ್ಜೆಯ ಪೊಲೀಸ್‌ ಅಧಿಕಾರಿಯೊಬ್ಬರು ಹುನ್ನಾರ ಮಾಡಿದ್ದಾರೆಂದು ದೂರಿರುವ ಆಂದೋಲಾ ಸಿದ್ದಲಿಂಗ ಶ್ರೀಗಳು ಅವರ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಕೋಟನೂರ್‌ ಅಂಬೇಡ್ಕರ್‌ ಪ್ರತಿಮೆ ಅಮಾನ ಪ್ರಕರಣಕ್ಕೂ ಮಗೂ ಸಂಬಂಧವೇ ಇಲ್ಲ. ಆ ದಿನ ತಾವು ಕಲಬುರಗಿಯಿಂದ ರಾತ್ರಿ ಜೇವರ್ಗಿ ಮಾರ್ಗವಾಗಿ ಆಂದೋಲಾಕ್ಕೆ ಹೋಗಿದ್ದನ್ನೇ ಬಂಡವಾಳ ಮಾಡಿಕೊಂಡು ಈ ರೀತಿ ಸಂಚು ರೂಪಿಸಲಾಗಿದೆ. ಇದಕ್ಕೆ ಪ್ರಕರಣದ ತನಿಖಾಧಿಕಾರಿ ರಾಜಣ್ಣ ಕಾರಣ ಎಂದು ದೂರಿದರು.

ತಾವು ಈಚೆಗೆ ಕೋಟನೂರ್‌ನಲ್ಲಿ ನಡೆದ ದಾಂಧಲೆಯಲ್ಲಿ ಹಲ್ಲೆಗೊಳಗಾಗಿರುವ ಸಂಗಮೇಶ ಪಾಟೀಲರ ಮನೆಗೆ ಪ್ರಮೋದ ಮುತಾಲಿಕ ಹಾಗೂ ಗಂಗಾಧರ ಕುಲಕರ್ಣಿಯವರೊಂದಿಗೆ ಹೋದಾಗ ಸಂಗಮೇಶ ಪಾಟೀಲರೇ ಈ ಸಂಗತಿ ಬಾಯಿ ಬಿಟ್ಟಿದ್ದಾರೆ. ಸಂಗಮೇಶ ಹೇಳಿಕೆಯ ವಿಡಿಯೋ ಸಾಕ್ಷಿ ತಮ್ಮ ಬಳಿ ಇದೆ. ಅದನ್ನು ಡಿಜಿಪಿಯವರಿಗೂ ಪತ್ರದ ಜೊತೆ ಲಗತ್ತಿಸಲಾಗಿದೆ ಎಂದರು.

ಅಂಬೇಡ್ಕರ್‌ ಅಪಮಾನ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ರಾಜಣ್ಣ ಸಂಗಮೇಶರನ್ನು ಬಂಧಿಸಿ ವಿಚಾಣೆಗೊಳಪಡಿಸಿದ್ದರು, ಆಗ ಅಪಮಾನ ಪ್ರಕರಣದ ಹಿಂದೆ ಆಂದೋಲಾ ಸ್ವಾಮೀಜಿ ಕುಮ್ಮಕ್ಕಿದೆ ಎಂದು ಹೇಳುವಂತೆ ಆಗ್ರಹಿಸಿ ವಿಪರೀತ ದೈಹಿಕ, ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ಮಹಾ ನಾಯಕರ ಪುತ್ಥಳಿ ಅಪಮಾನ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಿ ಸಮಾಜದಲ್ಲಿ ಇನ್ನಷ್ಟು ಅಶಾಂತಿ ಹುಟ್ಟು ಹಾಕಲು ಪೊಲೀಸ್‌ ಅಧಿಕಾರಿ ಸಂಚು ರೂಪಿಸಿರೋದು ಆಘಾತಕಾರಿ ಸಂಗತಿ ಎಂದರು.

ತಮ್ಮ ಕರ್ತವ್ಯ ಮರೆತು ಇಂತಹ ಪ್ರಕರಣದಲ್ಲಿ ಅನ್ಯರನ್ನ ಸಿಲುಕಿಸಲು ಪೊಲೀಸ್‌ ಅಧಿಕಾರಿ ಸಂಚು ರೂಪಿಸೋದು ಅದೆಷ್ಟು ಸರಿ? ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತರ್ತವ್ಯ ಲೋಪದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿಎಂದು ತಾವು ಕೇಂದ್ರ ಗೃಹ ಇಲಾಖೆಗೆ, ರಾಜ್ಯ ಡಿಜಿಪಿಯವರಿಗೆ ಬರೆದ ಪತ್ರಗಳನ್ನು ಮಾಧ್ಯಮಗಳಿಗೆ ನೀಡಿದರು.

