ಕೆಪಿಎಸ್‌ಸಿ ಪರೀಕ್ಷೆ: ಪೂರ್ವ ಸಿದ್ಧತಾ ಸಭೆ

KannadaprabhaNewsNetwork | Published : Jan 20, 2024 2:01 AM

ಸಾರಾಂಶ

ನಗರದಲ್ಲಿ ಜ.20 ಹಾಗೂ 21ರಂದು ನಡೆಯುವ ಕೆಪಿಎಸ್‌ಸಿ ಪರೀಕ್ಷಾ ಸಂಬಂಧ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿ ಗಳನ್ನು ಪ್ರವೇಶ ಪತ್ರದಲ್ಲಿಯೂ ಸ್ಪಷ್ಟವಾಗಿ ಮುದ್ರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜ.20 ಹಾಗೂ 21ರಂದು ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗಳ ನೇಮಕಾತಿ ಗಾಗಿ ಕೆಪಿಎಸ್‌ಸಿ ವತಿಯಿಂದ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮೊಬೈಲ್, ಕ್ಯಾಲ್ಕುಲೇಟರ್, ಬ್ಲೂಟೂತ್, ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಉಪಕರಣ ಸೇರಿದಂತೆ ಯಾವುದೇ ರೀತಿ ಗ್ಯಾಜೆಟ್‌ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮ ತಡೆಯಲು ಮೊಬೈಲ್ ಜಾಮರ್ ಹಾಗೂ ಸಿಸಿಟಿವಿ ಅಳವಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಜರುಗಿದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಪರೀಕ್ಷಾ ಸಂಬಂಧ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿ ಗಳನ್ನು ಪ್ರವೇಶ ಪತ್ರದಲ್ಲಿಯೂ ಸ್ಪಷ್ಟವಾಗಿ ಮುದ್ರಿಸಲಾಗಿದೆ. ಅಭ್ಯರ್ಥಿಗಳು ಈ ನಿಬಂಧನೆಗಳಿಗೆ ಆನ್‌ಲೈನ್ ಮೂಲಕ ಒಪ್ಪಿಗೆ ಸೂಚಿಸಿದ ನಂತರವೇ ಪ್ರವೇಶ ಪತ್ರದ ಮುದ್ರಣದ ಪ್ರತಿ ಲಭ್ಯವಾಗುತ್ತದೆ. ಇದರ ಅನ್ವಯ ಅಭ್ಯರ್ಥಿಗಳು ಶೂ, ಸಾಕ್ಸ್, ಸ್ವೆಟರ್, ಜರ್ಕಿನ್, ಬ್ಲೂಟುತ್, ವೈಟ್ ಪ್ಲೂಯಿಡ್, ವೆರೆಲೆಸ್ ಸೆಟ್, ಪೇಪರ್, ಬುಕ್ಸ್, ತುಂಬು ತೋಳಿನ ಶರ್ಟ್, ಟಿ ಶರ್ಟ್ ಹಾಗೂ ಯಾವುದೇ ರೀತಿ ಆಭರಣಗಳನ್ನು ಧರಿಸುವಂತಿಲ್ಲ. ಕುಡಿಯುವ ನೀರಿನ ಬಾಟೆಲ್, ಕಿವಿ ಹಾಗೂ ಬಾಯಿ ಮುಚ್ಚಿಕೊಳ್ಳುವಂತಿರುವ ಫ್ಲಿಲ್ಟರ್ ಇರುವ ಪೇಸ್ ಮಾಸ್ಕ್ಗಳನ್ನು ಸಹ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸದಾ ಉಡುಗೆಯಲ್ಲಿ ಪರೀಕ್ಷೆ ಬರೆಯಲು ಆಗಮಿಸಬೇಕು. ಮದುವೆಯಾದ ಹೆಣ್ಣುಮಕ್ಕಳು ಮಂಗಳಸೂತ್ರ ಹಾಗೂ ಕಾಲುಂಗುರ ಧರಿಸಿ ಬರಲು ಅವಕಾಶವಿದೆ. ಈ ನಿಬಂಧನೆಗಳನ್ನು ಅಭ್ಯರ್ಥಿಗಳು ಪಾಲಿಸುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ಪರೀಕ್ಷಾ ಕೇಂದ್ರದಲ್ಲಿ ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ಸ್ಥಾಪಿಸಿ, ಆರೋಗ್ಯ ತಪಾಸಣೆಗಾಗಿ ಆರೋಗ್ಯ ಸಹಾಯಕರನ್ನು ನಿಯೋಜಿ ಸಬೇಕು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಜಾಮರ್, ಸಿ.ಸಿ.ಟಿ.ವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಪೊಲೀಸ್ ಇಲಾಖೆ ವತಿಯಿಂದ ಪ್ರತಿ ಪರೀಕ್ಷಾ ಕೇಂದ್ರಗಳಿ ಪೊಲೀಸ್ ಸಿಬ್ಬಂದಿ ಹಾಗೂ ತಪಾಸಣೆಗಾಗಿ ಒರ್ವ ಪುರಷ ಹಾಗೂ ಒರ್ವ ಮಹಿಳಾ ಗೃಹ ರಕ್ಷಕರನ್ನು ಹೆಚ್ಚುವರಿಯಾಗಿ ನೇಮಿಸುವಂತೆ ನಿರ್ದೇಶನ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಜೆ.ಕುಮಾರಸ್ವಾಮಿ ಮಾತನಾಡಿ, ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ, ಸಂಬಂಧಪಟ್ಟ ಪರೀಕ್ಷಾ ಕೇಂದ್ರ ಮೇಲ್ವಿಚಾರಕರು ತಕ್ಷಣೆ ಪೊಲೀಸರಿಗೆ ಕರೆ ಮಾಡಿ ತಿಳಿಸುವಂತೆ ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಚಂದ್ರಶೇಖರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಡಯಟ್ ಉಪನಿರ್ದೆಶಕ ನಾಸಿರುದ್ದಿನ್ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಾಧಿಕಾರಿಗಳು, ಜಿಲ್ಲಾ ಖಜನಾಧಿಕಾರಿಗಳು, ಅಂಚೆ ಇಲಾಖೆ ಅಧಿಕಾರಿಗಳು ಇದ್ದರು.

3631 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ

ಜನವರಿ 20 ರಂದು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಕನ್ನಡ ಭಾಷಾ ಪರೀಕ್ಷೆ ನಗರದ 10 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 3631 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜನವರಿ 21 ರಂದು ಬೆಳಿಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಜ್ಞಾನದ ಪರೀಕ್ಷೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ವಿಷಯಗಳ ಪರೀಕ್ಷೆ ಒಟ್ಟು 14 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 5337 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಮಾಹಿತಿ ನೀಡಿದರು.

Share this article