ಒಂದೇ ವರ್ಷದಲ್ಲಿ ಕೆಆರ್‌ಎಸ್ 3ನೇ ಬಾರಿ, 93 ವರ್ಷದಲ್ಲಿ 77 ಸಲ ಭರ್ತಿ!

KannadaprabhaNewsNetwork |  
Published : Oct 27, 2025, 12:15 AM IST
ಒಂದೇ ವರ್ಷದಲ್ಲಿ ಕೆಆರ್ ಎಸ್ 3ನೇ ಬಾರಿ ಭರ್ತಿ...93 ವರ್ಷದಲ್ಲಿ 77 ಬಾರಿ ಭರ್ತಿ | Kannada Prabha

ಸಾರಾಂಶ

ಒಂದೇ ವರ್ಷದಲ್ಲಿ ಮೂರನೇ ಬಾರಿ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿ ಇತಿಹಾಸ ನಿರ್ಮಾಣದ ಜೊತೆಗೆ ಬೆಂಗಳೂರಿಗೆ ಬೇಸಿಗೆ ನೀರಿನ ಕೊರತೆ ದೂರವಾಗುತ್ತದೆ. ಪಕ್ಕದ ತಮಿಳುನಾಡಿಗೆ ಈ ವರ್ಷ ಕರ್ನಾಟಕದಿಂದ ಹರಿಸಬೇಕಿದ್ದ ನೀರಿನ ಹಂಚಿಕೆಯ ಸಮಸ್ಯೆ ಕೂಡ ಬಗೆಹರಿದಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಒಂದೇ ವರ್ಷದಲ್ಲಿ ಮೂರನೇ ಬಾರಿ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿ ಇತಿಹಾಸ ನಿರ್ಮಾಣದ ಜೊತೆಗೆ ಬೆಂಗಳೂರಿಗೆ ಬೇಸಿಗೆ ನೀರಿನ ಕೊರತೆ ದೂರವಾಗುತ್ತದೆ. ಪಕ್ಕದ ತಮಿಳುನಾಡಿಗೆ ಈ ವರ್ಷ ಕರ್ನಾಟಕದಿಂದ ಹರಿಸಬೇಕಿದ್ದ ನೀರಿನ ಹಂಚಿಕೆಯ ಸಮಸ್ಯೆ ಕೂಡ ಬಗೆಹರಿದಂತಾಗಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ (16/6/2018ರಂತೆ) ತಮಿಳುನಾಡಿಗೆ ವರ್ಷಕ್ಕೆ 177.25 ನೀರನ್ನು ಹರಿಸಬೇಕಿತ್ತು.‌ ಈ ವರ್ಷದ ಜೂನ್ 2025ರಿಂದ ಇಲ್ಲಿಯವರೆಗೆ 138.014 ಟಿಎಂಸಿ ನೀರು ಬಿಳಿಗೊಂಡ್ಲು ಜಲ ಮಾಪನ ಕೇಂದ್ರದಿಂದ ತಮಿಳುನಾಡಿಗೆ ಬಿಡಬೇಕಿತ್ತು. ಉತ್ತಮ ಮಳೆ ಹಿನ್ನೆಲೆಯಲ್ಲಿ 273.426 ಟಿಎಂಸಿ ನೀರು ಹರಿದು ಹೋಗಿದೆ. ಹೆಚ್ಚುವರಿಯಾಗಿ 135.412 ಟಿಎಂಸಿ ನೀರು ಹರಿದಿದ್ದು, ಇದರಿಂದ ಎರಡು ರಾಜ್ಯಗಳ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿದಂತಾಗಿದೆ.

ಕಾವೇರಿ ಜಲಾನಯನ ಪ್ರದೇಶದ ಹಾರಂಗಿ, ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳು ಅಕ್ಟೋಬರ್‌ನಲ್ಲಿ ಮತ್ತೆ ಭರ್ತಿಯಾಗಿ 115 ಟಿಎಂಸಿ ನೀರು ಸಂಗ್ರಹವಿದೆ. ಇದರ ಜೊತೆಗೆ ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ 6576 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಅಲ್ಲದೇ, ಸಣ್ಣ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಕೆರೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿವೆ.

