ಕನ್ನಡಪ್ರಭ ವಾರ್ತೆ ಬೆಂಗಳೂರು
ಯಾವುದೇ ರೀತಿಯ ಗಣಿಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ತುರ್ತು ಇಂದು ಹೆಚ್ಚಿದೆ ಎಂದು ಹೈಕೋರ್ಟ್ ಕಾಳಜಿ ವ್ಯಕ್ತಪಡಿಸಿದೆ.ಕೆಆರ್‌ಎಸ್ ಅಣೆಕಟ್ಟಿನ 20 ಕಿಮೀ ಸುತ್ತಳತೆಯ ವ್ಯಾಪ್ತಿ ಪ್ರದೇಶದಿಂದ ಹೊರಗಿರುವ ಕಾರಣ ತಮಗೆ ಕ್ರಷಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನ ಮರಡಿ ಗ್ರಾಮದ ಮಂಚಮ್ಮದೇವಿ ಸ್ಟೋನ್ ಕ್ರಷರ್ ಹಾಗೂ ಎಂ.ಸ್ಯಾಂಡ್ ಘಟಕದ ಮಾಲೀಕ ವೈ.ಬಿ.ಅಶೋಕ್ ಗೌಡ ಪಟೇಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರ ಮನವಿ ಪುರಸ್ಕರಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ವಿಭಾಗೀಯ ನ್ಯಾಯಪೀಠ ಈ ಕಾಳಜಿ ವ್ಯಕ್ತಪಡಿಸಿತು.ಕೆಆರ್‌ಎಸ್ ಅಣೆಕಟ್ಟು ವ್ಯಾಪ್ತಿ ಹಾಗೂ ಅದರಾಚೆಗೂ ಕೂಡಾ ಯಾವುದೇ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಕ ಚಟುವಟಿಕೆಗಳಿಗೆ ಸಂಬಂಧಿಸಿದ ತಕರಾರುಗಳಿಗೆ ಪರಿಹಾರ ಪಡೆಯಲು ಶಾಸನಾತ್ಮಕವಾಗಿ ರೂಪುಗೊಂಡಿರುವ ಕರ್ನಾಟಕ ರಾಜ್ಯ ಜಲಾಶಯಗಳ ಸುರಕ್ಷಿತ ಸಮಿತಿಯ ಮುಂದೆಯೇ ಮನವಿ ಸಲ್ಲಿಸಬೇಕು. ಈ ವಿಚಾರದಲ್ಲಿ ಸಮಿತಿಯ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ತೀರ್ಮಾನ ಪ್ರಕಟಿಸಲು ಕೋರ್ಟ್ ಪರಿಣಿತಿ ಹೊಂದಿಲ್ಲ. ಅದರಂತೆ ನಿಮ್ಮ ಮನವಿಯನ್ನು ಸಮಿತಿ ಮುಂದೆಯೇ ಸಲ್ಲಿಸಿ ಬಗೆಹರಿಸಿಕೊಳ್ಳುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಅರ್ಜಿದಾರರ ಮನವಿ ಏನು:ತಮ್ಮದು ಕೇವಲ ಕ್ರಷರ್ ಮತ್ತು ಎಂ.ಸ್ಯಾಂಡ್ ಘಟಕ. ಕಲ್ಲು ಸ್ಫೋಟಿಸುವುದು ಸೇರಿ ಗಣಿಗಾರಿಕೆಗೆ ಸಂಬಂಧಿಸಿದ ಇತರೆ ಯಾವುದೇ ನಿರ್ಬಂಧಿತ ಚಟುವಟಿಕೆ ಕೈಗೊಳ್ಳುತ್ತಿಲ್ಲ. ಕೆಆರ್‌ಎಸ್ ಸುತ್ತಲಿನ 20 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಚಟುವಟಿಕೆ ನಡೆಸಲು ಹೈಕೋರ್ಟ್ ನಿರ್ಬಂಧ ಹೇರಿದೆ ಎಂದು ತಿಳಿಸಿ, ತಮ್ಮ ಘಟಕದ ಕಾರ್ಯಾಚರಣೆ ನಿಲ್ಲಿಸಲು ಜಿಲ್ಲಾ ಸ್ಟೋನ್ ಕ್ರಷರ್ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ 2024ರ ಜ.20ರಂದು ನೋಟೀಸ್ ನೀಡಿದೆ. ಅದರಂತೆ ಘಟಕದ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಕೆಆರ್‌ಎಸ್ ಅಣೆಕಟ್ಟಿನ 20 ಕಿಮೀ ಸುತ್ತಲಿನ ವ್ಯಾಪ್ತಿ ಪ್ರದೇಶದಿಂದ ತಮ್ಮ ಘಟಕ ಹೊರಗಿದೆ. ಸರ್ಕಾರ ತಮ್ಮ ಘಟಕದ ಕಾನೂನುಬದ್ಧ ಚಟುವಟಿಕೆಗಳಿಗೆ ಸರ್ಕಾರ ಅಡ್ಡಿ ಉಂಟು ಮಾಡಿದೆ. ಆದ್ದರಿಂದ ಘಟಕದ ಚಟುವಟಿಕೆ ಪುನರಾರಂಭಕ್ಕೆ ಅನುಮತಿ ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
ನಾಲ್ಕು ರಾಜ್ಯಗಳಿಗೆ ಕಾವೇರಿ ಜೀವಾಳ : ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಘಟಕದ ಮನವಿ ಪರಿಗಣಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದರು.ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳಿಗೆ ನೀರುಣಿಸುವ ಕಾವೇರಿಯು ಜೀವನದಿಯಾಗಿದೆ. ಕೆಆರ್‌ಎಸ್ ಅಣೆಕಟ್ಟಿನ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಅತ್ಯಂತ ಅಪಾಯಕಾರಿ. ಆದ್ದರಿಂದ, ಅಣೆಕಟ್ಟಿಗೆ ಕಿಂಚಿತ್ತೂ ಧಕ್ಕೆಯಾಗಂತೆ ನೋಡಿಕೊಳ್ಳಬೇಕಾದ ತುರ್ತು ಹಿಂದಿಗಿಂತ ಇಂದು ಹೆಚ್ಚಿದೆ ಎಂದು ನುಡಿಯಿತು.
ಅರ್ಜಿದಾರರು ತಮ್ಮ ಮನವಿಯನ್ನು ಸಮಿತಿಯ ಮುಂದೆ ಸಲ್ಲಿಸಬೇಕು. ಅದನ್ನು ಪರಿಗಣಿಸಿ ಕಾನೂನು ಪ್ರಕಾರ ಸಮಿತಿ ತೀರ್ಮಾನ ಕೈಗೊಳ್ಳಬಹುದು. ತಮ್ಮ ಮನವಿಯನ್ನು ಇಂತಿಷ್ಟೇ ಸಮಯದೊಳಗೆ ಅವಧಿಯಲ್ಲಿ ಇತ್ಯರ್ಥಗೊಳಿಸಬೇಕು ಎಂಬ ಬಗ್ಗೆ ಅರ್ಜಿದಾರರು ಸಮಿತಿಗೆ ಮನವಿ ಮಾಡಲು ಮುಕ್ತವಾಗಿದ್ದಾರೆ. ಆದರೆ, ನ್ಯಾಯಾಲಯ ಈ ಕುರಿತು ಸಮಿತಿಗೆ ಗಡುವು ವಿಧಿಸುವುದಿಲ್ಲ ಎಂದು ತಿಳಿಸಿತು.