ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ ಸಮೀಪದ ಕೃಷ್ಣಾ ನದಿ ತೀರದಲ್ಲಿ ಕೆಲವರು ಬಟ್ಟೆ, ಹಾಸಿಗೆ ತೊಳೆಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಇದರಿಂದ ನದಿಯ ಸ್ವಚ್ಛತೆ ಮತ್ತು ನೀರಿನ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಪ್ರಜ್ಞಾವಂತ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜನ ಜಾನುವಾರುಗಳ ಅನುಕೂಲಕ್ಕಾಗಿ ಹಿಪ್ಪರಗಿ ಜಲಾಶಯದಲ್ಲಿ ಎಲ್ಲ ಗೇಟ್‌ಗಳನ್ನು ಬಂದ್ ಮಾಡಿ ನೀರು ಸಂಗ್ರಹಿಸಲಾಗಿದೆ. ಹೀಗಾಗಿ ನದಿಯಲ್ಲಿ ಸಂಗ್ರಹವಾಗಿರುವ ನೀರು ಹಲವು ಗ್ರಾಮಗಳ ಜನರು ಹಾಗೂ ಪಟ್ಟಣಗಳ ಕುಡಿಯುವ ನೀರಿನ ಅಗತ್ಯಕ್ಕೆ ಬಳಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನದಿ ನೀರಿನಲ್ಲಿ ಬಟ್ಟೆ, ಹಾಸಿಗೆ ತೊಳೆಯುವುದರಿಂದ ಸಾಬೂನು, ಮಾರ್ಜಕಗಳು ಹಾಗೂ ಇತರ ಕಲ್ಮಶಗಳು ನೀರಿಗೆ ಸೇರುವ ಸಾಧ್ಯತೆಯಿದೆ.ನದಿಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸುತ್ತಿರುವುದರಿಂದ ಅದರ ಸ್ವಚ್ಛತೆ ಕಾಪಾಡುವುದು ಅತ್ಯಂತ ಅಗತ್ಯವಿದೆ. ನೀರು ಕಲುಷಿತಗೊಂಡರೆ ಸಾರ್ವಜನಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕವಿದೆ. ಆದ್ದರಿಂದ ನದಿ ತೀರದಲ್ಲಿ ಇಂತಹ ಚಟುವಟಿಕೆ ನಿಯಂತ್ರಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಹಬ್ಬದ ಸಂಭ್ರಮದ ನಡುವೆ ಜನರು ಸಾರ್ವಜನಿಕ ಜಲಮೂಲಗಳ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಕುಡಿಯುವ ನೀರಿನ ಮೂಲವಾದ ಕೃಷ್ಣಾ ನದಿಯನ್ನು ಕಲುಷಿತಗೊಳಿಸದೆ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ.