ಕೃಷಿ ವಿವಿ ಸಂತೆ: ಅರ್ಧ ದಿನದಲ್ಲೇ ಭರ್ಜರಿ ವಹಿವಾಟು

KannadaprabhaNewsNetwork | Published : Jun 23, 2024 2:07 AM

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಅರ್ಧ ದಿನ ನಡೆದ ಸಂತೆಗೆ ಭರ್ಜರಿ ಸ್ಪಂದನೆ ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಪ್ರಥಮ ಬಾರಿಗೆ ಹೆಬ್ಬಾಳದ ಜಿಕೆವಿಕೆಯಲ್ಲಿ ಶನಿವಾರ ಆಯೋಜಿಸಿದ್ದ ‘ಕೃಷಿ ವಿವಿ ಉತ್ಪನ್ನಗಳ ಸಂತೆ’ಗೆ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಭರ್ಜರಿ ವಹಿವಾಟು ನಡೆದಿದೆ.

ಕೃಷಿ ವಿವಿ ಮತ್ತು ವಿವಿ ವ್ಯಾಪ್ತಿಗೊಳಪಡುವ ವಿವಿಧ ಕೃಷಿ ಸಂಶೋಧನಾ, ವಿಸ್ತರಣೆ ಕೇಂದ್ರಗಳಲ್ಲಿ ಉತ್ಪಾದಿಸಲಾದ ಕೃಷಿ ಉತ್ಪನ್ನ, ತಂತ್ರಜ್ಞಾನಗಳನ್ನು ಕೃಷಿಕರು ಮತ್ತು ಸಾರ್ವಜನಿಕರಿಗೆ ಪರಿಚಯ ಮಾಡಿಸಲು ಆಯೋಜಿಸಿದ್ದ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಹಕಾರನಗರ, ಜಕ್ಕೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ತಿಂಡ್ಲು, ಯಲಹಂಕ, ಜಾಲಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಂತೆಗೆ ಆಗಮಿಸಿದ್ದರು. ‘ತಿಂಗಳಿಗೊಮ್ಮೆಯಾದರೂ ಸಂತೆಯನ್ನು ಆಯೋಜಿಸಿದರೆ ಉತ್ತಮ’ ಎಂಬ ಅಭಿಪ್ರಾಯ ಸಾರ್ವಜನಿಕರು, ಉತ್ಪಾದಕರಿಂದ ವ್ಯಕ್ತವಾಗಿದ್ದು ಕಂಡುಬಂತು.

ಬಿತ್ತನೆ ಬೀಜ, ಸಿರಿಧಾನ್ಯಗಳಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು, ಹಣ್ಣು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಗೊಬ್ಬರ, ಕೃಷಿ ಯಂತ್ರೋಪಕರಣ, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣಾ ಜೈವಿಕ ಕೀಟನಾಶಕಗಳು, ಕರಕುಶಲ ವಸ್ತುಗಳು, ಅಡಿಕೆ ಉತ್ಪನ್ನಗಳು, ಅಣಬೆ ಮತ್ತು ಜೇನು ಕೃಷಿ, ರಾಜಮುಡಿ ಅಕ್ಕಿ, ರಾಸಾಯನಿಕ ಮುಕ್ತ ಬೆಲ್ಲ, ಕೃಷಿ ಪ್ರಕಟಣೆ ಮತ್ತಿತರ ವಸ್ತು, ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.

ಹಲಸಿನ ಹಣ್ಣು, ತೆಂಗಿನ ಕಾಯಿ ಮಾರಾಟವೂ ಉತ್ತಮವಾಗಿತ್ತು. ಹಳ್ಳಿಕಾರ್‌ ಹೋರಿ, ಬನ್ನೂರು ಕುರಿ, ಸ್ವರ್ಣಧಾರ ಕೋಳಿಗಳನ್ನೂ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ‘ತರಕಾರಿಗಳ ಬೀಜ, ಸಸಿಗಳು, ಕೃಷಿ ವಿವಿಯ ಪ್ರಕಟಣೆಗಳನ್ನೂ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು’ ಎಂದು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಶಾಲಿನಿ ವಿವರಿಸಿದರು.

