ಕನ್ನಡಪ್ರಭವಾರ್ತೆ ಚಿತ್ರದುರ್ಗ
ಸಂಸ್ಕಾರ ಭಾರತಿ ಕರ್ನಾಟಕ, ಕರ್ನಾಟಕ ದಕ್ಷಿಣ ಪ್ರಾಂತ ಸಾಹಿತ್ಯ ವಿಭಾಗದಿಂದ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಬುಧವಾರ ನಡೆದ ಸಾಹಿತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಕೃಷ್ಣ ಶರ್ಮ ಅವರು ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿದ್ದುಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧಿ ಜೊತೆ ತೊಡಗಿಸಿಕೊಂಡು ಅನೇಕ ಲೇಖಕರನ್ನು ಬೆಳೆಸಿದರು. ಗಾಂಧಿ ಸಾಹಿತ್ಯ ಹುಟ್ಟು ಹಾಕಿ ಶ್ರೀರಾಮ ಸಹಕಾರಿ ಬ್ಯಾಂಕ್ ಸ್ಥಾಪಿಸಿ ಉಳಿತಾಯದ ಕಡೆ ಚಿಂತಿಸುವ ಜಾಗೃತಿಯನ್ನು ಜನತೆಯಲ್ಲಿ ಮೂಡಿಸಿದರು ಎಂದರು.
ಭಾರತೀಯ ಸಂಸ್ಕೃತಿಯ ಚೌಕಟ್ಟಿನೊಳಗೆ ಕನ್ನಡ ಸಂಸ್ಕೃತಿ ಎತ್ತಿ ಹಿಡಿದ ಸಿದ್ದವ್ವನಹಳ್ಳಿ ಕೃಷ್ಣಶರ್ಮರವರದು ಮೇರು ವ್ಯಕ್ತಿತ್ವ.ಜಂಗಮ ವೃತ್ತಿಯಂತೆ ಓಡಾಟ ನಡೆಸಿ ಕಷ್ಟ ಕಾಲದಲ್ಲಿಯೂ ಯಾರನ್ನು ಬೇಡಲಿಲ್ಲ. ಅಸಮಾನ್ಯ ಪ್ರತಿಭೆಯುಳ್ಳವರಾಗಿದ್ದ ಕೃಷ್ಣಶರ್ಮರು ಕರ್ನಾಟಕಕ್ಕಷ್ಟೆ ಅಲ್ಲ. ಭಾರತಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪರ್ಣಕುಣಿ ಬರವಣಿಗೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿತು. ಸಾಹಿತ್ಯ ಬರವಣಿಗೆ ಮೂಲಕ ಎಲ್ಲರ ಅಂತರಂಗದಲ್ಲಿ ಉಳಿದುಕೊಂಡಿದ್ದಾರೆ. 140 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದು, ಅದರಲ್ಲಿ ಅನುವಾದವೆ ಜಾಸ್ತಿ. ಆಲೂರು ವೆಂಕಟರಾಯರು, ಬೆಟಗೆರೆ ಕೃಷ್ಣಮೂರ್ತಿ, ಮಹಾತ್ಮಗಾಂಧಿ, ಆಲೂರು ವೆಂಕಟರಾಯರ ಒಡನಾಡಿಯಾಗಿದ್ದರು. ಉರ್ದು, ಮರಾಠಿ ಭಾಷೆಗಳ ಒತ್ತಡವಿರುವ ಕಾಲದಲ್ಲಿ ಕನ್ನಡವನ್ನು ಉಳಿಸಲು ಸ್ವದೇಶಿ ಭಾವನೆ, ಸ್ವಧರ್ಮ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಸಿದ ಶ್ರೇಷ್ಠ ವ್ಯಕ್ತಿತ್ವವುಳ್ಳವರಾಗಿದ್ದರೆಂದು ಪ್ರಶಂಶಿಸಿದರು.ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಸಿದ್ದವ್ವನಹಳ್ಳಿ ಕೃಷ್ಣಶರ್ಮರವರು ಅವರ ಚಿಕ್ಕಪ್ಪನಿಂದ ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಂಡವರು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚು ಒತ್ತು ಕೊಡಬೇಕೆಂಬ ನೀತಿ ಅವರದಾಗಿತ್ತು. ಹೈದರಾಬಾದ್‍ನಲ್ಲಿ ಕನ್ನಡವನ್ನು ಉರ್ದುವಿನಲ್ಲಿ ಹೇಳಿಕೊಡುತ್ತಿದ್ದರು. ನಂತರ ಉರ್ದುವಿನಲ್ಲಿ ಹೇಳಿಕೊಡುವ ಬದಲು ಕನ್ನಡದಲ್ಲಿಯೇ ಕನ್ನಡವನ್ನು ಕಲಿಸಲು ಆರಂಭಿಸಿ ಹೋದ ಕಡೆಗಳಲ್ಲಾ ಕನ್ನಡದ ಕಂಪನ್ನು ಪಸರಿಸಿ ಹುಣಸೆ ಮರ, ಆಲದ ಮರದ ರೀತಿ ಬದುಕಿದವರು ಎಂದರು.
ಸಂಸ್ಕಾರ ಭಾರತಿ ಜಿಲ್ಲಾ ಸಮಿತಿ ಅಧ್ಯಕ್ಷ ಉಮೇಶ್ ವಿ.ತುಪ್ಪದ್ ಅಧ್ಯಕ್ಷತೆ ವಹಿಸಿದ್ದರು. ಜ್ಞಾನಪೂರ್ಣ ಇಂಟರ್ ನ್ಯಾಷನಲ್ ಸ್ಕೂಲ್‍ನ ಸಂಸ್ಥಾಪಕ ವೆಂಕಟೇಶ್‍ರೆಡ್ಡಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್, ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಸಾಹಿತ್ಯ ವಿಭಾಗ ಸಂಸ್ಕಾರ ಭಾರತಿಯ ಸಂಚಾಲಕರುಗಳಾದ ಡಾ.ಕೆ.ರಾಜೀವಲೋಚನ, ಚಂದ್ರಿಕಾ ಸುರೇಶ್, ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿ ಮಾರುತಿ ಮೋಹನ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಇವರುಗಳು ವೇದಿಕೆಯಲ್ಲಿದ್ದರು. ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಬದುಕು-ಬರಹ ಕುರಿತು ಚಿಂತಕ ಡಾ.ಜಿ.ಬಿ.ಹರೀಶ್, ಪ್ರಮುಖ ಕೃತಿಗಳ ಅವಲೋಕನ ಕುರಿತು ವಿಮರ್ಶಕಿ ಡಾ.ತಾರಿಣಿ ಶುಭದಾಯಿನಿ, ಪತ್ರಿಕಾ ಬರಹಗಳ ಅವಲೋಕನ ಕುರಿತು ತುಮಕೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಸಿಬಂತಿ ಪದ್ಮನಾಭ ವಿಷಯ ಮಂಡಿಸಿದರು.