ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಭಾಷೆ ಮಹತ್ವದ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಜಿಲ್ಲೆಯ ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕೊಡುಗೆ ಅನನ್ಯವಾದುದು ಎಂದು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಅಭಿಮಾನಿಸಿದರು.ನಗರದ ಬಾಲ ಭವನದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ನರಸಿಂಹ ಸ್ವಾಮಿ ರಚಿತ ಗೀತೆಗಳ ಗಾಯನ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲಾಗುವ ನಾಡಗೀತೆ ಹಾಗೂ ರೈತ ಗೀತೆಗಳ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ಸಾಹಿತಿಗಳು, ಕಲಾವಿದರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಆದ ಸಾಹಿತ್ಯ ಕೃಷಿ ಸಾಧನೆಯಿಂದ ಮನೆ ಮಾತಾಗಿದ್ದಾರೆ. ಜಿಲ್ಲೆಯ ಕೀರ್ತಿ, ಗರಿಮೆಯನ್ನು ಹೆಚ್ಚಿಸುವಲ್ಲಿ ಶ್ರಮಿಸಿದ್ದಾರೆ. ಕೆ.ಎಸ್.ನರಸಿಂಹ ಸ್ವಾಮಿ ಅವರು ತಮ್ಮ ನವಿರಾದ ಭಾವನೆಗಳನ್ನು ಕವನಗಳಲ್ಲಿ ತರುವುದರ ಮೂಲಕ ಕಲಾ ರಸಿಕರ, ಪ್ರೇಮಿಗಳ ದೇಶಭಕ್ತರ ಪ್ರೇಮ, ದೇಶಾಭಿಮಾನ ಜಾಗೃತಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.ಟ್ರಸ್ಟ್‌ನ ನೂತನ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಅವರ ಹೆಸರನ್ನು ಚಿರಸ್ಥಾಯಿ ಆಗಿಸುವಂತಹ ಗುಣ ಮಟ್ಟದ ಕಾರ್ಯಕ್ರಮ ರೂಪಿಸಿ ಸ್ಥಳೀಯ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಿ ಎಂದು ಶುಭ ಹಾರೈಸಿದರು.
ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಡಾ.ನಂದೀಶ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸ್ಥಳೀಯ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳ ಮೂಲಕ ವೇದಿಕೆ ಸೃಷ್ಟಿಸಿ ಅವಕಾಶ ನೀಡುತ್ತಿದೆ ಎಂದರು.ಕನ್ನಡ ಸಾಹಿತ್ಯ ಸಮ್ಮೇಳನವು 30 ವರ್ಷಗಳ ನಂತರ ಮಂಡ್ಯದಲ್ಲಿ ಜರುಗುತ್ತಿದ್ದು ಇಡೀ ರಾಜ್ಯದಲ್ಲೇ ಮನೆ ಮಾತಾಗುವಂತೆ ಆತಿಥ್ಯ, ಸಾಂಸ್ಕೃತಿಕ ಪರಂಪರೆ ವೈಭವೀಕರಿಸುವ ಮೂಲಕ ಜಿಲ್ಲೆ ಶ್ರೇಷ್ಠತೆ ಎತ್ತಿ ಹಿಡಿಯಬೇಕು. ಇದಕ್ಕೆ ಪೂರಕವಾಗಿ ಕಲಾವಿದರು, ಸಾಹಿತಿಗಳು, ನಾಗರೀಕರು ಸಂಪೂರ್ಣ ಸಹಕರಿಸಿ ಪೂರ್ಣ ಪ್ರಮಾಣದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ಮಂಡ್ಯ ದ ಘನತೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ನಾಡಗೀತೆ, ರೈತ ಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತಮವಾಗಿ ಸಾದರಪಡಿಸಿ ಮಂಡ್ಯದ ಕಲಾವಿದರ ಶ್ರೇಷ್ಠತೆಯನ್ನು ಮೆರೆಯಬೇಕು ಎಂದು ಆಶಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಪ್ರಪಂಚದ 56 ದೇಶಗಳಲ್ಲಿ ಮಂಡ್ಯ ಜಿಲ್ಲೆಯ ವೈಶಿಷ್ಟ್ಯಗಳನ್ನು, ಕಲೆಯ ಮೂಲಕ ಸಾಬೀತುಪಡಿಸಲು ಜಿಲ್ಲೆಯ ಜನತೆಯ ಆಶೀರ್ವಾದ, ಪ್ರೋತ್ಸಾಹವೇ ಕಾರಣವಾಗಿದೆ. ಅಕಾಡೆಮಿಯು ಮುಂದಿನ ದಿನಗಳಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ರೂಪಿಸಿ ಕಲಾವಿದರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ ಗಾಯಕ ಪ್ರತಿಭಾಂಜಲಿ ಡೇವಿಡ್ ಉಪಸ್ಥಿತರಿದ್ದರು. ನಂತರ ಗಾಯನದಲ್ಲಿ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಹಿರಿಯ ಗಾಯಕ ಕಲಾಶ್ರೀ ವಿದ್ಯಾಶಂಕರ್, ಗಾಯಕ ಎಂ.ಎನ್.ಶ್ರೀಧರ್, ಡೇವಿಡ್, ಗಾಮನಹಳ್ಳಿ ಸ್ವಾಮಿ, ದಿಶಾ ಜೈನ್ ಮತ್ತು ಆದರ್ಶ ಸುಗಮ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು, ತಮ್ಮ ಗಾಯನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ನಗರದ ಸದ್ವಿದ್ಯಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಕೆ.ಎಸ್‌ನ ಗೀತೆ ಗಳ ನೃತ್ಯ ಪ್ರದರ್ಶನ ಅಪಾರ ಪ್ರಶಂಸೆಗೆ ಪಾತ್ರವಾಯಿತು.