ಇಂದಿನಿಂದ ಕೆಎಸ್‌ಡಿಎಲ್‌ನ ಉತ್ಪನ್ನಗಳ ಪ್ರದರ್ಶನ, ಮಾರಾಟ ಮೇಳ: ಗುರುಪ್ರಸಾದ

KannadaprabhaNewsNetwork | Published : Sep 17, 2024 12:46 AM

ಸಾರಾಂಶ

ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಇಂದಿನಿಂದ ಸೆ.25ರವರೆಗೆ ಒಟ್ಟು 10 ದಿನಗಳ ಕಾಲ ಸಾಬೂನು ಮೇಳ ಆಯೋಜಿಸಿದೆ ಎಂದು ಕೆಎಸ್‌ಡಿಎಲ್‌ ಬೆಂಗಳೂರು ಶಾಖೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಗುರುಪ್ರಸಾದ ದಾವಣಗೆರೆಯಲ್ಲಿ ಹೇಳಿದ್ದಾರೆ.

- 10 ದಿನಗಳ ಸಾಬೂನು ಮೇಳದಲ್ಲಿ ವಿಶೇಷ ರಿಯಾಯಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಇಂದಿನಿಂದ ಸೆ.25ರವರೆಗೆ ಒಟ್ಟು 10 ದಿನಗಳ ಕಾಲ ಸಾಬೂನು ಮೇಳ ಆಯೋಜಿಸಿದೆ ಎಂದು ಕೆಎಸ್‌ಡಿಎಲ್‌ ಬೆಂಗಳೂರು ಶಾಖೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಗುರುಪ್ರಸಾದ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯಿಂದ ರಾಜ್ಯದ ಪ್ರಮುಖ ನಗರಗಳಲ್ಲಿ ಸೋಪು ಮೇಳ ಆಯೋಜಿಸಲಾಗುತ್ತಿದೆ. ಇದೀಗ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮೇಳ ಆಯೋಜಿಸಲಾಗಿದೆ ಎಂದರು.

ಕೆಎಸ್‌ಡಿಎಲ್ ಉತ್ಪಾದಿಸುತ್ತಿರುವ 48ಕ್ಕೂ ಹೆಚ್ಚು ಉತ್ಕೃಷ್ಟ ದರ್ಜೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಇದಾಗಿದೆ. ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಖರೀದಿಸಬಹುದು ಎಂದರು.

ಮೈಸೂರು ಸ್ಯಾಂಡಲ್ ಸಾಬೂನು, ಮೈಸೂರು ಸ್ಯಾಂಡಲ್ ಗಿಫ್ಟ್ ಪ್ಯಾಕ್, ಮೈಸೂರು ಸ್ಯಾಂಡಲ್‌ ಗೋಲ್ಡ್‌, ಸ್ಯಾಂಡಲ್‌ ಗೋಲ್ಡ್‌ ಸಿಕ್ಸರ್‌, ಸ್ಯಾಂಡಲ್ ಧೂಪ್‌, ಸ್ಯಾಂಡಲ್ ಅಗರಬತ್ತಿ, ಸ್ಯಾಂಡಲ್ ಹರ್ಬಲ್‌ ಹ್ಯಾಂಡ್ ವಾಶ್, ಬೇಬಿ ಸಾಬೂನು, ಸ್ಯಾಂಡಲ್ ಆಯಿಲ್, ಕಾರ್ಬೋಲಿಕ್ ಸಾಬೂನು, ವಾಷಿಂಗ್ ಬಾರ್ ಸಾಬೂನು, ಮಾರ್ಜಕ ಬಿಲ್ಲೆ ಹೀಗೆ ಇವು ಎಲ್ಲಾ ವರ್ಗಗಳ ಗ್ರಾಹಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷರಾದ ಅಪ್ಪಾಜಿ ಸಿ.ಎಸ್. ನಾಡಗೌಡ, ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಪ್ರಶಾಂತ, ಎಂ.ಗಂಗಪ್ಪ, ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮತ್ತಿತರರು ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.

ನಿಯಮಿತದ ಮಂಜುನಾಥ, ಸಿದ್ಧನಾಯಕ್‌, ಗಂಗರಾಜ, ವಿ.ಓ.ಕಾಮತ್‌ ಇತರರು ಇದ್ದರು.

- - - -16ಕೆಡಿವಿಜಿ5:

ದಾವಣಗೆರೆಯಲ್ಲಿ ಸೋಮವಾರಕೆಎಸ್‌ಡಿಎಲ್‌ ಬೆಂಗಳೂರು ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಗುರುಪ್ರಸಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article