ಇಂದಿನಿಂದ ಕ್ಷೇತ್ರಾಧಿಪತಿ ಮಹಾಲಿಂಗೇಶ್ವರ ಜಾತ್ರೋತ್ಸವ

KannadaprabhaNewsNetwork |  
Published : Sep 06, 2025, 02:00 AM IST
  ಮಹಾಲಿಂಗೇಶ್ವರ ದೇವಸ್ಥಾನ | Kannada Prabha

ಸಾರಾಂಶ

ಪುರದೊಡೆಯ, ಪವಾಡ ಪುರುಷ, ಕ್ಷೆತ್ರಾಧಿಪತಿಯಾದ ಶ್ರೀ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ ಶ್ರೀಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ, ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ ನೇತೃತ್ವದಲ್ಲಿ ಸೆಪ್ಟೆಂಬರ್ 5ರಿಂದ 10ರವರೆಗೆ ವಿವಿಧ ಕಾರ್ಯಕ್ರಮ ಜರುಗಲಿವೆ.

ರಾಜೇಂದ್ರ ನಾವಿ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಪುರದೊಡೆಯ, ಪವಾಡ ಪುರುಷ, ಕ್ಷೆತ್ರಾಧಿಪತಿಯಾದ ಶ್ರೀ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ ಶ್ರೀಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ, ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ ನೇತೃತ್ವದಲ್ಲಿ ಸೆಪ್ಟೆಂಬರ್ 5ರಿಂದ 10ರವರೆಗೆ ವಿವಿಧ ಕಾರ್ಯಕ್ರಮ ಜರುಗಲಿವೆ.

ನರಗಟ್ಟಿ ಎಂಬ ಹೆಸರಿದ್ದ ಈ ಊರು ಮಹಾಲಿಂಗೇಶ್ವರ ಪಾದಸ್ಪರ್ಶದಿಂದ ಮಹಾಲಿಂಗಪುರವಾಯಿತು. ಭಕ್ತರ ಮನದಲ್ಲಿ ಒಲಿದು ಭಕ್ತಿಯ ದೇಗುಲವಾಯಿತು. ಮಹಾಲಿಂಗೇಶ್ವರರು ಚೆನ್ನಗಿರಿ ಪರ್ವತದ ಕಲ್ಯಾಣಿಯಲ್ಲಿ ತಪಸ್ಸು ಮಾಡಿದ್ದರಿಂದ ಮಹಾಲಿಂಗಪುರ ಪಾವನವಾಯಿತು. ಶ್ರೀಗಳು ಶಿವಶರಣೆ ಸಿದ್ದಾಯಿಗೆ ನೀಡಿರುವ ಜಟಗಳು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿ ಬೆಳೆಯುತ್ತಿವೆ.

ಮೂರು ದಿನ ವೈಭವದ ರಥೋತ್ಸವ:

ಶನಿವಾರ ನಡೆಯಲಿರುವ ರಥೋತ್ಸವವನ್ನು ವೀಕ್ಷಿಸಲು ಸ್ಥಳೀಯರಷ್ಟೇ ಅಲ್ಲದೆ, ಹಲವು ಜಿಲ್ಲೆಗಳಿಂದ ಬಹು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಸಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹರಿವಾಣ ಕಟ್ಟೆ ಲೂಟಿ ಕಾರ್ಯಕ್ರಮ ನಡೆಯಲಿದೆ. ತದನಂತರ ರಥೋತ್ಸವ ಸಂಜೆ 7ಕ್ಕೆ ಆರಂಭವಾಗಿ ಭಾನುವಾರ ಬೆಳಗ್ಗೆ 6ರವರೆಗೆ ಜರುಗಿದ ಚನ್ನಗಿರಿ ಪರ್ವತದ ರಾಮಲಿಂಗೇಶ್ವರ ದೇವಸ್ಥಾನ ತಲುಪುತ್ತದೆ. ಸೆ.7ರಂದು ಮರಳಿ ತೇರು ಸಾಗಿ ಸೋಮವಾರ ಬೆಳಗ್ಗೆ ಮಹಾಲಿಂಗೇಶ್ವರ ದೇವಸ್ಥಾನ ತಲುಪುತ್ತದೆ.