ರೇಷ್ಮೆ ಉತ್ಪನ್ನಕ್ಕೆ ಡಿಮ್ಯಾಂಡ್‌

ರೇಷ್ಮೆಯಿಂದ ತಯಾರಿಸಿದ ಉಪ ಉತ್ಪನ್ನಗಳಿಗೆ ಸಂತೆಯಲ್ಲಿ ಭಾರೀ ಬೇಡಿಕೆ ಇದ್ದುದು ಕಂಡುಬಂತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ವಿಜ್ಞಾನಿ ಸೌಮ್ಯಾ ಹಿರೇಗೌಡರ್‌, ‘ರೇಷ್ಮೆಯಿಂದ ತಯಾರಿಸಿದ ಬೊಕ್ಕೆ, ಹೂವು, ಹಾರ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು ಎಂದು ಸಂತಸ ವ್ಯಕ್ತಪಡಿಸಿದರು.ಬೇಕರಿ ತಿನಿಸು ಭರ್ಜರಿ ಸೇಲ್‌

ಬೆಂಗಳೂರು ಕೃಷಿ ವಿವಿಯ ಬೇಕಿಂಗ್‌ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಸುಮಾರು 60 ಉತ್ಪನ್ನಗಳನ್ನು ಸಂತೆಗೆ ತರಲಾಗಿತ್ತು. ಇಷ್ಟೊಂದು ಪ್ರಮಾಣದ ಉತ್ಪನ್ನಗಳು ಹಾಗೂ ವಿದ್ಯಾರ್ಥಿಗಳು ತಯಾರಿಸಿದ್ದ 80 ವಿಧದ ಅಲಂಕಾರಿಕ ಕೇಕ್‌ಗಳೆಲ್ಲಾ ಪೂರ್ಣಪ್ರಮಾಣದಲ್ಲಿ ಮಾರಾಟವಾಗಿದ್ದು ವಿಶೇಷವಾಗಿತ್ತು.

ಸಂಸ್ಥೆಯ ಮುಖ್ಯಸ್ಥೆ ಡಾ। ಸವಿತಾ, ‘ಸಿರಿಧಾನ್ಯಗಳ ಚಕ್ಕುಲಿ, ನಿಪ್ಪಟ್ಟು, ರಾಗಿಯ ಹಪ್ಪಳ, ಬಿಸ್ಕೆಟ್‌, ತೆಂಗಿನ ಉಪ ಉತ್ಪನ್ನಗಳು, ವಿವಿಧ ಸುವಾಸನೆಯ ಮಾಲ್ಟ್‌ ಸೇರಿದಂತೆ ಆಹಾರ ಪದಾರ್ಥಗಳನ್ನು ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು ಎಂದು ಖುಷಿ ಹಂಚಿಕೊಂಡರು.5 ಸಾವಿರ ಜನರು ಸಂತೆಗೆ ಆಗಮಿಸಬಹುದು ಎಂಬ ನಿರೀಕ್ಷೆ ಇದ್ದು, ಪ್ರಾಯೋಗಿಕವಾಗಿ ಆಯೋಜಿಸಲಾಗಿತ್ತು. ಆದರೆ ಸುಮಾರು 15 ಸಾವಿರ ಜನರು ಬಂದಿದ್ದರಿಂದ ಖುಷಿಯಾಗಿದೆ. ಇನ್ನು ಮುಂದೆ ತಿಂಗಳಿಗೊಮ್ಮೆ ಸಂತೆ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು.

-ಡಾ। ಎಸ್‌.ವಿ.ಸುರೇಶ, ಬೆಂಗಳೂರು ಕೃಷಿ ವಿವಿ ಕುಲಪತಿ.

Share this article