ಪ್ರಾರಂಭ ನಿರೀಕ್ಷೆ । ಚನ್ನಗಿರಿಯಲ್ಲಿ ಬಸ್ ತಂಗುದಾಣದ ಕಾಮಗಾರಿ ಪೂರ್ಣ । ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರಿಗೆ ಅನುಕೂಲ
ಬಾ.ರಾ.ಮಹೇಶ್ ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿಪಟ್ಟಣದ ಹೊರ ವಲಯದ ಅಜ್ಜಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಕೆಎಸ್‌ಆರ್‌ಟಿಸಿ ಬಸ್ ಡಿಪೋದ ಕಾಮಗಾರಿ ಕೆಲಸ ಬಹುತೇಕ ಪೂರ್ಣಗೊಂಡಿದ್ದು ಬರುವ ಮಾರ್ಚ್ ತಿಂಗಳ ಒಳಗೆ ಆರಂಭವಾಗಲು ದಿನಗಣನೆ ಆರಂಭವಾಗಿದೆ.
ತಾಲೂಕು ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಬೇಕು ಎಂಬ ಕೂಗು ಕಳೆದ 4-5 ವರ್ಷಗಳ ಹಿಂದೆ ತಾಲೂಕಿನ ಜನರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಆಗಿನ ಶಾಸಕ ರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಪಟ್ಟಣದ ಹೊರ ವಲಯದ ಅಜ್ಜಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ 4 ಎಕರೆ ಜಮೀನನ್ನು ಗುರ್ತಿಸಿ, ಮಂಜೂರು ಮಾಡಿಸುವ ಜೊತೆಗೆ 8 ಕೋಟಿ ರು. ಹಣವನ್ನು ಸಹ ಸರ್ಕಾರದಿಂದ ಮಂಜೂರು ಮಾಡಿಸಿದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಆಗಿನ ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರಾಗಿದ್ದ ಹೊಳಲ್ಕೆರೆಯ ಶಾಸಕ ಚಂದ್ರಪ್ಪ ಇವರನ್ನು ಕರೆಸಿ ಭೂಮಿಪೂಜೆಯನ್ನು ನೆರವೇರಿಸಿದ್ದರು.
ರಾಜ್ಯ ಸರ್ಕಾರದ ಮಹತ್ವಕಾಂಶೆಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಇದು ಶಕ್ತಿ ತುಂಬಲಿದ್ದು ತಾಲೂಕಿನ ಬಸ್ಸುಗಳ ಸಂಪರ್ಕವೇ ಇಲ್ಲದಂತಹ ಅನೇಕ ಗ್ರಾಮಾಂತರ ಪ್ರದೇಶಗಳು, ಗ್ರಾಮಗಳಿಗೂ ಬಸ್ಸುಗಳು ಸಂಚರಿಸಲಿವೆ.
ಈ ಡಿಪೋದ ಸಂಪೂರ್ಣ ಕೆಲಸ ಮುಗಿಯುತ್ತಿದ್ದಂತೆಯೇ ಕ್ಷೇತ್ರದ ಶಾಸಕ ಬಸವರಾಜ ವಿ.ಶಿವಗಂಗಾ, ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಾರಿಗೆ ಸಚಿವರಿಂದ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಿಕೊಂಡು ಶೀಘ್ರದಲ್ಲಿಯೇ ಡಿಪೋದ ಲೋಕಾರ್ಪಣೆ ಆಗಲಿದೆ ಎಂದು ಹೇಳಿದ್ದಾರೆ.