ಕೆಎಸ್‌ಆರ್‌ಟಿಸಿ ಬಸ್- ಪ್ರಯಾಣಿಕರಿಗೆ ವಂಚನೆ ಆರೋಪ!

KannadaprabhaNewsNetwork |  
Published : Nov 13, 2026, 01:15 AM IST
61 | Kannada Prabha

ಸಾರಾಂಶ

ಎಚ್.ಡಿ. ಕೋಟೆ ಕೆಎಸ್‌ಆರ್‌ಟಿಸಿ ಬಸ್ ಘಟಕದ ವ್ಯಾಪ್ತಿಯಲ್ಲಿ ಸಾರಿಗೆ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಸರಗೂರು ಸೇರಿದಂತೆ ಗ್ರಾಮೀಣ ಭಾಗದ ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ನಿತ್ಯ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ದಾಸೇಗೌಡ ಸರಗೂರು

ಕನ್ನಡಪ್ರಭ ವಾರ್ತೆ ಸರಗೂರು

ಎಚ್.ಡಿ. ಕೋಟೆ ಕೆಎಸ್‌ಆರ್‌ಟಿಸಿ ಬಸ್ ಘಟಕದ ವ್ಯಾಪ್ತಿಯಲ್ಲಿ ಸಾರಿಗೆ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಸರಗೂರು ಸೇರಿದಂತೆ ಗ್ರಾಮೀಣ ಭಾಗದ ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ನಿತ್ಯ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಬಸ್ ಮಾರ್ಗಗಳ ಕಡಿತ, ಪ್ರಯಾಣದ ಸಮಯದಲ್ಲಿನ ತಾರತಮ್ಯ, ವೇಗದೂತ ಹೆಸರಿನಲ್ಲಿ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ, ಹಳೆಯ ಬಸ್‌ಗಳ ಸಂಚಾರ, ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಒಂದು ಕಾಲದಲ್ಲಿ ಸರಗೂರಿನಿಂದ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಾದ ಮಲೆ ಮಹದೇಶ್ವರ ಬೆಟ್ಟ, ಸೇಲಂ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಸಿಗಂದೂರು, ಊಟಿ, ಬಾಳೆಲೆ, ಕುಟ್ಟ, ವಿರಾಜಪೇಟೆ, ಕೋಲಾರ, ಚಾಮರಾಜನಗರ ಹಾಗೂ ಮಾನಂದವಾಡಿಗೆ ನೇರ ಬಸ್ ಸೌಲಭ್ಯವಿತ್ತು.

ಆದರೆ ಇದೀಗ ಆದಾಯದ ನೆಪದಲ್ಲಿ ಹಲವು ಮಾರ್ಗಗಳ ಬಸ್‌ಗಳನ್ನು ಬೇರೆ ಘಟಕಗಳಿಗೆ ವರ್ಗಾಯಿಸಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಹಿಂದೆ ಸರಗೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ಗಳು ಬೇರೆ ಘಟಕಗಳಿಗೆ ಹೋದ ನಂತರವೂ ಉತ್ತಮ ಆದಾಯ ಗಳಿಸುತ್ತಿವೆ ಎನ್ನಲಾಗಿದ್ದು, ಹಾಗಾದರೆ ಸರಗೂರು ಭಾಗದ ಮಾರ್ಗಗಳನ್ನೇ ಏಕೆ ಕಡಿತಗೊಳಿಸಲಾಯಿತು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ವೇಗದೂತ ಬಸ್‌ಗಳ ಸಂಚಾರದಲ್ಲೂ ತಾರತಮ್ಯವೇ?

ಸರಗೂರಿನಿಂದ ಮೈಸೂರಿಗೆ ಸಂಚರಿಸುವ ವೇಗದೂತ ಬಸ್‌ಗಳು ಸುಮಾರು ಒಂದು ಗಂಟೆಗೊಮ್ಮೆ ಹೊರಡುತ್ತಿದ್ದರೆ, ಎಚ್.ಡಿ. ಕೋಟೆಯಿಂದ ಮೈಸೂರಿಗೆ ಅರ್ಧ ಗಂಟೆಗೊಮ್ಮೆ ಬಸ್ ಸೌಲಭ್ಯವಿದೆ ಎನ್ನಲಾಗಿದೆ. ಸರಗೂರು ಭಾಗದ ಪ್ರಯಾಣಿಕರಿಗೂ ಸಮಾನ ಸಾರಿಗೆ ಸೌಲಭ್ಯ ಕಲ್ಪಿಸುವಲ್ಲಿ ಏಕೆ ತಾರತಮ್ಯ ಎಂಬ ಪ್ರಶ್ನೆ ಎದ್ದಿದೆ. ಸರಗೂರು ಮಾರ್ಗಕ್ಕೆ ನಿಗದಿಪಡಿಸಿರುವ ಆರು ವೇಗದೂತ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.

ವೇಗದೂತ ಬಸ್‌ಗೆ ಸಾಮಾನ್ಯ ಬಸ್ ದರವೇ?:

ಪ್ರಯಾಣಿಕರನ್ನು ಹೆಚ್ಚು ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಬಸ್‌ಗಳ ನಾಮಫಲಕ ಮತ್ತು ನಿಲುಗಡೆ ವ್ಯವಸ್ಥೆ. ಹಿಂದೆ ಸರಗೂರಿನಿಂದ ಮೈಸೂರಿಗೆ ಸಂಚರಿಸುತ್ತಿದ್ದ ವೇಗದೂತ ಬಸ್‌ಗಳು ಹ್ಯಾಂಡ್‌ ಪೋಸ್ಟ್, ಕೋಳಗಾಲ, ಹೊಮ್ಮರಗಳ್ಳಿ, ಹಂಪಾಪುರ ಹಾಗೂ ಜಯಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತಿದ್ದವು. ಆದರೆ ಈಗ ಅನೇಕ ಗ್ರಾಮಗಳಲ್ಲಿ ನಿಲುಗಡೆ ನೀಡಲಾಗುತ್ತಿದ್ದು, ಸುಮಾರು 30ಕ್ಕೂ ಹೆಚ್ಚು ಕಡೆ ಬಸ್ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರಿಗೆ ಸಂಸ್ಥೆ ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಸಂಸ್ಥೆಯೇ ಹೊರತು ಜನರನ್ನು ಅನಗತ್ಯವಾಗಿ ಸಂಕಷ್ಟಕ್ಕೆ ದೂಡುವ ವ್ಯವಸ್ಥೆಯಾಗಬಾರದು. ಗ್ರಾಮೀಣ ಜನರ ಸಂಚಾರದ ಹಕ್ಕು, ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