2028ರ ವೇಳೆಗೆ ಕೆಆರ್‌ಪಿ ಪಕ್ಷ ಅಧಿಕಾರಕ್ಕೆ: ಜನಾರ್ದನ ರೆಡ್ಡಿ

KannadaprabhaNewsNetwork | Published : Jan 12, 2024 1:46 AM

ಸಾರಾಂಶ

2028ರ ವೇಳೆಗೆ ಕೆಆರ್‌ಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ, ಲೋಕಸಭಾ ಚುನಾವಣೆಯಲ್ಲಿ ನಾವು ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಕೆಆರ್‌ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪಕ್ಷ ಸಂಘಟನೆ ಕುರಿತು ಮಾತನಾಡಿದ್ದಾರೆ.

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕೆಆರ್‌ಪಿ ಪಕ್ಷ ತನ್ನ ಶಕ್ತಿ ಪ್ರದರ್ಶನ ಮಾಡಲಿದೆ ಮತ್ತು 2028ರ ವೇಳೆಗೆ ಕೆಆರ್‌ಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಕೆಆರ್‌ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.ನಗರದಲ್ಲಿ ಕೆಆರ್‌ಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ನಾವು ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ. ಕೊಪ್ಪಳ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 100 ಸಭೆಗಳನ್ನು ನಡೆಸುವ ಮೂಲಕ ಇಲ್ಲಿ ಗೆಲ್ಲುವುದಕ್ಕಾಗಿ ಶ್ರಮಿಸುತ್ತೇವೆ ಎಂದರು.

ಲೋಕಸಭಾ ಚುನಾವಣೆಯ ಆನಂತರ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ನಾನು ಪಕ್ಷ ಸಂಘಟನೆಗಾಗಿ ನಿರಂತರ ಪ್ರಯತ್ನ ಮಾಡುತ್ತೇನೆ ಮತ್ತು ಅದು ಹೇಗೆ ಇರುತ್ತದೆ ಎಂದರೆ 2028 ವಿಧಾನಸಭಾ ಚುನಾವಣೆ ಆನಂತರ ನಮ್ಮ ಪಕ್ಷ ಅಧಿಕಾರದಲ್ಲಿರುತ್ತದೆ. ಅಲ್ಲಿಯವರೆಗೂ ನಾನು ವಿಶ್ರಮಿಸುವುದಿಲ್ಲ ಎಂದು ಶಪತ ಮಾಡಿದರು.ನಾನು ಪಕ್ಷ ಸ್ಥಾಪನೆ ಮಾಡಿ, ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾದಾಗ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಟೆನ್ಶನ್ ಪ್ರಾರಂಭವಾಗಿತ್ತು. ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಕೆಲವರು ಚಿಂತೆಗೀಡಾಗಿದ್ದರು. ಗಂಗಾವತಿಯಲ್ಲಿ ಸ್ಪರ್ಧೆ ಮಾಡಿದ ಮೇಲೆ ಉಳಿದವರು ನಿರಾಳವಾದವರು. ನಾನು ಜನಸಂಪರ್ಕ ಸಭೆಗಳನ್ನು ನಡೆಸಲು ಆನೆಗೊಂದಿ, ಇರಕಲ್ಗಡ ಸೇರಿದಂತೆ ಅನೇಕ ಕಡೆ ಸ್ವಂತ ಕಚೇರಿ ಮಾಡುತ್ತೇನೆ ಎಂದರು.

ಜನರಿಗೆ ನನ್ನನ್ನು ಭೇಟಿಯಾಗುವುದಕ್ಕೆ ತೊಂದರೆಯಾಗಬಾರದು ಎಂದು ದಿನಾಂಕವನ್ನು ಮುಂಚಿತವಾಗಿಯೇ ತಿಳಿಸುತ್ತೇನೆ ಮತ್ತು ನಿಗದಿಯಾದ ಸ್ಥಳಗಳಲ್ಲಿ ಅಧಿಕಾರಿಗಳೊಂದಿಗೆ ಬೆಳಗ್ಗೆಯಿಂದ ರಾತ್ರಿ ವರೆಗೂ ಅಲ್ಲಿಯೇ ಇರುತ್ತೇನೆ. ಅಲ್ಲಿಗೆ ಬರುವವರಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.

