ನಾಳೆ ಬಿಎಸ್ಎಸ್ ವಿದ್ಯೋದಯ ಶಾಲೆ ಉದ್ಘಾಟನೆ

KannadaprabhaNewsNetwork |  
Published : May 22, 2024, 12:49 AM IST
4 | Kannada Prabha

ಸಾರಾಂಶ

ನೂತನ ಶಾಲಾ ಕಟ್ಟಡವನ್ನು ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಯಾವುದೇ ಸಾಲ ಪಡೆಯದೇ ಶೇ.50 ರಷ್ಟು ಆರ್ಥಿಕ ಮೂಲವನ್ನು ದಾನಿಗಳಿಂದ ಪಡೆಯಲಾಗಿದ್ದು, ಉಳಿದ ಅನುದಾನವನ್ನು ವಿಜಯ ವಿಠಲ ವಿದ್ಯಾಸಂಸ್ಥೆಯು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯನ್ನು ತಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕೃಷ್ಣಮೂರ್ತಿಪುರಂ ರಾಮಯ್ಯ ರಸ್ತೆಯಲ್ಲಿ ಬಿಎಸ್ಎಸ್ (ವೈ.ಕೆ. ಅಮೃತಾ ಬಾಯಿ, ಎಸ್.ಕೆ. ಸುರಮಾ ಬಾಯಿ ಭಗಿನಿ ಸೇವಾ ಸಮಾಜ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್) ವಿದ್ಯೋದಯ ಶಾಲೆಯನ್ನು ಮೇ 23ರ ಸಂಜೆ 5ಕ್ಕೆ ಉದ್ಘಾಟಿಸಲಾಗುವುದು ಎಂದು ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ತಿಳಿಸಿದರು.

ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಬರುವ ಬಿಎಸ್ಎಸ್ ವಿದ್ಯೋದಯ ಹೊಸ ಶಾಲೆಯ ಉದ್ಘಾಟನಾ ಕಾರ್ಯಕ್ರಮವು ಉಡುಪಿ ಪಾಲಿಮಾರು ಮಠದ ಶ್ರೀ ವಿದ್ಯಾದೀಶತೀರ್ಥ ಸ್ವಾಮೀಜಿ, ಸುತ್ತೂರು ಮಠದ ಶ್ರಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನೂತನ ಶಾಲಾ ಕಟ್ಟಡವನ್ನು ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಯಾವುದೇ ಸಾಲ ಪಡೆಯದೇ ಶೇ.50 ರಷ್ಟು ಆರ್ಥಿಕ ಮೂಲವನ್ನು ದಾನಿಗಳಿಂದ ಪಡೆಯಲಾಗಿದ್ದು, ಉಳಿದ ಅನುದಾನವನ್ನು ವಿಜಯ ವಿಠಲ ವಿದ್ಯಾಸಂಸ್ಥೆಯು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯನ್ನು ತಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.

2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಶಾಲೆ ಅಳವಡಿಸಿಕೊಂಡಿದ್ದು, ಅದರಂತೆ ಕಟ್ಟಡವನ್ನು ನಿರ್ಮಿಸಲಾಗಿದೆ. ಹಾಗೆಯೇ ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿ ನಿಯಮದಂತೆ ಈ ಕಟ್ಟಡವಿದ್ದು, ವಿದ್ಯಾರ್ಥಿ ಸ್ನೇಹಿಯಾಗಿ ತರಗತಿಗಳನ್ನು ರೂಪಿಸಲಾಗಿದೆ. ಈ ಶಾಲೆಯೂ ಸಂಪೂರ್ಣ ಸಿಬಿಎಸ್ಸಿ ಪಠ್ಯಕ್ರಮ ಹೊಂದಿರಲಿದ್ದು, ಅದಕ್ಕಾಗಿ ಅನುಮತಿ ಕೇಳಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಭಗಿನಿ ಸೇವಾ ಸಮಾಜ

ವೈ.ಕೆ. ಅಮೃತಾ ಬಾಯಿ ಅವರು 1923ರಲ್ಲಿ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಭಗಿನಿ ಸೇವಾ ಸಮಾಜ ಆರಂಭಿಸಿ, ಹೊಲಿಗೆ, ಚಿತ್ರಕಲೆ, ಸಂಗೀತ ಕಲಿಸುವ ಕೆಲಸ ಮಾಡಿದ್ದರು. ಬಳಿಕ ಅವರ ಪುತ್ರಿ ಎಸ್.ಕೆ. ಸುರಮಾ ಬಾಯಿ ಅವರು 1963ರಲ್ಲಿ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರಾಥಮಿಕ ಶಾಲೆ ಸ್ಥಾಪಿಸಿದರು. ಸಂಸ್ಥೆಯು ಕಾಲ ನಂತರ 1 ರಿಂದ 10ನೇ ತರಗತಿವರೆಗೆ 1 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿತ್ತು.

