ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರಸಕ್ತ ಸಾಲಿನಲ್ಲಿ ಟಿಎಪಿಸಿಎಂಎಸ್ ವಿವಿಧ ವಹಿವಾಟುಗಳ ಮೂಲಕ 31 ಲಕ್ಷ ರು. ಲಾಭಗಳಿಸಿ ಈ ಸಾಲಿಗೆ ಶ್ರೇಣಿ-2 ಸಹಕಾರ ಸಂಘ ಎಂದು ಪರಿಗಣಿಸಲ್ಪಟ್ಟಿದೆ ಎಂದು ಅಧ್ಯಕ್ಷ ಬಿ.ಎಲ್.ದೇವರಾಜು ತಿಳಿಸಿದರು.ಪಟ್ಟಣದ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರ ಸಹಕಾರದಿಂದ ಸಂಘ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಆಪದ್ಧನ ನಿಧಿ, ಇತರೆ ನಿಧಿಗಳು ಮತ್ತು ಸವಕಳಿ ನಿಧಿಗಳು ಸೇರಿ ಒಟ್ಟು 7,53,30,642 ರು. ಸಂಘದ ನಿಧಿಯಿದೆ ಎಂದರು.
ಗೊಬ್ಬರ ವಿಭಾಗ, ಆಹಾರ, ಜವಳಿ, ಪೈಪ್ ವಿಭಾಗ, ಪೆಟ್ರೋಲ್ ಬಂಕ್ ಸೇರಿದಂತೆ ಪ್ರಸಕ್ತ ಸಾಲಿನಲ್ಲಿ ಸಂಘ 14,10,86.194 ರು. ಗಳಷ್ಟು ವಹಿವಾಟು ನಡೆಸಿದೆ. ಸಂಘವು ರೈತರಿಗೆ ಅವಶ್ಯಕವಾಗಿ ಬೇಕಾಗಿರುವ ರಸಗೊಬ್ಬರ, ಬಿತ್ತನೆ ಬೀಜ, ಪಿ.ವಿ.ಸಿ ಪೈಪುಗಳ ಮಾರಾಟ, ಪಡಿತರ ಆಹಾರ ಪದಾರ್ಥಗಳನ್ನು ತಾಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ವಿತರಿಸುತ್ತಿದೆ ಎಂದು ಹೇಳಿದರು.ಸಂಘದ ಬ್ಯಾಂಕಿಂಗ್ ಶಾಖೆ ಮೂಲಕ ಆಕರ್ಷಕ ಬಡ್ಡಿ ದರದಲ್ಲಿ ಫಿಕ್ಸೆಡ್ ಡಿಪಾಸಿಟ್ ಠೇವಣಿ ಸ್ವೀಕರಿಸುತ್ತಿದೆ. ಷೇರುದಾರರು ಸಂಘದ ಮೂಲಕವೇ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿ ಸಂಘವನ್ನು ಮತ್ತಷ್ಟು ಅರ್ಥಿಕವಾಗಿ ಸಧೃಡಗೊಳಿಸುವಂತೆ ಮನವಿ ಮಾಡಿದರು.
ಷೇರುದಾರರ ಷೇರು ಹಣಕ್ಕೆ ಇದುವರೆಗೆ ಶೇ.6 ಬಡ್ಡಿ ನೀಡುತ್ತಿದ್ದು, ಇದನ್ನು ಶೇ.10 ಕ್ಕೆ ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಂಘದಲ್ಲಿ ನಿಗದಿತ ಪ್ರಮಾಣದ ವ್ಯಾಪಾರ ವಹಿವಾಟು ಮಾಡದ ಷೇರುದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಕನಿಷ್ಠ ವ್ಯಾಪಾರ ಮಾಡಿದವರಿಗೆ ಮಾತ್ರ ಸಂಘದ ಚುನಾವಣೆಯಲ್ಲಿ ಮತದಾನದ ಹಕ್ಕು ಎನ್ನುವ ನಿಯಮವನ್ನು ತೆಗೆದು ಹಾಕಿ ಸರ್ವ ಸದಸ್ಯರಿಗೂ ಮತದಾನದ ಅವಕಾಶ ಕಲ್ಪಿಸಲು ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಯಿತು.ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಜಿ.ಮೋಹನ್, ನಿರ್ದೇಶಕರಾದ ಅಶೋಕ್, ಕೆ.ಎಸ್.ದಿನೇಶ್, ಎಸ್.ಆರ್.ನವೀನ್ ಕುಮಾರ್, ಟಿ.ಬಲದೇವ್, ಐಚನಹಳ್ಳಿ ಶಿವಣ್ಣ, ಶೀಳನೆರೆ ಎಸ್.ಎಲ್.ಮೋಹನ್, ಶಶಿಧರ ಸಂಗಾಪುರ, ಟಿ.ಎಸ್.ಮಂಜುನಾಥ್, ನಾಗರಾಜು, ಸುಕನ್ಯ ಮತ್ತು ರುಕ್ಮಿಣಿ , ಕಾರ್ಯದರ್ಶಿ ಬೋರೇಗೌಡ, ಸದಸ್ಯರಾದ ಬಿ.ನಂಜಪ್ಪ, ಲಾಯರ್ ವಿಜಯಕುಮಾರ್, ಬ್ಯಾಲದಕೆರೆ ಪಾಪೇಗೌಡ, ಅಗ್ರಹಾರಬಾಚಹಳ್ಳಿ ನಾಗೇಶ್, ನಾಟನಹಳ್ಳಿ ಗಂಗಾಧರ, ಬೂಕನಕೆರೆ ಜವರಾಯಿಗೌಡ, ವಿಠಲಾಪುರ ಸುಬ್ಬೇಗೌಡ, ಚಲುವಯ್ಯ, ಚೌಡೇನಹಳ್ಳಿ ರಾಮಕೃಷ್ಣೇಗೌಡ ಸೇರಿ ಹಲವರು ಚರ್ಚೆಯಲ್ಲಿ ಭಾಗವಹಿಸಿದ್ದರು.