ಬರ ಪರಿಹಾರ ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಆರ್‌ಎಸ್ ಪ್ರತಿಭಟನೆ

KannadaprabhaNewsNetwork |  
Published : Nov 13, 2026, 01:30 AM IST
 ಸಿಕೆಬಿ-3   ಬರ ಪರಿಹಾರಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ  ಜಿಲ್ಲಾಡಳಿತ ಭವನದ ಮುಂದೆ ಕೆಪಿಆರ್ ಎಸ್ ಕಾರ್ಯಕರ್ತರು  ಪ್ರತಿಭಟನೆ  ನಡೆಸಿದರು.   | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ರೈತರು ಬಿತ್ತನೆಯನ್ನೇ ಮಾಡಿಲ್ಲ. ಕೊಳವೆಬಾವಿಗಳೂ ಬತ್ತಿ ಹೋಗಿವೆ. ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ದರ ಸಿಗದೇ ಜಿಲ್ಲೆ ರೈತರು ಕಂಗಾಲಾಗಿದ್ದಾರೆ .

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬರ ಪರಿಹಾರಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್)ದ ಜಿಲ್ಲಾ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ರೈತರು ಬಿತ್ತನೆಯನ್ನೇ ಮಾಡಿಲ್ಲ. ಕೊಳವೆಬಾವಿಗಳೂ ಬತ್ತಿ ಹೋಗಿವೆ. ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ದರ ಸಿಗದೇ ಜಿಲ್ಲೆ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು.

ಕೃಷ್ಣಾ ನದಿ ನೀರಿನಲ್ಲಿ ನಮ್ಮ ಜಿಲ್ಲೆಯ ಪಾಲನ್ನು ಪಡೆಯುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ತುಟಿ ಬಿಚ್ಚುತ್ತಿಲ್ಲ. ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಿಲ್ಲ. ಯುವ ಜನರು ಉದ್ಯೋಗಳಿಲ್ಲದೆ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಹಲವಾರು ಯುವಕರು ಕಳ್ಳತನ, ಡಗ್ಸ್ ಮಾರಾಟ ಮುಂತಾದ ಸಮಾಜಘಾತುಕ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರ ಬರಪೀಡಿತ ಜಿಲ್ಲೆಯೆಂದು ಘೋಷಿಸಿದ್ದರೂ ರೈತರಿಗೆ ನಯಾ ಪೈಸೆ ಬರ ಪರಿಹಾರ ಹಣ ನೀಡಿಲ್ಲ. ಬೆಳೆ ವಿಮ ಹಣ ಪಾವತಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ದನಕರುಗಳಿಗೆ ಮೇವು, ಕುಡಿಯಲು ನೀರು ಇಲ್ಲ. ಜನರಿಗೂ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಸರ್ಕಾರ ಈ ಕೂಡಲೇ ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ ಮಾತನಾಡಿ, ರೈತರಿಗೆ ವಿಮೆ ಹಣ ಪಾವತಿಸುವಂತೆ ವಿಮಾ ಕಂಪನಿಗಳ ಮೇಲೆ ಜಿಲ್ಲಾಡಳಿತ ಒತ್ತಡ ತರಬೇಕು. ಎಕರೆಗೆ ಕನಿಷ್ಠ 50000 ರು. ಬರ ಪರಿಹಾರ ಪಾವತಿಸಬೇಕು. ಬಾಕಿ ಇರುವ ಖಾತ್ರಿ ಕೂಲಿ ಹಣ ಹಾಗೂ ಸಾಮಾಗ್ರಿ ವೆಚ್ಚಗಳನ್ನು ಕೂಡಲೇ ಪಾವತಿ ಮಾಡಬೇಕು. ಮತ್ತು ವಿಬಿ- ಜಿ ರಾಮ್ ಜಿ ಯೋಜನೆಯಡಿ ಎಲ್ಲಾ ಕೂಲಿಕಾರರಿಗೂ ಕೂಡಲೇ ಕೆಲಸ ಕೊಡಬೇಕು. ಎಚ್.ಎನ್. ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಣ ಮಾಡಿ ಜಿಲ್ಲೆ ಕೆರೆಗಳಿಗೆ ಹರಿಸಬೇಕು. ನಮ್ಮ ಪಾಲಿನ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ಹರಿಸಲು ಕೂಡಲೇ ಅಗತ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಕೂಡಲೇ ಏರಿರುವ ಬೆಲೆಗಳನ್ನು ಇಳಿಕೆ ಮಾಡಬೇಕು ಮತ್ತು ಜೀವನಾಶ್ಯಕ ಆಹಾರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲು ಕ್ರಮಕೈಗೊಳ್ಳಬೇಕು. ಹೈನುಗಾರರಿಂದ ಖರೀದಿಸುವ ಹಾಲಿಗೆ ಲೀಟರ್ ಒಂದಕ್ಕೆ 60 ರು. ನೀಡಬೇಕು. ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಳಿಂದ ರೈತರು ಪಡೆದಿರುವ ಬೆಳೆ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಮುನಿ ವೆಂಕಟಪ್ಪ, ಕೆಪಿಆರ್‌ಎಸ್‌ ಮುಖಂಡರಾದ ಏ.ಜಯರಾಮರೆಡ್ಡಿ, ಚನ್ನರಾಯಪ್ಪ, ಡಿ.ಟಿ. ಮುನಿಸ್ವಾಮಿ, ಡಿ.ಸಿ. ಶ್ರೀನಿವಾಸ್. ಆನಂದ್, ಬೈರಾರೆಡ್ಡಿ ಮುನಿಸ್ವಾಮಿ, ಕೃಷ್ಣಪ್ಪ, ಶಿವಪ್ಪ, ಬಾಬು ರೆಡ್ಡಿ, ದೇವರಾಜ್, ವೆಂಕಟರೆಡ್ಡಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