ಜ.20ರಿಂದ ಇಲ್ಲಿಯವರೆಗೂ ಎಸಿಪಿ ರಾಜಣ್ಣನವರ ಮೋಬೈಲ್‌ನ ಸಿಡಿಆರ್‌ ದಾಕಲೆ ತೆರೆದು ನೋಡಲಿ. ಅವರು ಯಾರನ್ನು ಸಂಪರ್ಕಿಸಿದ್ದಾರೆ? ಯಾತಕ್ಕಾಗಿ ಸಂಪರ್ಕಿಸಿದ್ದಾರೆಂದು ಗೊತ್ತಾಗುತ್ತದೆ. ಇವರೆಲ್ಲ ಹೀಗೆ ವರ್ತಿಸಲು ಇಂವರ ಹಿಂದೆ ಚಾರ್ಜ್‌ ಮಿನಿಸ್ಟರ್‌ ಬೆಂಬಲವಿದೆ. ಅದಕ್ಕೇ ಇಂತಹವರಿಗೆ ಏನೂ ಆಗುತ್ತಿಲ್ಲ. ಕಾನೂನು ದುರ್ಬಳಕೆಯಾಗುತ್ತಿದೆ. ಹಿಂದು ಕಾರ್ಯಕರ್ತರನ್ನು ಹೀಗೆ ಪ್ರಕರಣಗಳಲ್ಲಿ ಸಿಲುಕಿಸುವ ಹುನ್ನಾರ ಅಪಾಯಕಾರಿ ಎಂದು ಆಂದೋಲಾ ಶ್ರೀಗಳು ಕಿಡಿ ಕಾರಿದರು.

ಸೊಂಟದ ಕೆಳಗಿನ ಭಾಷೆ ಬಳಸುವ ಮಹಿಳಾ ಟ್ರಾಫಿಕ್‌ ಇನ್ಸ್‌ಪೆಕ್ಟರ್‌!

ಕಲಬುರಗಿ ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಯಲ್ಲಿರುವ ಸಂಚಾರ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಭಾರತಿ ಎಂಬುವವರು ಕರ್ತವ್ಯದ ಮೇಲಿದ್ದಾಗ, ಸಂಚಾರ ನಿಯಮಗಳ ಉಲ್ಲಂಘನೆ ವಿಚಾರದಲ್ಲಿ ವಾಹನ ಸವಾರರಿಗೆ ಪತ್ತೆ ಹಚ್ಚಿ ದಂಡ ಹಾಕಲಿ, ನಮ್ಮದೇನು ಆಕ್ಷೇಪವಿಲ್ಲ. ಆದರೆ ಈ ಮಹಿಳಾ ಅಧಿಕಾರಿ ಯಾರನ್ನೇ ಹಿಡಿದರೂ ಮೊದಲು ಸೊಂಟದ ಕೆಳಗಿನ ಭಾಷೆಗಳನ್ನೇ ಬಳಸಿ ಸಾರ್ವಜನಿಕವಾಗಿ ಜರಿಯುತ್ತಾರೆ. ಇದೆಷ್ಟು ಸರಿ? ಪೊಲೀಸರ ಯಾವ ಕಾನೂನಲ್ಲಿ ಹೀಗೆ ನಿಂದಿಸಬೇಕೆಂದು ಇದೆ? ಎಂದು ಆಂದೋಲಾ ಶ್ರೀ ಪ್ರಶ್ನಿಸಿದರು.

ಕಾನೂನು ಉಲ್ಲಂಘನೆಗೆ ದಂಡವಿದೆ. ಅದಕ್ಕೆ ಒಂದು ವಿಧಿ ವಿಧಾನವಿದೆ. ಇದೆಲ್ಲ ಬಿಟ್ಟು ಇವರಿಗೆ ಬೈಯುವ, ನಿಂದಿಸುವ, ಅವಾಚ್ಯ ಪದ ಬಳಸುವ ಅಧಿಕಾರ ಯಾರು ಕೊಟ್ಟಿದ್ದಾರೆ. ಅನೇಕರು ಈ ಮಹಿಳಾ ಅಧಿಕಾರಿ ಬಗ್ಗೆ ತೊಂದರೆ ಎದುರಿಸುತ್ತಿದ್ದರೂ ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳದೆ ಸುಮ್ಮನಿದ್ದಾರೆ. ಇದೇ ವರ್ತನೆ ಮುಂದುವರಿದಲ್ಲಿ ಕಮೀಶ್ನರ್‌ ಕಚೇರಿ ಮುಂದೆ ತಾವೇ ಧರಣಿ ಕುಳಿತುಕೊಳ್ಳುವುದಾಗಿಯೂ ಆಂದೋಲಾ ಶ್ರೀಗಳು ಎಚ್ಚರಿಕೆ ನೀಡಿದರು. ಈಚೆಗಷ್ಟೇ ಹಿಂದು ಕಾರ್ಯಕರ್ತನೊಬ್ಬನಿಗೆ ಸಂಚಾರ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಹಿಡಿದು ವಾಚಾಮಗೋಚರ ನಿಂದಿಸಿದ್ದಾರೆ. ಅವರ ಪರಿವಾದವರು, ಮನೆ ಮಂದಿ, ಸುತ್ತಲಿನ ಜನ ಇದನ್ನು ನೋಡುತ್ತ ನಿಂತಿದ್ದರು. ಆತನಿಗೆ ಅದು ಅಪಮಾನವಲ್ಲವೆ? ಎಂದೂ ಶ್ರೀಗಳು ಪ್ರಶ್ನಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್