ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದಲ್ಲಿ ಕೋಟೆ ಮಾರಿಕಾಂಬ ದೇವಿ ಹಬ್ಬವನ್ನು ಮಹಿಳೆಯರು ಭಕ್ತಿಯಿಂದ ಆಚರಿಸಿದರು.ಕೋಟೆ ಗಣಪತಿ, ಆಂಜನೇಯ ಗುಡಿಗೆ ಹೊಂದಿಕೊಂಡಿರುವ ಪುರಾತನ ಮಾರಮ್ಮ ಗುಡಿಗೆ ಸಾವಿರಾರು ಭಕ್ತರು ಆಗಮಿಸಿ ದೇವಿಗೆ ಎಣ್ಣೆ ಮಜ್ಜನ, ಎಳನೀರು ಅಭಿಷೇಕ ನೆರವೇರಿಸಿ, ಬೇವಿನ ಸೊಪ್ಪಿನಿಂದ ತಂಪು ಮಾಡಿದರು.
ಬೆಳಗ್ಗಿನಿಂದಲೂ ಮಹಿಳೆಯರು, ಮಕ್ಕಳು ಗುಡಿಗೆ ಆಗಮಿಸಿ ಸಾಲು ನಿಂತು ದೇವಿ ತಲೆ ಮೇಲೆ ಗಂಗಾಜಲ ಸುರಿಯುವ ಮೂಲಕ ತಂಪು ಮಾಡಿದರು. ಜೊತೆಗೆ ಎಣ್ಣೆ ಮಜ್ಜನ, ಅರಿಷಿಣ ಹಾಕುತ್ತ, ಬೇವಿನ ಸೊಪ್ಪನ್ನು ಮುಡಿಗೆ ಅರ್ಪಿಸಿ ಭಕ್ತಿಯ ಮೆರೆಯುತ್ತಿದ್ದರು.ಹಬ್ಬದ ಸಂಭ್ರಮಕ್ಕೆ ಮಕ್ಕಳು, ಮಹಿಳೆಯರು ಬಲು ಖುಷಿಯಾಗಿದ್ದರು. ರೋಗರುಜಿನ ರಕ್ಷಕಿ ದೇವಿ ಎಂದೇ ಕರೆಯುವ ಕೋಟೆ ಮಾರಮ್ಮನಿಗೆ ಗ್ರಾಮವಲ್ಲದೆ ಹೋಬಳಿಯ ಸುತ್ತಮುತ್ತಲಿನಿಂದ ನೂರಾರು ಭಕ್ತರು ಆಗಮಿಸಿದ್ದರು. ಗಣಪತಿ ದೇವರಿಗೆ ಮೊದಲ ಪೂಜೆ ಸಲ್ಲಿಸಿ ನಂತರ ದೇವಿಗೆ ಜಲಾಭಿಷೇಕ ಮಾಡಲು ಕಾದು ನಿಂತಿದ್ದರು.
ಊರ ಮಾರಮ್ಮ ಗ್ರಾಮ ರಕ್ಷಕಿಯಾಗಿದ್ದು, ಮಕ್ಕಳಿಗೆ ಸಿಡುಬು, ದಡಾರ, ಕರೊನಾದಂತಹ ವೈರಾಣು, ಸಾಂಕ್ರಾಮಿಕ ರೋಗಗಳು ಬಾರದಂತೆ ಮಕ್ಕಳನ್ನು ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಗುಡಿಗೆ ಕರೆದುಕೊಂಡು ಬಂದಿದ್ದರು.ದೇವಿಗೆ ತೊಂಬಿಟ್ಟಿನ ಆರತಿ, ಹೂವಿನ ಆರತಿ ಬೆಳಗಿದ ಮಹಿಳೆಯರು ಹಣ್ಣು ಕಾಯಿ ಅರ್ಪಿಸಿ ದೀಪ, ದೂಪಧಾರತಿ ಬೆಳಗಿದರು.
ಅವರೆಕಾಳು ಸಾರು, ಮುದ್ದೆ, ಅನ್ನದ ತಳಿಗೆಯನ್ನು ದೇವಿಗೆ ಶುಚಿಭ್ರೂತರಾಗಿ ತಯಾರಿಸಿ ನೈವೇದ್ಯವಾಗಿ ಸಮರ್ಪಿಸಿದರು.ಬಿರುಗಾಳಿ ಸಹಿತ ಭಾರೀ ಮಳೆ ನೆಲಕ್ಕೆ ಬಿದ್ದ ವಿದ್ಯುತ್ ಕಂಬಗಳು
ಮದ್ದೂರು:ಪಟ್ಟಣದಲ್ಲಿ ಶನಿವಾರ ರಾತ್ರಿ ಗುಡುಗು, ಬಿರುಗಾಳಿ ಸಹಿತ ಬಿದ್ದ ಭಾರೀ ಮಳೆಯಿಂದಾಗಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡ ಘಟನೆ ಜರುಗಿದೆ.
ಕೋಟೆ ಬೀದಿಯ ಶ್ರೀನರಸಿಂಹ ಸ್ವಾಮಿ ದೇವಾಲಯದ ರಸ್ತೆ, ಪ್ರವಾಸಿ ಮಂದಿರ ವೃತ್ತ, ಹಳೇ ಎಂಸಿ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಬಿರುಗಾಳಿ ಮಳೆಗೆ ಮರಗಳು ವಿದ್ಯುತ್ ತಂತಿ ಮತ್ತು ಕಂಬದ ಮೇಲೆ ಬಿದ್ದ ಪರಿಣಾಮ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡು ನಾಗರಿಕರು ಇಡೀ ರಾತ್ರಿ ತೊಂದರೆಗೆ ಒಳಗಾದರು.ಬೆಸ್ಕಾಂ ಸಿಬ್ಬಂದಿ ಇಡೀ ರಾತ್ರಿ ಕಾರ್ಯಾಚರಣೆಗಳಿದು ವಿದ್ಯುತ್ ಪುನರ್ ಸಂಪರ್ಕ ಕಲ್ಪಿಸಲು ಪ್ರಯತ್ನ ನಡೆಸಿದರು. ಆದರೆ, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಯಚಣೆಗೆ ಅಡ್ಡಿ ಉಂಟಾಗಿತ್ತು. ಚೆಸ್ಕಾಂ ಸಿಬ್ಬಂದಿ ಭಾನುವಾರವೂ ಸಹ ಉರುಳಿ ಬಿದ್ದ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ. ಸಂಜೆ ವೇಳೆಗೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂದು ಚೆಸ್ಕಾ ಮೂಲಗಳು ತಿಳಿಸಿವೆ.