ಕೆ.ಟಿ.ಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷನ ಕೊಲೆ

KannadaprabhaNewsNetwork | Published : Jan 5, 2025 1:32 AM

ಸಾರಾಂಶ

ತಾಲೂಕಿನ ಕೆ.ಟಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ದೇವಲಕೆರೆ ಗ್ರಾಮದ ವಾಸಿ, ಗ್ರಾಪಂ ಮಾಜಿ ಉಪಾಧ್ಯಕ್ಷ ನರಸಿಂಹಪ್ಪರನ್ನು ಸಮೀಪದ ತಿಮ್ಮಪ್ಪನ ಬೆಟ್ಟದಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಶುಕ್ರವಾರ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಘಟನೆ ಶನಿವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಕೆ.ಟಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ದೇವಲಕೆರೆ ಗ್ರಾಮದ ವಾಸಿ, ಗ್ರಾಪಂ ಮಾಜಿ ಉಪಾಧ್ಯಕ್ಷ ನರಸಿಂಹಪ್ಪರನ್ನು ಸಮೀಪದ ತಿಮ್ಮಪ್ಪನ ಬೆಟ್ಟದಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಶುಕ್ರವಾರ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಘಟನೆ ಶನಿವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.

ಪಾವಗಡ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ದೇವಲಕೆರೆ ಗ್ರಾಮದ ಮೃತ ನರಸಿಂಹಪ್ಪ ಗ್ರಾಪಂ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ವ್ಯವಸಾಯ ಹಾಗೂ ಮೇಕೆ ಸಾಕಾಣಿಕೆಯಿಂದ ಜೀವನ ಸಾಗಿಸುತ್ತಿದ್ದರು. ಶುಕ್ರವಾರ ಮೇಕೆ ಮೇಯಿಸಲು ಸಮೀಪದ ತಿಮ್ಮಪ್ಪನ ಬೆಟ್ಟ ಅರಣ್ಯ ಪ್ರದೇಶಕ್ಕೆ ತೆರಳಿದ್ದ ವೇಳೆ ಇದೇ ಗ್ರಾಪಂನ ದೇವಲಕೆರೆ ಗ್ರಾಮದ ಪಕ್ಕದ ಕರೆಯಮ್ಮನಪಾಳ್ಯ ವಾಸಿ, ಮೃತ ಸಂಬಂಧಿ ಎನ್ನಲಾದ ಮಣಿಕಂಠ ಎನ್ನುವ ವ್ಯಕ್ತಿ ಕುಡುಗೋಲಿನಿಂದ ಕುತ್ತಿಗೆ ಹಾಗೂ ಎಡಗೈ ಬೆರಳುಗಳನ್ನು ಕತ್ತರಿಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಕೊಲೆ ನಂತರ ಮಣಿಕಂಠ ಮೇಕೆಗಳನ್ನು ಸಹ ಹೊಡೆದುಕೊಂಡು ಹೋಗಿದ್ದ ಎನ್ನಲಾಗಿದೆ. ನರಸಿಂಹಪ್ಪ ಅವರ ಹಿರಿಯ ಪುತ್ರ ಮಂಜುನಾಥ್‌ ಶನಿವಾರ ಬೆಳಿಗ್ಗೆ ಅಪ್ಪನಿಗಾಗಿ ಹುಡುಕಾಡಿ ಕೊನೆಗೆ ತಂದೆ ಚಿತ್ರದುರ್ಗದ ಹಿರಿಯೂರಿಗೆ ಹೋಗಿರಬಹುದು ಎಂದು ಅಂದಾಜಿಸಿ ಮೇಕೆ ಸಂತೆಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ತಮಗೆ ಸೇರಿದ್ದ 15ಕ್ಕಿಂತ ಹೆಚ್ಚು ಮೇಕೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನ ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಮಣಿಕಂಠ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನರಸಿಂಹಪ್ಪರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೃತ ದೇಹವನ್ನು ಎಸೆದಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಪರಿಶೀಲಿಸಿದಾಗ ಮೃತ ದೇಹ ಪತ್ತೆಯಾಗಿದೆ. ಕೃತ್ಯದಲ್ಲಿ ಆರೋಪಿ ಮಣಿಕಂಠ ಸೇರಿ ನಾಲ್ವರು ಭಾಗಿಯಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಕುರಿತಂತೆ ಪಾವಗಡ ತಾಲೂಕಿಗೆ ಅರಸಿಕೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತಾಪ: ಕೊಲೆ ವಿಚಾರ ತಿಳಿದು ಮಾಜಿ ಸಚಿವ ವೆಂಕಟರಮಣಪ್ಪ,ಶಾಸಕರಾದ ಎಚ್.ವಿ.ವೆಂಕಟೇಶ್,ಪುರಸಭೆ ಅಧ್ಯಕ್ಷ ಪಿ.ಎಚ್‌.ರಾಜೇಶ್, ದೇವಲಕರೆ ಲೋಕೇಶ್,ಅಂಬಿಕಾರಮೇಶ್‌, ಭಾಸ್ಕರ್ ನಾಯಕ, ಗಾಡಿ ಮಂಜುನಾಥ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.ಘಟನೆ ದುರದೃಷ್ಟಕರ: ನರಸಿಂಹಪ್ಪ ಕೊಲೆಯಾದ ಹಿನ್ನಲೆಯಲ್ಲಿ ಘಟನೆ ಕುರಿತು ಮಾಜಿ ಶಾಸಕ ಕೆ.ಎ.ತಿಮ್ಮರಾಯಪ್ಪ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಇದು ದುರದೃಷ್ಟಕರ ಸಂಗತಿ.ಇಂತಹ ಘಟನೆಗಳು ಸೂಕ್ತವಲ್ಲ. ವ್ಯಕ್ತಿಯೊಬ್ಬರನ್ನು ನಿದಾಕ್ಷಿಣ್ಯವಾಗಿ ಕೊಲೆ ಮಾಡುವುದು ಸರಿಯಲ್ಲ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮವಹಿಸಬೇಕೆಂದು ತಿಳಿಸಿದ್ದಾರೆ. ರಾಜ್ಯ ಜೆಡಿಎಸ್‌ ಹಿರಿಯ ಮುಖಂಡರಾದ ಎನ್‌.ತಿಮ್ಮಾರೆಡ್ಡಿ,ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ ,ಗುಜ್ಜನಡು ನರಸಪ್ಪ ,ಹಾಗೂ ಇತರೆ ಅನೇಕ ಮಂದಿ ಮುಖಂಡರು ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ವ್ಯಕ್ತಪಡಿಸಿದ್ದಾರೆ.

Share this article