ಮೈಸೂರು : ತಪ್ಪೇ ಇಲ್ಲದ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಡೆಸುತ್ತಿರುವ ಹೋರಾಟವನ್ನು ಚಾಮುಂಡೇಶ್ವರಿ ಕ್ಷಮಿಸುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ಮೌರ್ಯ ಹೇಳಿದರು.ಜೆ.ಪಿ. ನಗರದ ಬಿಲ್ಡರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಜನಸ್ಪಂದನ ಟ್ರಸ್ಟ್ ಬುಧವಾರ ಆಯೋಜಿಸಿದ್ದ ಕರ್ನಾಟಕದ ಅಪರೂಪದ ಜನ ನಾಯಕರಿಗೆ ಜನಪರತೆಯೇ ದ್ವೇಷವಾಯಿತೇ? ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ನಾಯಕರನ್ನು ಸಿದ್ದರಾಮಯ್ಯ, ಪಾರ್ವತಮ್ಮ ಅವರು ಕ್ಷಮಿಸಬಹುದು. ಆದರೆ, ಚಾಮುಂಡೇಶ್ವರಿ ಕ್ಷಮಿಸುವುದಿಲ್ಲ ಎಂದರು.
ಎಂಡಿಎಯಿಂದ ತಮ್ಮ ಕುಟುಂಬದವರು ಪಡೆದ ಬದಲಿ ನಿವೇಶನದಲ್ಲಿ ತನ್ನ ಪಾತ್ರವೇ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತಿರುವುದು ಸರಿಯಲ್ಲ. ವಿಪಕ್ಷಗಳ ನಾಯಕರು ಸಿದ್ದರಾಮಯ್ಯ ಅವರ ತಪ್ಪುಗಳ ಬಗ್ಗೆ ಮಾತಾಡಲಿ. ಆದರೆ ಅವರ ಪತ್ನಿ ತವರು ಮನೆಯಿಂದ ಹರಿಶಿನ- ಕುಂಕುಮಕ್ಕೆ ಪಡೆದ ಜಮೀನು ಹಿಡಿದುಕೊಂಡು ಹೋರಾಟ ಮಾಡುತ್ತಿರುವವರಿಗೆ ನಾಚಿಕೆ ಆಗಬೇಕು ಎಂದು ಅವರು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಅವರ ಪತ್ನಿಯರಾದರೂ ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಳ್ಳದ, ದೇಗುಲಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ, ವಿಧಾನಸೌಧಕ್ಕೆ ಬರದ ಅಣ್ಣತಮ್ಮಂದಿರು. ರಾಕೇಶ್ ಅವರಿಗೆ ರಾಜಕೀಯ ಮಹಾತ್ವಾಕಾಂಕ್ಷೆ ಇದ್ದರೂ ರಾಜಕಾರಣಕ್ಕೆ ಬರುವುದನ್ನು ತಡೆದಿದ್ದ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರ ಚರಿತ್ರೆ ಇದಕ್ಕೆ ತದ್ವಿರುದ್ಧ ಎಂದರು.ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಅಂಟಿಕೊಳ್ಳಲು ಮೈಸೂರಲ್ಲಿ ಜನಾಂದೋಲನ ಸಮಾವೇಶ ಮಾಡುತ್ತಿಲ್ಲ.
ತಮ್ಮ 45 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಪರಿಶುದ್ಧ ರಾಜಕಾರಣ ಮಾಡಿದ್ದಾರೆ. ಆ ಹೆಸರು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ ಎಂದು ಅವರು ಹೇಳಿದರು.
ವಿಧಾನಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಮಾತನಾಡಿ, ಸಿದ್ದರಾಮಯ್ಯ ಫಲವತ್ತಾದ ವೃಕ್ಷ. ಆ ಮರಕ್ಕೆ ಎಷ್ಟೇ ಕಲ್ಲು ಹೊಡೆದರೂ ಸಹಿಸಿಕೊಂಡು ಫಲ ಕೊಟ್ಟಿದ್ದಾರೆ. ಪಾದಯಾತ್ರೆ ಮಾಡುವವರ ಮಾನಸಿಕ ಆರೋಗ್ಯ ಸುಧಾರಿಸದಿದ್ದರೂ ದೈಹಿಕ ಆರೋಗ್ಯ ಸುಧಾರಣೆ ಆಗುತ್ತದೆ ಎಂದು ಹೇಳಿದರು.ವಿವಿಧ ರಾಜ್ಯಗಳ ರಾಜ್ಯಪಾಲರು ನಡೆದುಕೊಳ್ಳುವ ರೀತಿ ಸರಿ ಇಲ್ಲ. ಚುನಾಯಿತ ಸರ್ಕಾರಗಳನ್ನು ವಜಾ ಮಾಡುವುದು ಸರಿ ಇಲ್ಲ. ರಾಜ್ಯಪಾಲರು ಸಂವಿಧಾನಕ್ಕೆ ನಿಷ್ಠರಾಗಿಲ್ಲ. ಅವರನ್ನು ನೇಮಕ ಮಾಡಿದವರಿಗೆ ನಿಷ್ಠರಾಗಿದ್ದಾರೆ. ವಾಮಮಾರ್ಗದಿಂದ ಅಧಿಕಾರ ಹಿಡಿಯುವ ದುಶ್ಚಟ ಬಿಜೆಪಿಗೆ ಇದೆ ಎಂದರು.
ವಿಧಾನ ಪರಿಷತ್ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, 4 ದಶಕಗಳ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಕಪ್ಪು ಚುಕ್ಕೆ ಇಲ್ಲದಂತೆ ರಾಜಕಾರಣ ಮಾಡಿದ್ದಾರೆ. ವಿನಾಕಾರಣ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನ ಮಾಡುತ್ತಿರುವುದಾಗಿ ಆರೋಪಿಸಿದರು.ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ ಮೊದಲಾದವರು ಇದ್ದರು.