ಕುಕನೂರು: ಯಲಬುರ್ಗಾ ಕ್ಷೇತ್ರದಲ್ಲಿ ಬರೋಬ್ಬರಿ 19ಕೆರೆಯ ಭೂ ಒಡಲನ್ನು ಕೃಷ್ಣ ನದಿಯ ನೀರು ತುಂಬಲಿದೆ. ಕ್ಷೇತ್ರದ ಜನತೆಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ಕಲ್ಪಿಸಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಮಾಡಿಕೊಂಡ ಪ್ರಸ್ತಾವನೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ₹272 ಕೋಟಿ ವೆಚ್ಚದಲ್ಲಿ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬೆಳಗಾವಿಯಲ್ಲಿ ಜರುಗುತ್ತಿರುವ ಅಧಿವೇಶನದಲ್ಲಿ ನ. 18ರಂದು ಸಚಿವ ಸಂಪುಟ ಅನುಮೋದನೆ ನೀಡಿದೆ.
ಯಲಬುರ್ಗಾ ಡಿಪಿಎಪಿ ಕ್ಷೇತ್ರ: ಡಾ.ಡಿ.ಎಂ. ನಂಜುಡಪ್ಪ ಸಮಿತಿ ವರದಿ ಪ್ರಕಾರ ಬರಪೀಡಿತ ಕ್ಷೇತ್ರ ಯಲಬುರ್ಗಾ. ಅಂಜರ್ತಲ ಮಟ್ಟ ಸಹ ಇಲ್ಲಿ ಕಡಿಮೆ ಇದ್ದು. ಕೇಂದ್ರ, ರಾಜ್ಯ ಸರ್ಕಾರ ಈ ಕ್ಷೇತ್ರವನ್ನು ಡಿಪಿಎಪಿ (ಬರಪೀಡಿತ ಪ್ರದೇಶ ಕ್ಷೇತ್ರ) ಹಾಗೂ ಕಡಿಮೆ ಮಳೆ ಆಗುವ ಪ್ರದೇಶ ಎಂದು ಸಹ ಘೋಷಿಸಿದೆ. ಒಣ ಬೇಸಾಯ ನಂಬಿ ಜನ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಕೆರೆಗಳಿಗೆ ನೀರು ಬರುವುದರಿಂದ ಕ್ಷೇತ್ರದ ಅಂತರ್ಜಲ ಮಟ್ಟ ಸುಧಾರಣೆ ಆಗಲಿದೆ.
ಕೃಷ್ಣಾ ನದಿಯಿಂದ ನೀರು: ಈಗಾಗಲೇ ಇರುವ 19 ಕೆರೆಗಳಿಗೆ ಕೃಷ್ಣ ನದಿಯಿಂದ ನೀರು ತುಂಬಿಸುವ ಕಾರ್ಯ ಆಗಲಿದೆ. ಕೃಷ್ಣ ಭಾಗ್ಯ ಜಲನಿಗಮದಿಂದ ನೀರಿನ ಹಂಚಿಕೆ ಮಾಡಲು ನಿರ್ದೇಶನ ಸಹ ನೀಡಲಾಗಿದೆ.ಕೆರೆಗಳಿಗೆ ನೀರು ತುಂಬಿಸುವುದರಿಂದ ಬೇಸಿಗೆ ವೇಳೆ ಜಾನುವಾರುಗಳಿಗೆ ನೀರಿನ ಅಭಾವ ಆಗದು. ಅಲ್ಲದೆ ಅಂತರ್ಜಲ ಮಟ್ಟ ಸಹ ಕುಗ್ಗುವುದಿಲ್ಲ. ಅಲ್ಲದೆ ಅಂತರ್ಜಲ ಮಟ್ಟ ಹೆಚ್ಚಳದಿಂದ ರೈತರು ನೀರಾವರಿ ಸಹ ಮಾಡಿಕೊಳ್ಳಬಹುದು.
19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಕ್ಷೇತ್ರದಲ್ಲಿ ನೀರಿನ ಅಭಾವ ನೀಗಲಿದೆ. ಶಾಸಕ ರಾಯರಡ್ಡಿ ಕೆರೆ ತುಂಬಿಸುವ ಯೋಜನೆಗಳನ್ನು ಈ ಹಿಂದೆಯೂ ಸಹ ಮಂಜೂರು ಮಾಡಿಸಿ ಕೆರೆ ತುಂಬಿಸಿದ್ದಾರೆ. ಸದ್ಯ 19 ಕೆರೆಗಳಿಗೆ ನೀರು ತರುವ ಯೋಜನೆಗೆ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಸಹ ಕೊಡಿಸಿದ್ದಾರೆ. ಇದರಿಂದ ಕ್ಷೇತ್ರಕ್ಕೆ ಅನುಕೂಲ ಆಗಲಿದೆ ಎಂದು ಯಲಬುರ್ಗಾ ಹಾಗೂ ಕುಕನೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಹಳ್ಳಿ, ಸಂಗಮೇಶ ಗುತ್ತಿ ತಿಳಿಸಿದ್ದಾರೆ.ಯಲಬುರ್ಗಾ ಮತ್ತು ಕುಕುನೂರು ತಾಲೂಕಿನ 19 ಕೆರೆಗಳಿಗೆ ಕೃಷ್ಣ ನದಿಯಿಂದ ನೀರು ತುಂಬಿಸುವ ಯೋಜನೆಗೆ ₹272 ಕೋಟಿ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೆರೆಗಳಿಗೆ ನೀರು ತುಂಬುವುದರಿಂದ ನೀರಿನ ಅಭಾವ ಆಗದು. ಅಲ್ಲದೆ ಅಂತರ್ಜಲ ಮಟ್ಟ ಸಹ ಹೆಚ್ಚಲಿದೆ. ಮುಂದಿನ ತಿಂಗಳು ಟೆಂಡರ್ ಕರೆದು ಕಾಮಗಾರಿಯನ್ನು ಫೆಬ್ರುವರಿ 2026 ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.