ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮೆಸ್ಕಾಂ, ಅರಣ್ಯ ಇಲಾಖೆ ಮತ್ತು ಏಜೆನ್ಸಿ ಜಂಟಿಯಾಗಿ ವಿದ್ಯುತ್ ಸಂಪರ್ಕ ಇಲ್ಲದೆ ಸಂಕಷ್ಟದಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳನಾಡು ಪ್ರದೇಶದಲ್ಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸಮೀಕ್ಷೆ ಪ್ರಾರಂಭಿಸಿದೆ.ತಾಲೂಕಿನ ನಾರಾವಿ, ಕುತ್ಲೂರು, ಸುಲ್ಕೇರಿಮೊಗ್ರು, ನಾವರ, ಸವಣಾಲು, ನಾವೂರು, ಮಲವಂತಿಗೆ ಗ್ರಾಮಗಳಲ್ಲಿರುವ ಆದಿವಾಸಿ ಮಲೆಕುಡಿಯ ಕುಟುಂಬಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿ ಸುಮಾರು 140 ಮನೆಗಳು ಇನ್ನು ಕತ್ತಲಿನಲ್ಲಿ ಕಾಲ ಕಳೆಯುತ್ತಿವೆ. ಇಲ್ಲಿಗೆ ವಿದ್ಯುತ್ ಸಂಪರ್ಕದ ಕುರಿತು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಕೊನೆಗೂ ಕನಸು ನನಸಾಗುವ ದಿನಗಳು ