ಕಾಂಗ್ರೆಸ್ ಮರು ಸೇರ್ಪಡೆಗೊಂಡಿದ್ದ ನಾಯಕ । ಬೈಕ್ ರ್‍ಯಾಲಿ ಮೂಲಕ ಘೋಷಣೆ
ಕನ್ನಡಪ್ರಭ ವಾರ್ತೆ ಅರಕಲಗೂಡುಕಾಂಗ್ರೆಸ್ಗೆ ಮರು ಸೇರ್ಪಡೆಯಾದ ಸಮಾಜ ಸೇವಕ ಎಂ.ಟಿ.ಕೃಷ್ಣೇಗೌಡ ಅವರನ್ನು ಪಕ್ಷದ ಕಾರ್ಯಕರ್ತರು ಶನಿವಾರ ಬೈಕ್ ರ್‍ಯಾಲಿ ಮೂಲಕ ಅದ್ದೂರಿ ಸ್ವಾಗತ ಕೋರಿದರು.
ತಾಲೂಕಿನ ಗಡಿ ಭಾಗದ ಕಳ್ಳಿಮುದ್ದನಹಳ್ಳಿ ಬಳಿ ಜಮಾಯಿಸಿದ್ದ ಅಪಾರ ಕಾರ್ಯಕರ್ತರು ಹಾಗೂ ಬೆಂಬಲಿಗರು ಕೃಷ್ಣೇಗೌಡ ಅವರಿಗೆ ಸ್ವಾಗತ ಕೋರಿ ಬೈಕ್ ರ್‍ಯಾಲಿ ಮೂಲಕ ಪಟ್ಟಣಕ್ಕೆ ಬರ ಮಾಡಿಕೊಂಡರು. ಅನಕೃ ಸರ್ಕಲ್‌ನಲ್ಲಿ ಕೃಷ್ಣೇಗೌಡ ಅವರನ್ನು ಹೆಗಲ ಮೇಲೆ ಹೊತ್ತು ಹೂಮಳೆ ಸುರಿಸಿ ಸಂಭ್ರಮಿಸಿದರು, ಅನಕೃ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಕೃಷ್ಣೆಗೌಡರು ಮೆರವಣಿಗೆ ಮೂಲಕ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನಿವಾರ್ಯ ಕಾರಣಗಳಿಂದ ಪಕ್ಷದ ಟಿಕೆಟ್ ಸಿಗದೆ ಕೃಷ್ಣೇಗೌಡ ದೂರ ಉಳಿದಿದ್ದರು. ಪಕ್ಷೇತರವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 56 ಸಾವಿರ ಮತಗಳನ್ನು ಪಡೆದು ಜನ ಮೆಚ್ಚುಗೆ ಗಳಿಸಿದರು. ಅವರನ್ನು ಯಾವುದೇ ಶರತ್ತುಗಳಿಲ್ಲದೇ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಮರು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು ಇವರು ಪಕ್ಷದಲ್ಲಿ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಬೇಕು ಎಂದು ತಿಳಿಸಿದರು.
ಎಂ.ಟಿ.ಕೃಷ್ಣೇಗೌಡ ಮಾತನಾಡಿ, ‘ಕಾಂಗ್ರೆಸ್ ಬಡವರ ಪರವಾದ ಪಕ್ಷವಾಗಿದ್ದ ತತ್ವ, ಸಿದ್ಧಾಂತಗಳನ್ನು ಮೆಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒಕ್ಕೊರಲ ಆಹ್ವಾನದ ಮೇರೆಗೆ ಸೇರಿದ್ದು ನಾನೂ ಕೂಡ ಬಡವರ ಪರವಾಗಿ ಕೆಲಸ ಮಾಡುವ ಮೂಲಕ ಪಕ್ಷದ ಏಳಿಗೆಗೆ ಹಾಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಶ್ರೇಯಸ್ ಪಟೇಲ್ ಅವರ ಗೆಲುವಿಗೆ ಶ್ರಮಿಸುತ್ತೇನೆ’ ಎಂದು ತಿಳಿಸಿದರು.‘ಪಕ್ಷದಲ್ಲಿ ಯಾವುದೇ ಸ್ಥಾನಮಾನದ ನಿರೀಕ್ಷೆ ಇಟ್ಟುಕೊಂಡಿಲ್ಲ. ನನ್ನ ಸೇವೆ ಪರಿಗಣಿಸಿ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರ ನೀಡುವ ವಿಶ್ವಾಸವಿದೆ. ಇಲ್ಲಿ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ಎಲ್ಲರೂ ದುಡಿಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡರಾದ ಡಾ. ದಿನೇಶ್ ಭೈರೇಗೌಡ, ಸಿ.ಡಿ.ದಿವಾಕರ್ ಗೌಡ, ಸುರೇಶ್, ಗಣೇಶ್ ವೇಲಾಪುರಿ, ಅಬ್ದುಲ್ ಬಾಸಿತ್, ರಾಮೇಗೌಡ, ಹೇಮಂತಕುಮಾರ್, ಎಲ್.ಬಿ.ಕೃಷ್ಣ, ಮಧು, ಜಮೀರ್ ಪಾಷಾ ಇದ್ದರು.ಕಾಂಗ್ರೆಸ್‌ಗೆ ಮರು ಸೇರ್ಪಡೆಯಾದ ಸಮಾಜ ಸೇವಕ ಎಂ.ಟಿ.ಕೃಷ್ಣೇಗೌಡ ಅವರಿಗೆ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.