ಹುಬ್ಬಳ್ಳಿ: ಕೊನೆಗೂ ಕಾಂಗ್ರೆಸ್ ಸರ್ಕಾರ ನಿಗಮ ಮಂಡಳಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಿದೆ. ಇದು ಪಕ್ಷದಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಕೆಲವರಂತೂ ಸ್ಥಳೀಯರನ್ನು ಒತ್ತಟ್ಟಿಗಿರಲಿ, ಕೆಪಿಸಿಸಿಗೂ ಮರೆ ಮಾಡಿಕೊಂಡ ಹೈಕಮಾಂಡ್‌ನಿಂದಲೇ ನಿಗಮ ಮಂಡಳಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು ವಿಶೇಷ.
ಜಿಲ್ಲೆಯಲ್ಲಿ ಇಬ್ಬರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ದೊರೆತಿದೆ. ಮಾಜಿ ಸಂಸದ ಐ.ಜಿ.ಸನದಿ ಅವರ ಪುತ್ರ ಶಾಕೀರ ಸನದಿ ಹಾಗೂ ನವಲಗುಂದ ಕ್ಷೇತ್ರದ ಯುವ ಮುಖಂಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿಗೆ ನಿಗಮಮಂಡಳಿಯಲ್ಲಿ ಸ್ಥಾನ ಸಿಕ್ಕಿದೆ.ಹೈಕಮಾಂಡ್ ಒತ್ತಡ: ಶಾಕೀರ ಸನದಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿ ಲಭ್ಯವಾಗಿದೆ. ಶಾಕೀರ ಸನದಿ ಯುವ ಮುಖಂಡ. ಎಐಸಿಸಿಯಲ್ಲಿ ಹದಿನೈದು ವರ್ಷ ದುಡಿದವರು. ಕೆಪಿಸಿಸಿಯಲ್ಲೂ ಕೆಲಸ ಮಾಡಿದವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಅಥವಾ ಧಾರವಾಡ ಟಿಕೆಟ್ ಕೊಡಿ ಎಂದು ಕೇಳಿದ್ದರು. ಆದರೆ ಆಗ ಟಿಕೆಟ್ ತಪ್ಪಿತ್ತು ಎನ್ನುವುದಕ್ಕಿಂತ ಕೆಲವರು ತಪ್ಪಿಸಿದ್ದರು ಎಂಬುದು ಬಹಿರಂಗ ಸತ್ಯ. ಇನ್ನು ವಿಧಾನಸಭೆ ಚುನಾವಣೆಯಲ್ಲೂ ಶಿಗ್ಗಾವಿ- ಸವಣೂರು ಅಥವಾ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಬಯಸಿದ್ದರು. ಆಗಲೂ ಇವರಿಗೆ ಟಿಕೆಟ್ ತಪ್ಪಿತ್ತು.
ಆದರೆ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ ಅವರೊಂದಿಗೆ ಸಂಪರ್ಕ ಹೊಂದಿದ್ದರೂ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿಲ್ಲ ಎಂಬುದು ಮಾತ್ರ ಸ್ಪಷ್ಟ. ಆದರೆ ಹೈಕಮಾಂಡ್‌ನೊಂದಿಗೆ ಅದರಲ್ಲೂ ರಾಹುಲ್ ಗಾಂಧಿ ಅವರೊಂದಿಗೆ ಒಳ್ಳೆಯ ಸಂಬಂಧ, ಸಂಪರ್ಕ ಹೊಂದಿರುವ ಶಾಕೀರ, ನಿಗಮ ಮಂಡಳಿಯಲ್ಲಿ ಸ್ಥಾನ ಪಡೆಯಲು ಸ್ಥಳೀಯರಾಗಲಿ, ಕೆಪಿಸಿಸಿಯನ್ನಾಗಲಿ ನೆಚ್ಚಿಕೊಳ್ಳಲೇ ಇಲ್ಲ. ನೇರವಾಗಿ ಹೈಕಮಾಂಡ್ ಮೊರೆ ಹೋಗಿದ್ದರು. ಹೈಕಮಾಂಡೇ ಇವರ ಸ್ಥಾನವನ್ನು ನಿಗದಿಪಡಿಸಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಮಟ್ಟಿಗೆ ಅತ್ಯಂತ ಮಹತ್ವದ ಸ್ಥಾನವಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿ ಲಭಿಸಲು ಸಾಧ್ಯವಾಗಿದೆ. ಇದೀಗ ಇದು ಕೆಲವರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.ಯಾರೊಬ್ಬರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೇಳುತ್ತಿಲ್ಲವಾದರೂ ಒಳಗೊಳಗೆ ಬೇಸರವಾಗಿರುವುದನ್ನು ಅಲ್ಲಲ್ಲಿ ಹೇಳಿಕೊಳ್ಳುತ್ತಿದ್ದಾರೆ.
ಕ್ರೀಡೆಗೆ ಯುವ ಮುಖಂಡ:ಇನ್ನು ವಿನೋದ ಅಸೂಟಿ ನವಲಗುಂದ ಕ್ಷೇತ್ರದಲ್ಲಿ ಅಕ್ಷರಶಃ ಪಕ್ಷವನ್ನು ಸಂಘಟಿಸಿದ ಯುವ ಮುಖಂಡ. ಜಿಲ್ಲಾ ಯುವ ಘಟಕದ ಅಧ್ಯಕ್ಷನಾಗಿ ಸಾಕಷ್ಟು ಸಂಘಟನೆ ಮಾಡಿದವರು. ವಿಧಾನಸಭೆ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಆದರೆ ಎನ್.ಎಚ್. ಕೋನರಡ್ಡಿ ಪಕ್ಷಕ್ಕೆ ಬಂದಿದ್ದರಿಂದ ಇವರು ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಕೋನರಡ್ಡಿ ಗೆಲುವಿಗೆ ಶ್ರಮಿಸಿದವರು. ಇದೀಗ ಅಸೂಟಿಗೆ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷಗಿರಿ ಲಭಿಸಿದೆ. ಇವರನ್ನು ಕೆಪಿಸಿಸಿಯೇ ಆಯ್ಕೆ ಮಾಡಿದೆ. ಇದು ಇವರು ಹಾಗೂ ಬೆಂಬಲಿಗರಲ್ಲಿ ಸಂತಸವನ್ನುಂಟು ಮಾಡಿದೆ.ಇಬ್ಬರು ಒಳ್ಳೆಯ ವ್ಯಕ್ತಿಗಳೇ, ಅರ್ಹರೇ ಆದರೂ ಒಳಬೇಗುದಿ ಯಾವಾಗ ಸ್ಪೋಟಗೊಳ್ಳುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಿದೆ.
ಕ್ರೀಡಾ ಪ್ರಾಧಿಕಾರದ ಅಧ್ಯಕ್ಷಗಿರಿ ಲಭಿಸಿರುವುದು ಸಂತಸ ತಂದಿದೆ. ನನ್ನ ಶಕ್ತಿ ಮೀರಿ ಶ್ರಮಿಸುವ ಮೂಲಕ ಕೊಟ್ಟಿರುವ ಸ್ಥಾನಕ್ಕೆ ನ್ಯಾಯ ಒದಗಿಸುವೆ ಎಂದು ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ವಿನೋದ ಅಸೂಟಿ ಹೇಳಿದ್ದಾರೆ.