ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ನಿರುಪಾದಿ ಗೋಮರ್ಸಿ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷೆ ಆಶಾ ವೀರೇಶ ಹೇಳಿದ್ದಾರೆ.
ಕೆಆರ್‌ಎಸ್ ಪಕ್ಷ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡುವುದಿಲ್ಲ ಮತ್ತು ಯಾರಾದರೂ ಸ್ಪರ್ಧೆ ಮಾಡಲು ಮುಂದೆ ಬಂದರೂ ಟಿಕೆಟ್ ನೀಡುವುದಿಲ್ಲ. ಆದರೆ, ಅವರ ಸಂದರ್ಶನ ಮಾಡುತ್ತೇವೆ ಮತ್ತು ಅವರ ಕುರಿತು ಮಾಹಿತಿ ಕಲೆ ಹಾಕಿ, ಸೂಕ್ತವಾಗಿದ್ದರೆ ಮಾತ್ರ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿ ಟಿಕೆಟ್ ನೀಡಲಾಗುತ್ತದೆ ಎಂದರು.
ನಿರುಪಾದಿ ಗೋಮರ್ಸಿ ಅವರು ವಿದ್ಯಾವಂತರಾಗಿದ್ದಾರೆ, ಸೂಕ್ತ ಬೆಂಬಲ ದೊರೆಯುವ ವಿಶ್ವಾಸ ಮೂಡಿದೆ. ಈ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ, ಗೆಲ್ಲಿಸುವುದಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.ನನಗೂ ರಾಜಕೀಯದಲ್ಲಿ ಅನುಭವ ಇದೆ, ಕಳೆದ ಮೂರು ವರ್ಷಗಳಿಂದ ಕೆಆರ್‌ಎಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನಿರುಪಾದಿ ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ, ಜನರನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದರು.ಪ್ರಧಾನ ಕಾರ್ಯದರ್ಶಿ ಎ.ಎಚ್. ಗೋಡಚಳ್ಳಿ, ಸಾವಿತ್ರಿ ರಮೇಶ, ರೇಣುಕಾ ಚಂದ್ರಶೇಖರ ಇದ್ದರು.