ಹೊಸ ವರ್ಷದ ಎರಡನೆಯ ದಿನವೇ ದರ ಏರಿಕೆಯ ಬರೆ - ಬಸ್‌ ಪ್ರಯಾಣ ದರ 15% ಹೆಚ್ಚಿಸಲು ಸರ್ಕಾರ ನಿರ್ಧಾರ

KannadaprabhaNewsNetwork |  
Published : Jan 03, 2025, 12:31 AM ISTUpdated : Jan 03, 2025, 06:01 AM IST
BMTC Bus

ಸಾರಾಂಶ

ರಾಜ್ಯ ಸರ್ಕಾರ ನೂತನ ವರ್ಷಾರಂಭದಲ್ಲೇ ಸರ್ಕಾರಿ ಬಸ್‌ ಪ್ರಯಾಣಿಕರಿಗೆ ದರ ಹೆಚ್ಚಳ ಶಾಕ್‌ ನೀಡಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಎಲ್ಲಾ ರೀತಿಯ ಬಸ್‌ಗಳ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

 ಬೆಂಗಳೂರು :  ರಾಜ್ಯ ಸರ್ಕಾರ ನೂತನ ವರ್ಷಾರಂಭದಲ್ಲೇ ಸರ್ಕಾರಿ ಬಸ್‌ ಪ್ರಯಾಣಿಕರಿಗೆ ದರ ಹೆಚ್ಚಳ ಶಾಕ್‌ ನೀಡಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಎಲ್ಲಾ ರೀತಿಯ ಬಸ್‌ಗಳ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಪರಿಷ್ಕೃತ ದರ ಜ.5ರಿಂದಲೇ ಜಾರಿಯಾಗಲಿದೆ. ಎಲ್ಲಾ ನಿಗಮಗಳ ಸಾಮಾನ್ಯ ಬಸ್‌, ನಗರ ಸಾರಿಗೆ ಬಸ್‌, ಐಷಾರಾಮಿ ಬಸ್‌ ಸೇರಿ ಎಲ್ಲಾ ಬಸ್‌ಗಳ ಹಾಲಿ ಪ್ರಯಾಣ ದರವನ್ನು ಶೇ.15ರಷ್ಟು ಸಮಾನವಾಗಿ ಹೆಚ್ಚಳ ಮಾಡಲಾಗಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌, ಬಿಎಂಟಿಸಿಯಲ್ಲಿ ಹತ್ತು ವರ್ಷಗಳ ಹಿಂದೆ (2014) ಹಾಗೂ ಕೆಎಸ್‌ಆರ್‌ಟಿಸಿ, ವಾಯವ್ಯ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ಐದು ವರ್ಷಗಳ ಹಿಂದೆ (2020) ಪ್ರಯಾಣ ದರ ಹೆಚ್ಚಿಸಲಾಗಿದೆ. ಆ ಬಳಿಕ ಡೀಸೆಲ್‌ ದರ, ವೇತನ, ನಿರ್ವಹಣಾ ವೆಚ್ಚ ಎಲ್ಲವೂ ಹೆಚ್ಚಾಗಿದ್ದರೂ ಪ್ರಯಾಣ ದರ ಮಾತ್ರ ಹೆಚ್ಚಿಸಿಲ್ಲ. ಇದರಿಂದ ದಿನದಿಂದ ದಿನಕ್ಕೆ ನಾಲ್ಕೂ ನಿಗಮಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಅನಿವಾರ್ಯವಾಗಿ ದರ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದರು.