ಜಾತ್ರಾ ಸಂಭ್ರಮ:ಜಾತ್ರೆಯಲ್ಲಿ ವಿಶೇಷವೆಂದರೆ ಕರಡಿ ಮಜಲು, ನಾಡಿನಾದ್ಯಂತ ಹೆಸರು ಮಾಡಿದ ಕರಡಿ ಮಜಲು, ನಂದಿಕೋಲು, ಕಂಡ್ಯಾಳ ಬಾಸಿಂಗ್, ಉಚ್ಚಾಯಿ ಬಂಡಿಗಳು, ಹಲಗೆ ಮೇಳ, ಸಂಬಾಳವಾದನ ಹೀಗೆ ಹಲವಾರು ಕಲಾವಿದರು ಮತ್ತು ಕಲಾ ಪ್ರದರ್ಶನ ನಡೆಯುತ್ತದೆ. ಶ್ರೀ ಕೃಷ್ಣ ಪಾರಿಜಾತ, ಬಯಲು ನಾಟಕಗಳು, ಭಜನಾ ಕಾರ್ಯಕ್ರಮ, ಸಂಸ್ಕೃತಿಕ ಕಾರ್ಯಕ್ರಮ, ಸೇರಿದಂತೆ ಅನೇಕ ಕಾರ್ಯಕ್ರಮ ನಡೆಯಲಿವೆ. ಸೆ.9,10ರಂದು ಕಿರುತೆರೆಯ ಪ್ರಸಿದ್ಧ ಹಾಸ್ಯ ಕಲಾವಿದರು ಮತ್ತು ಗಾಯಕರಿಂದ ರಸಮಂಜರಿ ಕಾರ್ಯಕ್ರಮ ನಡೆಯುತ್ತದೆ.

ಜಂಗೀ ನಿಕಾಲಿ ಕುಸ್ತಿಗಳು:ಜಾತ್ರೆಯಲ್ಲಿ ವೈಭವ ತಂದು ಕೊಡುವ ಇನ್ನೊಂದು ಕ್ರೀಡೆ ಜಂಗೀ ನಿಕಾಲಿ ಕುಸ್ತಿಗಳು. ಸೆ.8ರಂದು ಸಂಜೆ 4ಗಂಟೆಗೆ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಜಂಗೀ ನಿಕಾಲಿ ಕುಸ್ತಿಗಳು ನಡೆಯುತ್ತವೆ. ನೋಡಲು ಜನ ಸಾಗರವೇ ಹರಿದು ಬರುತ್ತದೆ.

ಲಿಂಗಮುದ್ರೆಗಳು:

ನಗರದ ರೇವಡಿಗಿಡದ ಹಿಂದೆ, ಕೆಂಗೇರಿಮಡ್ಡಿಯ ಕಲ್ಕರ್ಣಿಯಲ್ಲಿ, ವಿದ್ಯಾನಗರ, ಅಕ್ಕಿಮರಡಿ ರಸ್ತೆಯ ಈಶ್ವರಪ್ಪನವರ ತೋಟದಲ್ಲಿ, ಢವಳೇಶ್ವರ-ಮಹಾಲಿಂಗಪುರ ಒಳ ರಸ್ತೆಯಲ್ಲಿ ಆದೆಪ್ಪನವರ ತೋಟದಲ್ಲಿ, ಕಲ್ಪಡ, ಹೊಸಬಾವಿ, ಬುದ್ನಿ-ಕೆಸರಗೊಪ್ಪ ಒಳ ರಸ್ತೆಯಲ್ಲಿ ಅಡಿವೆಪ್ಪಗೌಡ ಅವರ ತೋಟದಲ್ಲಿ ಲಿಂಗಮುದ್ರೆಗಳಿವೆ. ಜಾತ್ರೆಗೆ ಬರುವ ಭಕ್ತರು ಇವುಗಳನ್ನು ಕಣ್ತುಂಬಿಕೊಳ್ಳುತ್ತಾರೆ.