ಬೆಂಗಳೂರಿಗೆ ವರ್ಷಕ್ಕೆ 31 ಟಿಎಂಸಿ ನೀರು ಕುಡಿಯುವ ನೀರು, ಅಂದರೆ ಪ್ರತಿ ತಿಂಗಳು 2.60 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆದರೆ, ಈ ವರ್ಷ ಬೆಂಗಳೂರಿನ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಕೆಆರ್ ಎಸ್ ಭರ್ತಿಯಾದ ನಂತರ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಬಿಳಿಗೊಂಡ್ಲು ಮಾಪನ ಕೇಂದ್ರದಿಂದ ಜೂನ್‌ ನಲ್ಲಿ 9.19 ಟಿಎಂಸಿಗೆ ಬದಲಿಗೆ 42.256 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ ಬದಲಿಗೆ 103.514 ಟಿಎಂಸಿ, ಆಗಸ್ಟ್ ನಲ್ಲಿ 45.95 ಟಿಎಂಸಿ ಬದಲಿಗೆ 51.943 ಟಿಎಂಸಿ, ಸೆಪ್ಟೆಂಬರ್ ನಲ್ಲಿ 36.76 ಟಿಎಂಸಿ ಬದಲಿಗೆ 40.790 ಟಿಎಂಸಿ, ಅಕ್ಟೋಬರ್ ನಲ್ಲಿ 14.35 ಟಿಎಂಸಿ ಬದಲಿಗೆ 31.344 ಟಿಎಂಸಿಯಂತೆ ಈ ವರ್ಷ ತಮಿನಾಡಿಗೆ ಇದುವರೆಗೆ 138.014 ಟಿಎಂಸಿ ನೀರಿನ ಬದಲಿಗೆ 273.426 ಟಿಎಂಸಿ ನೀರು ಹರಿದುಹೋಗಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಜೂನ್ 2025ರಿಂದ ಮೇ 2026ರವರೆಗೆ ಬಿಳಿಗೊಂಡ್ಲು ಜಲಾಶಯ ಮಾಪನ ಕೇಂದ್ರದಿಂದ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬೀಡಬೇಕಿತ್ತು. ಆದರೆ, ಕೇವಲ ಐದೇ ತಿಂಗಳಲ್ಲಿ 273.426 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಈ ವರ್ಷ ನಿಗದಿತ ಪ್ರಮಾಣಕ್ಕಿಂತ 135.412 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದುಹೋಗಿದೆ.

ಅಕ್ಟೋಬರ್ 3ನೇವಾರವು ಕೆಆರ್ ಎಸ್ ನಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದ್ದು, ಹೊರಹರಿವಿನ ಪ್ರಮಾಣವನ್ನು ಕೂಡ ಹೆಚ್ಚಿಸಲಾಗಿದೆ. ಹೊರಹರಿವು 20,540 ಕ್ಯುಸೆಕ್ ಇದ್ದು, ಬಿಳಿಗೊಂಡ್ಲು ಮಾಪನ ಕೇಂದ್ರದಲ್ಲಿ 41,424 ಕ್ಯುಸೆಕ್ ನಷ್ಟು ಹೊರ ಹರಿವು ಇದೆ.

2024ರಲ್ಲಿ ಕಾಡಿದ ಬರ 2025ರಲ್ಲಿ ಕಣ್ಮರೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ 93 ವರ್ಷದ ಬಳಿಕ ಕೆಆರ್ ಎಸ್ ಜೂನ್ ನಲ್ಲೇ ಭರ್ತಿಯಾಗಿ ಇತಿಹಾಸ ಸೃಷ್ಟಿಸಿತು. ಅಕ್ಟೋಬರ್ ಎರಡನೇ ವಾರದಲ್ಲಿ ಜಲಾಶಯ 2ನೇ ಬಾರಿ ಭರ್ತಿಯಾಗಿತ್ತು. ಅ.18-23ರವರೆಗೆ ಅಣೆಕಟ್ಟೆ ಗರಿಷ್ಠ ಸಾಮರ್ಥ್ಯ 124.80 ಅಡಿಗಳಷ್ಟು ನೀರು ಸಂಗ್ರಹವನ್ನು ಕಾಯ್ದುಕೊಳ್ಳುವ ಮೂಲಕ ವರ್ಷದಲ್ಲಿ ಮೂರನೇ ಬಾರಿ ಜಲಾಶಯ ಭರ್ತಿಯಾಗಿ ದಾಖಲೆ ನಿರ್ಮಿಸಿದೆ. ಬೀದರ್ ನಿಂದ ಚಾಮರಾಜನಗರದವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಜಲಾಶಯಗಳು, ಕೆರೆಕಟ್ಟೆಗಳು ಭರ್ತಿಯಾಗಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಯಾವುದೇ ತೊಂದರೆ ಇಲ್ಲ. ನಮ್ಮ ಸರ್ಕಾರ ವರುಣನ ಕೃಪೆಗೆ ಪಾತ್ರವಾಗಿದೆ.

- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!