ಶಕ್ತಿ ಯೋಜನೆಯಡಿ ಸರ್ಕಾರ ಪ್ರತಿ ತಿಂಗಳು 417.92 ಕೋಟಿ ರು. ಬಿಡುಗಡೆ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 5015 ಕೋಟಿ ರು. ನೀಡಲಾಗುತ್ತಿದೆ. ಪರಿಷ್ಕೃತ ದರದಿಂದಾಗಿ ಮಹಿಳೆಯರ ಪ್ರಯಾಣದ ಆಧಾರದ ಮೇಲೆ ರಾಜ್ಯ ಸರ್ಕಾರ ಹೆಚ್ಚುವರಿ ಶಕ್ತಿ ಹಣ ಬಿಡುಗಡೆ ಮಾಡಲಿದೆ. ಇದರಿಂದ ಸರ್ಕಾರಕ್ಕೆ ಹೊರೆ ಆದರೂ ನಿಗಮಗಳ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದರು.

ನೆರೆ ರಾಜ್ಯಗಳಿಗಿಂತ ಕಡಿಮೆ:

ಪ್ರಯಾಣದರವನ್ನು ಶೇ.13 ರಿಂದ ಶೇ.15 ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. ಆದರೆ ನಿಗಮಗಳ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ಶೇ.15ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಇಷ್ಟು ಹೆಚ್ಚಳ ಮಾಡಿದ್ದರೂ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗಿಂತಲೂ ರಾಜ್ಯದಲ್ಲಿ ಕಡಿಮೆ ದರ ಇರಲಿದೆ ಎಂದು ಸಮರ್ಥಿಸಿಕೊಂಡರು.

ನಿತ್ಯ 9.5 ಕೋಟಿ ರು. ಹೊರೆ:

ಬಿಎಂಟಿಸಿ ಕೊನೆಯ ಬಾರಿ ದರ ಏರಿಕೆ ಮಾಡಿದಾಗ ಅಂದರೆ  2014ರಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ 46.24 ರು. ಇತ್ತು. ಆ ಬಳಿಕ ಬಿಎಂಟಿಸಿ ಪ್ರಯಾಣ ದರ ಪರಿಷ್ಕರಣೆಯಾಗಿಲ್ಲ. ಕೆಎಸ್‌ಆರ್‌ಟಿಸಿ ಸೇರಿ ಉಳಿದ ಮೂರು ನಿಗಮಗಳು ಕೊನೆಯ ಬಾರಿ ದರ ಪರಿಷ್ಕರಿಸಿದ 2020ರಲ್ಲಿ ಡೀಸೆಲ್‌ ದರ 60.98 ರು. ಇತ್ತು. ತರುವಾಯ ಯಾವುದೇ ಈ ಮೂರು ನಿಗಮಗಳ ಪ್ರಯಾಣದ ದರವೂ ಹೆಚ್ಚಳ ಮಾಡಿಲ್ಲ. ನಿತ್ಯ 9.16 ಕೋಟಿ ರು.ಗಳಿದ್ದ ಇಂಧನ ವೆಚ್ಚ ಇದೀಗ 13.21 ಕೋಟಿ ರು. ತಲುಪಿದೆ. ಸಿಬ್ಬಂದಿ ವೆಚ್ಚ, ನಿರ್ವಹಣಾ ವೆಚ್ಚ ನಿತ್ಯ 12.85 ಕೋಟಿ ರು.ಗಳಿಂದ 18.36 ಕೋಟಿ ರು. ತಲುಪಿದೆ. ಹೀಗಾಗಿ ನಿತ್ಯ 9.56 ಕೋಟಿ ರು. ನಷ್ಟ ಅನುಭವಿಸುತ್ತಿದ್ದು, ದರ ಹೆಚ್ಚಳದಿಂದ ನಿತ್ಯ 7.45 ಕೋಟಿ ರು.ಗಳಷ್ಟು ಹೊರೆ ಕಡಿಮೆಯಾಗಲಿದೆ ಎಂದು ಎಚ್.ಕೆ.ಪಾಟೀಲ್‌ ವಿವರಿಸಿದರು.

