ಕನ್ನಡಪ್ರಭ ವಾರ್ತೆ ಕೊಡೇಕಲ್
ಕಳೆದ ಕೆಲ ದಿನಗಳಿಂದ ಆಲಮಟ್ಟಿ ಮೂಲಕ ಅಪಾರ ಪ್ರಮಾಣದ ನೀರಿನ ಒಳಹರಿವು ಉಂಟಾಗಿದ್ದರಿಂದ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳ ಜನರು ಆತಂಕಗೊಂಡಿದ್ದರು.
ಶುಕ್ರವಾರ ಸಂಜೆವರೆಗೆ 2.70 ಲಕ್ಷ ಕ್ಯುಸೆಕ್ ನೀರಿನ ಒಳಹರಿವಿದ್ದ ಜಲಾಶಯಕ್ಕೆ ಶನಿವಾರದಿಂದ 3 ಲಕ್ಷ ಕ್ಯುಸೆಕ್ ಪ್ರಮಾಣದ ನೀರಿನ ಒಳ ಹರಿವು ಉಂಟಾಗಿ ಕ್ರಮೇಣವಾಗಿ ಒಳಹರಿವು ಜಾಸ್ತಿಯಾಗಿತ್ತು. 3.27 ಲಕ್ಷ ಕ್ಯುಸೆಕ್‌ವರೆಗೆ ಏರಿಕೆಯಾದ ಕಾರಣ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು ಕಾಯ್ದುಕೊಂಡು ನದಿಗೆ ಒಳಹರಿವಿನಷ್ಟೆ ಪ್ರಮಾಣದ ನೀರನ್ನು ಜಲಾಶಯದ 30 ಮುಖ್ಯ ಕ್ರಸ್ಟ್ ಗೇಟ್ ಮೂಲಕ ಹರಿಸಲಾಗುತ್ತಿತ್ತು. ಆದರೆ, ಸೋಮವಾರ ಬೆಳಗ್ಗೆ 3 ಲಕ್ಷ ಒಳಹರಿವಿನಿಂದ ಕೂಡಿದ್ದ ಜಲಾಶಯ ಸಂಜೆ ವೇಳೆಗೆ ಒಳಹರಿವಿನಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.ಸೋಮವಾರ ಬೆಳಿಗ್ಗೆ ಜಲಾಶಯಕ್ಕೆ 2.90 ಲಕ್ಷ ಕ್ಯುಸೆಕ್ ನೀರಿನ ಒಳಹರಿವು ಉಂಟಾಗಿರುವ ಕಾರಣ ನದಿಗೆ ಹರಿಸಲಾಗುತ್ತಿದ್ದ ಹೊರ ಹರಿವನ್ನು ಕಡಿಮೆಗೊಳಿಸಲಾಗಿದೆ. 2.70,180 ಕ್ಯುಸೆಕ್ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಇನ್ನು ಹೆಚ್ಚಿನ ಪ್ರವಾಹದ ಭೀತಿಯಲ್ಲಿದ್ದ ನದಿ ತೀರದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. - ಮುಂದುವರಿದ ಪ್ರವಾಹ ಸ್ಥಿತಿ:
33.13 ಟಿಎಂಸಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 23.751 ಟಿಎಂಸಿ ನೀರು ಸಂಗ್ರಹವಿದ್ದು, ಗರಿಷ್ಠ 492.252 ಮೀ. ಜಲಾಶಯದ ನೀರಿನ ಮಟ್ಟ 489.930 ಮೀ. ಇದೆ.