ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರೈಲ್ವೆ ಟರ್ಮಿನಲ್ ನಿರ್ಮಾಣ ಕಾಮಗಾರಿ ಸ್ಥಳದ ಬಳಿ ರಸ್ತೆ ಮಧ್ಯೆ ತೆಗೆದಿದ್ದ ಆಳವಾದ ಗುಂಡಿಗೆ ಬಿದ್ದು 5ನೇ ತರಗತಿಯ ಬಾಲಕಿ ಮೃತಪಟ್ಟ ಘಟನೆ ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ನಡೆದಿದೆ.ಕೋಟೆಗಂಗೂರಿನ ಬಾಲಕಿ ಚೈತ್ರಾ ಸಾವನ್ನಪ್ಪಿದ ದುರ್ದೈವಿ. ಗ್ರಾಮದ ಬಳಿ ರೈಲ್ವೆ ಟರ್ಮಿನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸಮೀಪ ಬೇರೆ ಊರಿನ ಸಂಪರ್ಕ ಹಾಗೂ ತೋಟ, ಹೊಲಕ್ಕೆ ಹೋಗುವ ಮಾರ್ಗ ಮಧ್ಯೆ ಆಳವಾದ ಗುಂಡಿಯನ್ನು ತೆಗೆದಿದ್ದಾರೆ. ಕೋಟೆಂಗೂರಿನಲ್ಲಿ ಐದನೇ ತರಗತಿ ಓದುತ್ತಿದ್ದ ಚೈತ್ರಾ ಶಾಲೆಯಿಂದ ಮನೆಗೆ ಬಂದು ಮನೆಯ ಕೀ ತೆಗೆದುಕೊಂಡು ಬರಲು ತಂದೆ-ತಾಯಿ ಕೆಲಸ ಮಾಡುತ್ತಿದ್ದ ಹೊಲಕ್ಕೆ ತೆರಳಿ, ಬೀಗ ಪಡೆದು ವಾಪಸಾಗುತ್ತಿದ್ದಳು. ಈ ವೇಳೆ ಚೈತ್ರಾ ಗುಂಡಿಗೆ ಬಿದ್ದು ಮೃತಪಟ್ಟಿದ್ದಾಳೆ.
ತಂದೆ ಶ್ರೀನಿವಾಸ್ ಮನೆಗೆ ಬಂದು ನೋಡಿದಾಗ ಚೈತ್ರಾ ಇನ್ನೂ ಬಂದಿಲ್ಲದೇ ಇರುವುದು ಗೊತ್ತಾಗಿದೆ. ಕೂಡಲೇ ಎಲ್ಲೆಡೆ ಅವರು ಹಾಗೂ ಗ್ರಾಮಸ್ಥರು ಹುಡುಕಿದ್ದಾರೆ. ರಾತ್ರಿ ಹೊತ್ತಿಗೆ ಚೈತ್ರಾ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಚೈತ್ರಾ ಸಾವಿಗೆ ಇಡೀ ಕೋಟೆಗಂಗೂರು ಗ್ರಾಮಸ್ಥರು ತೀವ್ರ ಕಂಬನಿ ಮಿಡಿದಿದ್ದಾರೆ.ಮಾರ್ಗ ಮಧ್ಯೆ ಗುಂಡಿ ತೆಗೆದರೂ ರೈಲ್ವೆ ಇಲಾಖೆಯಿಂದ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಇದರಿಂದ ಓಡಾಡುವ ಜನರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಗುಂಡಿಯ ಕಲ್ಲು ಕಳಚಿದ್ದು, ಮಣ್ಣು ಕುಸಿದಿತ್ತು. ಜನರ ರಕ್ಷಣೆ ನೋಡಿಕೊಳ್ಳದ ರೈಲ್ವೆ ಇಲಾಖೆ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಶ್ರೀನಿವಾಸ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- - - ಕೋಟ್ ರೈಲ್ವೆ ಇಲಾಖೆ ಜನರ ಹಾಗೂ ಮಕ್ಕಳ ರಕ್ಷಣೆ ಆದ್ಯತೆ ನೀಡದ ಬೇಜಾಬ್ದಾರಿ ಗುತ್ತಿಗೆದಾರರಿಗೆ ಕೆಲಸ ನೀಡಿದೆ. ಅವರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಮೃತ ಬಾಲಕಿ ಪೋಷಕರಿಗೆ ಸೂಕ್ತ ಪರಿಹಾರ ನೀಡಬೇಕು- ಡಿ.ಬಿ.ವಿಜಯ್‌ಕುಮಾರ್, ಅಧ್ಯಕ್ಷ, ಕೋಟೆಗಂಗೂರು ಗ್ರಾಪಂ
- - - -7ಎಸ್‌ಎಂಜಿಕೆಪಿ06: ಚೈತ್ರಾ.