ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ ವರ್ಷಗಳ ಇತಿಹಾಸದಲ್ಲೇ ಯಾವ ಅಧ್ಯಕ್ಷರೂ ಪಡೆಯದಷ್ಟು ದಿನಭತ್ಯೆ, ಪ್ರಯಾಣ ಭತ್ಯೆ, ವೇತನ ಪಡೆದಿರುವ ಅಂಶ ಬೆಳಕಿಗೆ ಬಂದಿರುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.ರಾಜ್ಯಾಧ್ಯಕ್ಷರೇ ಸಿದ್ಧಪಡಿಸಿರು ಜಮಾ-ಖರ್ಚಿನ ವಿವರದಲ್ಲಿ ಲೋಪ-ದೋಷಗಳಿದ್ದು ಆರ್ಥಿಕ ಅಶಿಸ್ತು ಎದ್ದು ಕಾಣುತ್ತಿದೆ. ಅಧ್ಯಕ್ಷರ ವೇತನ ೪.೨೦ ಲಕ್ಷ ರು., ದಿನ ಭತ್ಯೆ-೭,೬೨,೩೨೯ ರು., ಪ್ರಯಾಣ ವೆಚ್ಚ-೬.೭೦,೨೬೭ ರು., ವಾಹನ ನಿರ್ವಹಣೆ-೯೩,೩೧೯, ಮನೆ ದಿನಪತ್ರಿಕೆಗಳ ವೆಚ್ಚ-೩೩,೪೧೯, ದೂರವಾಣಿ, ಜಂಗಮವಾಣಿಗಳ ವೆಚ್ಚ-೪೩,೫೧೯, ಕಾರು ಇಂಧನ ವೆಚ್ಚ-೧೮,೩೧೦ ಸೇರಿದಂತೆ ಒಟ್ಟು ೨೨,೦೬,೫೫೩ ರು. ಹಣವನ್ನು ಪಡೆದಿರುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳ ಸಹಿತ ವಿವರಿಸಿದರು.
೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡಿದ್ದ ೩೦ ಕೋಟಿ ರು. ಅನುದಾನದಲ್ಲಿ ೨.೫೦ ಕೋಟಿ ರು. ಹಣವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಪಡೆದಿದೆ. ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿ ೨೭.೫೦ ಕೋಟಿ ರು. ವೆಚ್ಚ ಮಾಡಿ ಲೆಕ್ಕಪತ್ರಗಳನ್ನು ನೀಡಿದ್ದಾರೆ. ಆದರೆ, ಡಾ.ಮಹೇಶ್ ಜೋಶಿ ಅವರು ೨.೫೦ ಕೋಟಿ ರು.ಗೆ ಇದುವರೆಗೂ ಲೆಕ್ಕ ನೀಡದೆ ಇನ್ನೂ ಆರು ತಿಂಗಳ ಸಮಯವಿದೆ. ಆ ನಂತರ ಲೆಕ್ಕ ಕೊಡುತ್ತೇನೆ ಎಂದು ಉದ್ಧಟತನ ಮೆರೆದಿದ್ದಾರೆ ಎಂದು ಆರೋಪಿಸಿದರು.ಸಾಹಿತ್ಯ ಸಮ್ಮೇಳನ ಮುಗಿದು ನಾಲ್ಕು ತಿಂಗಳು ಪೂರ್ಣಗೊಂಡಿದ್ದರೂ ಇದುವರೆಗೂ ಸ್ಮರಣ ಸಂಚಿಕೆ ಮುದ್ರಣಗೊಂಡು ಪ್ರಕಟಗೊಂಡಿರುವುದಿಲ್ಲ. ಈ ವಿಷಯವಾಗಿ ಡಾ.ಮಹೇಶ್ ಜೋಶಿ ಅವರು ಜಿಲ್ಲಾ ಪರಿಷತ್ತಿನ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಯಾರ ಭಾವಚಿತ್ರ ಪ್ರಕಟಿಸಬೇಕೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇತ್ಯರ್ಥವಾದ ನಂತರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿರುವುದು ಸರಿಯಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣಕ್ಕೂ ಸ್ಮರಣ ಸಂಚಿಕೆಗೂ ಯಾವುದೇ ಸಂಬಂಧಧವಿಲ್ಲ. ಸ್ವಾಗತ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳು ಮುಂದಿನ ಹತ್ತು ದಿನಗಳೊಳಗೆ ಮುದ್ರಣ ಕಾರ್ಯ ಆರಂಭಿಸದಿದ್ದರೆ ಅವರ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