2,000 ಕೋಟಿ ರು. ಸಾಲ ಪಡೆಯಲು ಖಾತ್ರಿ:

ಇದೇ ವೇಳೆ ನಾಲ್ಕೂ ನಿಗಮಗಳಲ್ಲಿ ಪಿಎಫ್‌, ಇಂಧನ ಬಾಕಿ ಪಾವತಿಸಲು 2,000 ಕೋಟಿ ರು. ಸಾಲ ಪಡೆಯುವ ಕುರಿತು ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಮಾಡಿರುವ ಆದೇಶಕ್ಕೆ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.

ಈ ಮೂಲಕ ನಿಗಮಗಳು 2,000 ಕೋಟಿ ರು. ಸಾಲ ಪಡೆಯಲಿದ್ದು, ಇದಕ್ಕೆ ಸರ್ಕಾರವೇ ಖಾತ್ರಿ ನೀಡಲಿದೆ. ಜತೆಗೆ ಮುಂದಿನ ಬಜೆಟ್‌ನಲ್ಲಿ ಈ ಹಣವನ್ನು ಮುಖ್ಯಮಂತ್ರಿಗಳು ಪರಿಹಾರ ರೂಪದಲ್ಲಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ನಾಲ್ಕೂ ನಿಗಮಗಳು ಈಗಾಗಲೇ 6,244 ಕೋಟಿ ರು. ಸಾಲದಲ್ಲಿವೆ. ಈಗ ಮತ್ತೆ ಯಾರು ಸಾಲ ನೀಡುತ್ತಾರೆಂಬ ಪ್ರಶ್ನೆಗೆ, ನಿಗಮಗಳಿಗೆ ಸಾಲ ಪಡೆಯುವ ಶಕ್ತಿ ಇದೆ. ಬಸ್ಸುಗಳು, ಆಸ್ತಿಗಳು ಎಲ್ಲವೂ ಇರುವುದರಿಂದಲೇ ಸಾಲ ಸಿಗುತ್ತದೆ ಎಂದು ಸಮರ್ಥಿಸಿದರು.

ಪುರುಷ ವಿರೋಧಿ ಸರ್ಕಾರವಲ್ಲ: ಎಚ್.ಕೆ.ಪಾಟೀಲ್

ಶಕ್ತಿ ಯೋಜನೆಯಿಂದ ಆಗಿರುವ ನಷ್ಟ ಸರಿದೂಗಿಸಲು ಪುರುಷರ ಮೇಲೆ ಬರೆ ಎಳೆಯುತ್ತಿದ್ದೀರಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ್‌, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದೇವೆ. ಆದರೆ ಪ್ರಯಾಣ ದರ ಹೆಚ್ಚಳದಿಂದ ನಿಗಮಗಳಲ್ಲಿ ಶೇ.90 ರಷ್ಟಿರುವ ಪುರುಷ ನೌಕರರಿಗೆ ಅನುಕೂಲವಾಗಲಿದೆ. ಹೀಗಾಗಿ ನಮ್ಮ ಸರ್ಕಾರ ಪುರುಷ ವಿರೋಧಿಯಲ್ಲ ಎಂದು ಸಮರ್ಥನೆ ನೀಡಿದರು.

- ಸಾಮಾನ್ಯ, ಎಸಿ ಸೇರಿ ಎಲ್ಲ ಬಸ್‌ಗಳ ದರ ಪರಿಷ್ಕರಣೆಗೆ ಸಚಿವ ಸಂಪುಟ ಸಮ್ಮತಿ- ಬೆಂಗಳೂರಲ್ಲಿ 10 ವರ್ಷ, ರಾಜ್ಯದ ಉಳಿದೆಡೆ 5 ವರ್ಷ ಬಳಿಕ ಪ್ರಯಾಣ ದರ ಏರಿಕೆ

