ಹಳ್ಳಿ ಹೈದನ ಹಾಡಿಗೆ ಮನಸೋತ ಯುವಕರು । ಕಡು ಬಡತನದಲ್ಲಿ ಬೆಳೆದ ಯುವ ಪ್ರತಿಭೆ
ಹಳ್ಳಿ ಸೊಗಡಿನ ಜನಪದ ಹಾಡುಗಳ ಮೂಲಕ ಸಂಗೀತ ಕ್ಷೇತ್ರದಲ್ಲಿ ಸದ್ದಿಲ್ಲದೇ ತನ್ನದೇ ಹೆಸರು ಮಾಡುತ್ತಿರುವ ಅಪ್ಪಟ್ಟ ಗ್ರಾಮೀಣ ಪ್ರತಿಭೆ ಯುವಕ ಮೈಲಾರಪ್ಪ ಮಡಿವಾಳರ ಜನಪದ ಅಭಿಮಾನಿಗಳ ಪಾಲಿಗೆ ಹೀರೋ ಆಗಿ ಹೊರ ಹೊಮ್ಮುತ್ತಿದ್ದಾರೆ.
ಸ್ವರಚಿತ ಹಾಡುಗಾರ:
ಜಾತ್ರೆ-ಮದುವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಮೈಲಾರಿಗೆ ಅಣ್ಣಿಗೇರೆಯ ಪಂಚಾಕ್ಷರಿ ಅಜ್ಜನವರು, ರಂಗಭೂಮಿ ಕಲೆಯಲ್ಲಿ ಕೈಹಿಡಿದು ನಡೆಸಿದ ಪರಮನಹಟ್ಟಿಯ ಶಿವಶಂಕರ ಗಣವಾರಿ, ಗಜೇಂದ್ರಗಡದ ಮಂಗಳಮುಖಿ ಪಲ್ಲವಿ ಸಂಗೀತದ ಗುರು ಆಗಿದ್ದಾರೆ.
ಸಂಗೀತ ಗಾಯಕ ಮೈಲಾರಿಯ ಪ್ರತಿಭೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಆಂಧ್ರಪ್ರದೇಶದ ಶ್ರೀಶೈಲಂ ಗಡಿನಾಡು ಗಾನರತ್ನ, ಸಿದ್ಧಾರೂಢ ರಾಷ್ಟ್ರಪ್ರಶಸ್ತಿ, ಮಡಿವಾಳ ಮಾಚಿದೇವ ರಾಜ್ಯ ಪ್ರಶಸ್ತಿ, ರಾಷ್ಟ್ರಮಟ್ಟದ ಕಲಾರತ್ನ ಪ್ರಶಸ್ತಿ, ಚಾಲುಕ್ಯ ವಿಕ್ರಮಾದಿತ್ಯ ಸೇರಿ ಅನೇಕ ಪ್ರಶಸ್ತಿ ದೊರೆತಿವೆ.
ಮೂಲತ ಕುಡಗುಂಟಿ ಗ್ರಾಮದ ಮೈಲಾರಪ್ಪರ ಸಂಗೀತ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಯುವಕರು ಹಾಗೂ ಅಭಿಮಾನಿಗಳೇ ಉತ್ತರ ಕರ್ನಾಟಕದ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ ಎಂದು ಬಿರುದು ನೀಡಿದ್ದಾರೆ. ಬಾಳು ಬೆಳಗುಂದಿ, ಮಾಳು ನಿಪನಾಳ ಅವರ ತಂಡದಲ್ಲಿ ಮೈಲಾರಿ ಗುರುತಿಸಿಕೊಂಡಿದ್ದಾನೆ.
ಬರೀ ಹಾಡುಗಾರಿಕೆ ಅಷ್ಟೇ ಸಿಮೀತವಲ್ಲ, ಬಿಡುವಿನ ಅವಧಿಯಲ್ಲಿ ಕೃಷಿ ಜಮೀನುಗಳಲ್ಲಿ ಕೆಲಸ ಮಾಡುವ ಕೃಷಿ ಚಟುವಟಿಕೆಗಳಲ್ಲೂ ಮೈಲಾರಿ ತೊಡಗಿಸಿಕೊಂಡಿದ್ದಾರೆ.