೨೦೨೩-೨೪ನೇ ಸಾಲಿನ ವಾರ್ಷಿಕ ವರದಿಯಲ್ಲಿ ಮತ್ತು ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ ಕಾಮಗಾರಿಗಳು, ಕಟ್ಟಡ ನವೀಕರಣದಲ್ಲಿರುವ ಲೋಪ-ದೋಷಗಳ ಬಗ್ಗೆ ಈಗಾಗಲೇ ಎತ್ತಿಹಿಡಿದಿದ್ದಾರೆ. ಅಧ್ಯಕ್ಷರು ಸರಿಯಾದ ಉತ್ತರ ನೀಡದೆ ಮುಂದೆ ಸರಿಪಡಿಸಿಕೊಳ್ಳುವ ಬಗ್ಗೆ ತಾತ್ಸಾರದ ಮಾತುಗಳನ್ನಾಡುತ್ತಾ ಬಂದಿದ್ದಾರೆ. ಹಾಗಾಗಿ ಅವ್ಯವಹಾರಗಳು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ನಿಖರ ಮಾಹಿತಿ ನೀಡುವ ಬಗ್ಗೆಯೂ ಹೋರಾಟ ನಡೆಸುವುದಾಗಿ ಹೇಳಿದರು.ಕಸಾಪ ಅಜೀವ ಸದಸ್ಯತ್ವ ಪಡೆದು ಕನ್ನಡ ಸೇವೆ ಮಾಡುತ್ತಿರುವ ಸದಸ್ಯರನ್ನು ಹಾಗೂ ಚುನಾಯಿತ ಸದಸ್ಯರನ್ನು ಷೋಕಾಸ್ ನೋಟಿಸ್ ನೀಡಿ ಸದಸ್ಯತ್ವ ರದ್ದುಪಡಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ. ತಕ್ಷಣವೇ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
೨೦೨೨ನೇ ಸಾಲಿನಲ್ಲಿ ಸಮಗ್ರ ಬೈಲಾ ತಿದ್ದುಪಪಡಿ ಮಾಡಿ ಬೆಂಗಳೂರು ಮಹಾ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೂಲ ದಾವೆ ಸಂಖ್ಯೆ ಓ ಎಸ್ ೩೦೨೯/೨೦೨೨ರಲ್ಲಿ ದಾಖಲಾಗಿರುವ ದಾವೆಯ ತೀರ್ಪಿಗೆ ಒಳಪಟ್ಟು ಅನುಮೋದಿಸಿ ನೋಂದಾಯಿಸಿದೆ ಎಂದು ತಿಳಿಸಿದ್ದಾರೆ.ಆ ಬೈಲಾ ತಿದ್ದುಪಡಿ ಪ್ರಕಾರವೇ ಅಧ್ಯಕ್ಷರು ವ್ಯವಹಾರ ನಡೆಸುತ್ತಿದ್ದು, ಮುಂದೆ ನ್ಯಾಯಾಲಯದಲ್ಲಿ ತೀರ್ಪು ಈ ಸಮಗ್ರ ಬೈಲಾ ತಿದ್ದುಪಡಿಗೆ ವಿರೋಧವಾಗಿ ಬಂದರೆ ತಿದ್ದುಪಡಿ ಬೈಲಾ ಪ್ರಕಾರ ನಡೆಸಿಕೊಂಡು ಬಂದಿರುವ ಅಧ್ಯಕ್ಷರ ಕಾರ್ಯಗಳಿಗೆ ಯಾರು ಹೊಣೆಯಾಗುವರೆಂದು ಪ್ರಶ್ನಿಸಿದರು.
ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಆರ್ಥಿಕ ಅಶಿಸ್ತು, ಸರ್ವಾಧಿಕಾರಿ ಧೋರಣೆ ವಿರುದ್ಧ ಮೆ ೧೫ ರಂದು ಮೈಸೂರು ವಿಭಾಗ ಮಟ್ಟದ ವಿವಿಧ ಕನ್ನಡಪರ, ಜನಪರ ಸಂಘಟನೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.ಗೋಷ್ಠಿಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪ್ರೊ.ಜಿ.ಟಿ.ವೀರಪ್ಪ, ಎಂ.ವಿ.ಧರಣೇಂದ್ರಯ್ಯ, ಎಸ್.ಕೆ.ಮಹೇಶ್, ಸಿ.ಕುಮಾರಿ ಇದ್ದರು.