ಶಾಸಕರೇ ಆಗಲಿ, ಸರ್ಕಾರವೇ ಆಗಲಿ ಜನರ ಮನೆಬಾಗಲಿಗೆ ಹೋಗಬೇಕು. ಕೊಪ್ಪಳದೊಂದಿಗೆ ನಾನು ಹಲವು ವರ್ಷಗಳಿಂದ ನಂಟು ಹೊಂದಿದ್ದೇನೆ. ಕೊಪ್ಪಳ ಜಿಲ್ಲಾಕೇಂದ್ರ ಅಭಿವೃದ್ಧಿಯಾಗಿರುವುದು ಅಷ್ಟಕ್ಕಷ್ಟೆ. ದೊಡ್ಡ ದೊಡ್ಡ ಫ್ಯಾಕ್ಚರಿಗಳಿವೆ. ಆದರೆ, ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಫ್ಯಾಕ್ಚರಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತಾಗಬೇಕು. ಜಿಲ್ಲೆಯವರಿಗೆ ಆದ್ಯತೆ ನೀಡಬೇಕು. ಇದಕ್ಕೆ ಅವಕಾಶ ನೀಡದೆ ಫ್ಯಾಕ್ಚರಿಗಳನ್ನು ನಡೆಸುವುದಕ್ಕೆ ಜನಾರ್ದನ ರೆಡ್ಡಿ ಬಿಡುವುದಿಲ್ಲ ಎಂದು ರೆಡ್ಡಿ ಹೇಳಿದರು.ಸಂಸದ ಸಂಗಣ್ಣ ಕರಡಿ ಅವರ ಬಗ್ಗೆ ಗೌರವ ಇದೆ. ಸಂಸದರಾಗಿ ಹತ್ತು ವರ್ಷಗಳಾಗಿವೆ. ಆದರೆ ಅವರಿಗೆ ರಾಷ್ಟ್ರೀಯ ಪಕ್ಷದ ವಿರುದ್ಧ ಧ್ವನಿ ಎತ್ತುವ ಧೈರ್ಯ ಆಗುತ್ತಿಲ್ಲ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಇವರು ರಸ್ತೆಗೆ ಕುಳಿತು ಪ್ರತಿಭಟನೆ ಮಾಡಿದರೆ ಏನರ್ಥ? ಅಧಿಕಾರದಲ್ಲಿ ಇದ್ದಾಗ ಏನೂ ಮಾಡದವರು, ಪಕ್ಷ ಅಧಿಕಾರದಲ್ಲಿ ಇಲ್ಲದಾಗ ಪ್ರತಿಭಟನೆ ಮಾಡಿದರೆ ಹೇಗೆ? ಎಂದು ಪ್ರಶ್ನೆ ಮಾಡಿದರು.ಅಂಜನಾದ್ರಿಗೆ ರೈಲು ನಿಲ್ದಾಣ ಆಗಬೇಕು ಎಂದು ಮನವಿ ಮಾಡುತ್ತಾರೆ. ಕೇಂದ್ರ ಸಚಿವರಿಗೆ ಮನವಿ ನೀಡಿ, ಫೋಟೋ ತೆಗೆಸಿಕೊಂಡು ಬರುತ್ತಾರೆ. ಹತ್ತು ವರ್ಷ ಏನು ಮಾಡಿದೀರಿ? ಎಂದು ಕಿಡಿಕಾರಿದರು.ಅಂಜನಾದ್ರಿ ನಮ್ಮ ಕೊಪ್ಪಳದಲ್ಲಿ ಇರುವುದು ನಮ್ಮ ಪುಣ್ಯ. ಆದರೆ, ಇದರ ಅಭಿವೃದ್ಧಿ ನಿರೀಕ್ಷೆಯಂತೆ ಆಗುತ್ತಿಲ್ಲ. ಬಳ್ಳಾರಿಯಲ್ಲಿ ನಾನು ಇರುವಾಗ ಆದ ಅಭಿವೃದ್ಧಿ ಮತ್ತೆ ಆಗಿಲ್ಲ. ಶ್ರೀರಾಮುಲು ಅವರನ್ನು ಮಾಧ್ಯಮದವರು ಕೇಳಿದರೆ ಜನಾರ್ದನ ರೆಡ್ಡಿ ಅವರಿಗೆ ಇರುವ ಧೈರ್ಯ ನನಗೆ ಇಲ್ಲ ಎಂದು ಹೇಳುತ್ತಾರೆ ಎಂದರು.

ಅಭಿವೃದ್ಧಿಯ ಪ್ರಶ್ನೆ ಮಾಡಿದರೆ ಎಲ್ಲಿ ಸಚಿವ ಸ್ಥಾನ ತೆಗೆಯುತ್ತಾರೋ ಅಥವಾ ಮುಂದಿನ ಬಾರಿ ಟಿಕೆಟ್ ನೀಡುವುದಿಲ್ಲ ಎನ್ನುವ ಭಯ ಇವರಲ್ಲಿದೆ. ಆದರೆ, ಜನಾರ್ದನ ರೆಡ್ಡಿ ಅವರಿಗೆ ಮಾತ್ರ ಆ ಭಯ ಇಲ್ಲ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತುವುದಿಲ್ಲ. ಆ ಧೈರ್ಯ ಮಾಡುವುದೂ ಇಲ್ಲ. ಅಭಿವೃದ್ಧಿಯಾಗಿಲ್ಲ ಎನ್ನುವ ಕುರಿತು ಧ್ವನಿ ಎತ್ತುವುದಿಲ್ಲ ಎಂದರು.

ಬೈಕ್ ರ‍್ಯಾಲಿ: ಇದಕ್ಕೂ ಮೊದಲು ನಗರದಲ್ಲಿ ರೆಡ್ಡಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು ಮತ್ತು ರಕ್ತದಾನ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಕೆಆರ್‌ಪಿ ಪಕ್ಷದ ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ, ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಮಹಾಂತೇಶ ಸಂಗಟಿ ಮೊದಲಾದವರು ಇದ್ದರು.

Share this article