ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಶಿವಪುರ, ಸೋಮನಹಳ್ಳಿ ಹಾಗೂ ನಿಡಘಟ್ಟ ಗ್ರಾಮಗಳ ವ್ಯಾಪ್ತಿ ಕೋಟ್ಪಾ ಕಾರ್ಯಾಚರಣೆ ನಡೆಯಿತು.ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಕೆ.ಮೋಹನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕುಮಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ. ಗೌಡ ಮಾರ್ಗದರ್ಶನದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಪ್ರಯುಕ್ತ ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತಗೊಳಿಸಲು ಹಾಗೂ ತಂಬಾಕು ಮುಕ್ತ ಯುವಕರನ್ನು ಕಾಣುವ ನಿಟ್ಟಿನಲ್ಲಿ ಕೋಟ್ಪಾ ಕಾರ್ಯಾಚರಣೆ ನಡೆಸಲಾಯಿತು.
ಈ ವೇಳೆ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ಬಳಕೆಯಲ್ಲಿದ್ದ ನಂದಿನಿ ಪಾರ್ಲರ್, ಅಂಗಡಿಗಳಿಗೆ ಹಾಗೂ ಧೂಮಪಾನಿಗಳಿಗೆ ದಂಡ ವಿಧಿಸಿ ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ನೀಡಲಾಯಿತು.ಅದೇ ರೀತಿ ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯಲ್ಲಿದ್ದವರಿಗೆ ಕರಪತ್ರಗಳನ್ನು ವಿತರಿಸಿ ತಿಳಿವಳಿಕೆಯನ್ನು ನೀಡುವ ಜೊತೆಗೆ ಕೋಟ್ಪಾದ ಸೆಕ್ಷನ್ 4 ರ ಅಡಿಯಲ್ಲಿ 15 ಪ್ರಕರಣಗಳನ್ನು ದಾಖಲಿಸಿ 1700 ರು/- ದಂಡ ಹಾಗೂ ಸೆಕ್ಷನ್ 6ಎ ಅಡಿಯಲ್ಲಿ 4 ಪ್ರಕರಣಗಳನ್ನು ದಾಖಲಿಸಿ 400 ರು. ದಂಡ ಹಾಗೂ ಸೆಕ್ಷನ್ 6ಬಿ ಅಡಿಯಲ್ಲಿ 2 ಪ್ರಕರಣಗಳನ್ನು ದಾಖಲಿಸಿ 200 ರು. ದಂಡ ಸೇರಿ ಒಟ್ಟು 21 ಪ್ರಕರಣ ದಾಖಲಿಸಿ 2300 ರು. ದಂಡ ವಿಧಿಸಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ತಿಳಿಸಲಾಯಿತು.
ಆರೋಗ್ಯದ ಜೀವನ ನಡೆಸಲು ಜೊತೆಗೆ ಉಚಿತ ಸಹಾಯವಾಣಿ 14416 ಗೆ ಕರೆ ಮಾಡಿ ಸಲಹೆ ಪಡೆಯಲು ಅರಿವು ಮೂಡಿಸಲಾಯಿತು.ಕಾರ್ಯಾಚರಣೆಯಲ್ಲಿ ಜಿಲ್ಲಾ ಸಲಹೆಗಾರ ಎಸ್.ಎನ್.ತಿಮ್ಮರಾಜು, ಸಾಮಾಜಿಕ ಕಾರ್ಯಕರ್ತರಾದ ವೈ.ಕೆ.ಮೋಹನ್ ಕುಮಾರ್ , ಕದಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಿಕ್ಕರಾಯಿ, ಮದ್ದೂರು ಆರಕ್ಷಕ ಠಾಣೆ ಪುನೀತ್ ಹಾಜರಿದ್ದರು.