ಕನ್ನಡಪ್ರಭ ವಾರ್ತೆ ಚನ್ನಗಿರಿ
ಇಲ್ಲಿನ ಹಿರೇಮಠದ ಆವರಣದಲ್ಲಿ ಸೋಮವಾರ ಸಂಜೆ ಇಲ್ಲಿನ ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಸರ್ಕಾರಿ ಬಸ್ಸುಗಳ ನಿಲ್ದಾಣವನ್ನು ನಿರ್ಮಿಸುವ ವಿಚಾರದಲ್ಲಿ ಹಿರೇಮಠದ ಶ್ರೀಗಳವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯ ನೇತೃತ್ವವನ್ನು ವಹಿಸಿ ಮಾತನಾಡಿ, ಸರ್ಕಾರಿ ಬಸ್ ನಿಲ್ದಾಣದ ನಿರ್ಮಾಣಕ್ಕಾಗಿ ಅಧಿಕಾರಿಗಳು ಸ್ಥಳಗಳನ್ನು ಹುಡುಕುತ್ತಿದ್ದಾರೆ. ಪಟ್ಟಣದ ಪ್ರಮುಖ ಸ್ಥಳದಲ್ಲಿರುವ ಸರ್ಕಾರಿ ಒಡೆತನದ ಜಾಗದಲ್ಲಿ ನಿಲ್ದಾಣ ನಿರ್ಮಿಸಲು ಏಕೆ ಬಳಕೆ ಮಾಡಿಕೊಳ್ಳಬಾರದು ಎಂದು ಶ್ರೀಗಳು ಪ್ರಶ್ನಿಸಿದರು.
ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೌ.ಹಾಲೇಶ್ ಮಾತನಾಡಿ, ಕಳೆದ 60 ವರ್ಷಗಳಿಂದ ಪುರಸಭೆಯ ಮುಂಭಾಗದ ಜಾಗವು ಸರ್ಕಾರಿ ಜಾಗ ಎಂದು ದಾಖಲಾತಿ ಇದೆ. ಇಂತಹ ಸಾರ್ವಜನಿಕರಿಗೆ ಬಹು ಉಪಯೋಗಿ ಜಾಗದಲ್ಲಿ ಬಸ್ ನಿಲ್ದಾಣವಾಗಲಿ ಸಾರ್ವಜನಿಕ ಉದ್ಯಾನವನ್ನಾಗಲಿ, ವಾಹನಗಳ ಪಾರ್ಕಿಂಗ್‌ಗಳಿಗಾಗಲಿ, ಫುಟ್‌ಪಾತ್ ವ್ಯಾಪಾರಿಗಳಿಗೆ ಸಹಕಾರಿಯಾಗುವಂತಹ ಫುಟ್ ಕಾಲೋನಿಯನ್ನಾಗಲಿ ಮಾಡಲಿ ಎನ್ನುವುದು ಸಂಘದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಈ ಜಾಗವನ್ನು ಸಾರ್ವಜನಿಕವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಲಿ ಎಂದು ಹೇಳಿದರು.ಖಡ್ಗ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಹಾಸ್ ಮಾತನಾಡಿ, ಪ್ರಮುಖ ಸ್ಥಳದಲ್ಲಿರುವ ಸರ್ಕಾರಿ ಒಡೆತನದ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣವಾದರೆ ಒಂದು ಕಡೆ ಖಾಸಗಿ ಬಸ್ ನಿಲ್ದಾಣ ಮತ್ತೊಂದು ಕಡೆ ಸರ್ಕಾರಿ ಬಸ್‌ಗಳ ನಿಲ್ದಾಣವಾದರೆ ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುವ ಜತೆಗೆ ಸರ್ಕಾರದ ಶಕ್ತಿ ಯೋಜನೆಗೆ ಜೀವಕಳೆ ಬರಲಿದೆ ಎಂದರು.
ಈ ಸಭೆಯಲ್ಲಿ ನಲ್ಲೂರಿನ ಕನ್ನಡ ಜಾಗೃತಿ ಸಮಿತಿಯ ಮುಖಂಡ ಬಾಗಜ್ಜಿ ಮಂಜುನಾಥ್, ಹೈದರಾಲಿ, ಸಾಮಾಜಿಕ ಹೋರಾಟಗಾರ ದೊಡ್ಡಘಟ್ಟ ರಂಗಸ್ವಾಮಿ, ವೀರಶೈವ ಸಮಾಜದ ಮುಖಂಡರಾದ ಸಿ.ಎಂ.ಗುರುಸಿದ್ದಯ್ಯ, ಮರವಂಜಿ ವೀರಭದ್ರಪ್ಪ, ಮಾನವಹಕ್ಕುಗಳ ವೇದಿಕೆಯ ಅಧ್ಯಕ್ಷ ಚಿಕ್ಕೂಲಿಕೆರೆ ನಾಗೇಂದ್ರಪ್ಪ, ಖಡ್ಗ ಸಂಘದ ಕುಬೇಂದ್ರಸ್ವಾಮಿ, ಅಭಿಷೇಕ್, ಪುರಸಭೆಯ ಸದಸ್ಯ ಪಟ್ಲಿನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ದಿಗ್ಗೇನಹಳ್ಳಿ ನಾಗರಾಜ್ ಸೇರಿದಂತೆ ಇನ್ನು ಅನೇಕ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದು ಸಲಹೆ ಸೂಚನೆ ನೀಡಿದರು.