ಆದರೆ, ಸುರಮಾ ಬಾಯಿ ಕುಟುಂಬ ಬೆಂಗಳೂರಿಗೆ ತೆರಳುತ್ತಿದ್ದಂತೆ ಶಾಲೆಯ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗದ ಹಿನ್ನೆಲೆ ಸುರಮಾ ಬಾಯಿ ಅವರ ಪುತ್ರಿ ಪದ್ಮಜಾ ಶ್ರೀನಿವಾಸ್ ಅವರು 2011ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಭಗಿನಿ ಸೇವಾ ಸಮಾಜ ಸಂಸ್ಥೆಯ ಜವಾಬ್ದಾರಿಯನ್ನು ನೀಡಿದರು ಎಂದು ಅವರು ತಿಳಿಸಿದರು.

ಶಾಲೆಯ ಹಳೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದರಿಂದ ಶಾಲೆಯಲ್ಲಿದ್ದ ಮಕ್ಕಳನ್ನು ಪಕ್ಕದ ಶಾಲೆಗಳಿಗೆ ವರ್ಗಾಯಿಸಿ, ಕಟ್ಟಡ ತೆರವು ಮಾಡಿ 2022ರಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಪೇಜಾವರ ಶ್ರೀ ಭೂಮಿಪೂಜೆ ನೆರವೇರಿಸಿದ್ದರು. ಸದ್ಯಕ್ಕೆ ಕಟ್ಟಡ ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ಮೆಡಿಟೇಷನ್ ಹಾಲ್, ಆಕ್ಟಿವಿಟಿ ರೂಂ, ಮೈದಾನ, ಗ್ರಂಥಾಲಯ ಹಾಗೂ ವಿಜ್ಞಾನದ ಲ್ಯಾಬ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ಶಾಲೆಯ ಖಜಾಂಚಿ ಎಚ್.ಟಿ. ಸ್ವರ್ಣಕುಮಾರ್, ಟ್ರಸ್ಟಿ ಮುರಳೀಧರ ಭಟ್, ಪ್ರಾಂಶುಪಾಲ ಪವನ್ ಕುಮಾರ್ ಇದ್ದರು.

-----

ಕೋಟ್...

ಬಿಎಸ್ಎಸ್ ವಿದ್ಯೋದಯ ಶಾಲೆಯು ಈ ಶೈಕ್ಷಣಿಕ ಸಾಲಿನಿಂದ ನರ್ಸರಿ ಸೇರಿದಂತೆ 1 ರಿಂದ 5ನೇ ತರಗತಿಗೆ ದಾಖಲಾತಿ ನಡೆಸಲಾಗುತ್ತಿದ್ದು, ಈವರೆಗೆ 150 ಮಕ್ಕಳು ದಾಖಲಾಗಿದ್ದು, ಒಟ್ಟಾರೆ 250 ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ ಇದೆ. ಈಗಾಗಲೇ 11 ಜನ ಶಿಕ್ಷಕರು ಸೇರಿದಂತೆ ಒಟ್ಟು 27 ಸಿಬ್ಬಂದಿಯನ್ನು ಈಗಾಗಲೇ ನೇಮಿಸಲಾಗಿದೆ. ಮುಂದಿನ ವರ್ಷದಿಂದ ಹಂತ ಹಂತವಾಗಿ 6 ರಿಂದ 10ನೇ ತರಗತಿಯನ್ನು ಆರಂಭಿಸಲಾಗುವುದು, ಅಗತ್ಯಕ್ಕೆ ತಕ್ಕಂತೆ ಶಿಕ್ಷಕರನ್ನು ನೇಮಿಸಲಾಗುವುದು.

- ಆರ್. ವಾಸುದೇವ ಭಟ್, ಗೌರವ ಕಾರ್ಯದರ್ಶಿ, ಬಿಎಸ್ಎಸ್ ವಿದ್ಯೋದಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಎಂ ಹೇಳ್ತಿರೋ ಆರೆಂಜ್‌ ಆರ್ಥಿಕತೆ ರಾಜ್ಯದಲ್ಲಿ 2016ಲ್ಲೇ ನೀತಿ ಜಾರಿ: ಡಿಕೆ
ಸರ್ಕಾರಕ್ಕೆ ನಿಧಿ ನೀಡಿದ್ದ ಲಕ್ಕುಂಡಿ ಪ್ರಜ್ವಲ್‌ಗೆ ಸರ್ಕಾರದಿಂದ ಸಿಕ್ತು ಬಂಪರ್ ಗಿಫ್ಟ್