ದರ ಏರಿಕೆ ಏಕೆ?- 

2014ರಲ್ಲಿ ಬಿಎಂಟಿಸಿ ದರ ಪರಿಷ್ಕರಿಸಲಾಗಿತ್ತು. ಆಗ ಡೀಸೆಲ್ ದರ ಲೀಟರ್‌ಗೆ 46.24 ರು. ಇತ್ತು

- 2020ರಲ್ಲಿ ಕೆಎಸ್‌ಆರ್‌ಟಿಸಿ, ವಾಯವ್ಯ, ಕಲ್ಯಾಣ ಕರ್ನಾಟಕ ನಿಗಮಗಳ ದರ ಪರಿಷ್ಕರಣೆ ಆಗಿತ್ತು

- ಆ ವೇಳೆ ಲೀಟರ್‌ ಡೀಸೆಲ್‌ ಬೆಲೆ 60.98 ರು. ಇತ್ತು. ಈಗ ಡೀಸೆಲ್‌ ಬೆಲೆ 89 ರು.ಗೆ ತಲುಪಿದೆ

- ಇದರಿಂದಾಗಿ ನಿತ್ಯ 9.16 ಕೋಟಿ ರು. ಇದ್ದ ಇಂಧನ ವೆಚ್ಚ 13.21 ಕೋಟಿ ರು.ಗೆ ಏರಿಕೆ ಕಂಡಿದೆ

- ಸಿಬ್ಬಂದಿ ವೆಚ್ಚ, ನಿರ್ವಹಣಾ ವೆಚ್ಚ ನಿತ್ಯ 12.85 ಕೋಟಿ ರು.ನಿಂದ 18.36 ಕೋಟಿಗೆ ಜಿಗಿದಿದೆ

- ಪರಿಣಾಮವಾಗಿ ಸಾರಿಗೆ ನಿಗಮಗಳು ಪ್ರತಿ ದಿನ 9.56 ಕೋಟಿ ರು. ನಷ್ಟ ಅನುಭವಿಸುತ್ತಿವೆ

- 15% ದರ ಹೆಚ್ಚಳದಿಂದ ನಿತ್ಯ 7.45 ಕೋಟಿ ರು. ಹೊರೆ ಕಡಿಮೆಯಾಗಲಿದೆ: ಸಚಿವ ಎಚ್ಕೆ

ಮಹಿಳೆಯರಿಗೆ ಉಚಿತ ಪುರುಷರಿಗೆ ಹೊರೆ ಖಚಿತ

‘ಮಹಿಳೆಯರಿಗೆ ಉಚಿತ, ಪುರುಷರಿಗೆ ಅದರ ಹೊರೆ ಖಚಿತ’ ಎಂಬುದನ್ನು ಇದೀಗ ಶೇ.15ರಷ್ಟು ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ಸರ್ಕಾರ ಸ್ಪಷ್ಟಪಡಿಸಿದೆ. ಸಾರಿಗೆ ವ್ಯವಸ್ಥೆ ಆಶ್ರಯಿಸಿರುವ ಜನರಿಗೆ ಈ ಮೂಲಕ ಬರೆ ಎಳೆಯಲಾಗಿದೆ. ಸರ್ಕಾರದ ಈ ನಿರ್ಣಯ ವಿರೋಧಿಸಿ ಬಿಜೆಪಿ ಜನರ ಪರ ದನಿ ಎತ್ತಲಿದೆ.

- ಬಿ.ವೈ. ವಿಜಯೇಂದ್ರ ಬಿಜೆಪಿ ಅಧ್ಯಕ್ಷ

ಸಿದ್ದು ಸರ್ಕಾರದಿಂದ ಶ್ರೀಸಾಮಾನ್ಯರ ಸುಲಿಗೆ

ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಎಂದು ಒಂದಲ್ಲ ಒಂದು ರೀತಿಯಲ್ಲಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ಇದೀಗ ಬಸ್ ದರ ಶೇ.15ರಷ್ಟು ಏರಿಕೆ ಮಾಡಿದೆ. ಶೀಘ್ರದಲ್ಲೇ ಕನ್ನಡಿಗರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ದಂಗೆ ಏಳುವುದೂ ಅನಿವಾರ್ಯವಾಗಲಿದೆ.

- ಆರ್‌.ಅಶೋಕ್‌, ಪ್ರತಿಪಕ್ಷ ನಾಯಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!