ದೇವತಾ ಅರ್ಚನೆಗೆ ಮಾತ್ರ ನೀರು ಬಳಕೆ:ಮಹಾಲಿಂಗೇಶ್ವರ ಕೃಪಾಶೀರ್ವಾದಿಂದ ಮಹಾಲಿಂಗಪುರದ ಬನಶಂಕರಿದೇವಿ ದೇವಸ್ಥಾನದ ಹಿಂದೆ ನಿರ್ಮಿತಗೊಂಡಿರುವ ಬಸವತೀರ್ಥ ಬಾವಿಗೆ ತನ್ನದೇ ಆದ ಇತಿಹಾಸವಿದೆ. ಲಿಂಗಪೂಜೆ, ದೇವತಾ ಅರ್ಚನೆಗೆ ಮಾತ್ರ ಈ ಬಾವಿಯ ನೀರು ಬಳಕೆ ಮಾಡುವ ಹಿಂದೆಯೂ ಒಂದು ಕಾರಣವಿದೆ. ದೇವಸ್ಥಾನಗಳಂತೆ ಈ ಬಾವಿಯೂ ಪುಣ್ಯಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಈ ಬಾವಿಗೆ ‘ಅಪ್ಪನಾರ ಬಾವಿ’ ಎಂತಲೂ ಕರೆಯುತ್ತಾರೆ. ಇತಿಹಾಸದ ಪ್ರಕಾರ ಇದಕ್ಕೆ ಬಸವ ತೀರ್ಥ ಎಂದು ಹೆಸರಿದೆ. ಬೇಸಿಗೆಯಲ್ಲೂ ಈ ಬಾವಿ ನೀರು ತುಂಬಿರುವುದು ವಿಶೇಷ. ಶತಮಾನಗಳಷ್ಟು ಹಳೆಯದಾದ ಈ ಬಾವಿಯನ್ನು ಕಂಡರೆ ವಾಸ್ತವ ಅರಿವಾಗುತ್ತದೆ.

ಭಕ್ತಿಯ ತಾಣ ಸಿದ್ಧಾಯಿ ದೇಗುಲ: ಮಹಾಲಿಂಗೇಶ್ವರರ ಇರುವಿಕೆಯ ಗುರುತಿಗಾಗಿ ಜಟೆಗಳನ್ನು ಪಡೆದು ಅದರ ಮಹಿಮೆ ಸಾರಿದ ಭಕ್ತೆ ಸಿದ್ಧಾಯಿ ತಾಯಿ ದೇವಸ್ಥಾನ ಭಕ್ತಿಯ ತಾಣವಾಗಿದೆ. ಮಹಾಲಿಂಗೇಶ್ವರ ದೇವಸ್ಥಾನ ಆವರಣದಲ್ಲೇ ಸಿದ್ಧಾಯಿ ತಾಯಿ ದೇವಸ್ಥಾನ ಇದ್ದು, ಆಕೆಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಮೂರ್ತಿಯ ಪೂಜೆ ನೆರವೇರುತ್ತದೆ. ದೇವಸ್ಥಾನ ಸುತ್ತ ಬಸವಣ್ಣ, ಅಕ್ಕಮಹಾದೇವಿ, ಗುರುಲಿಂಗ ಜಂಗಮರ ಚಿತ್ರಗಳನ್ನು ಬಿಡಿಸಲಾಗಿದೆ.

ಮಹಾಲಿಂಗೇಶ್ವರ ವಾಣಿಯಂತೆ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿ ಜಟೆಗಳು ಪ್ರತಿ ವರ್ಷ ಬೆಳೆಯುತ್ತ ಇಂದು ಏಳು ಸುತ್ತಿನ ಸಿಂಬೆಯಾಗಿದೆ. ಜಟೆಗಳ ಮಹಿಮೆಯಿಂದ ತಮ್ಮ ಕಷ್ಟಗಳನ್ನು ಪಾರಾಗಿ ಇಷ್ಟಾರ್ಥಗಳನ್ನು ಪಡೆದ ಅನೇಕ ಭಕ್ತರು ಪ್ರತಿವರ್ಷ ಅದರಲ್ಲೂ ಶ್ರಾವಣ ಮಾಸದಲ್ಲಿ ಜಟಾಭಿಷೇಕ ಮಾಡಿಸುತ್ತಾರೆ. ಮಹಾಲಿಂಗೇಶ್ವರರ ಇರುವಿಕೆಯನ್ನು ಗುರುತಿಸುವಂತೆ ಮಾಡಿದ ಶರಣೆ ಸಿದ್ಧಾಯಿ ತಾಯಿಯನ್ನು ಭಕ್ತಿಯಿಂದ ನಮಿಸುತ್ತಾರೆ.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್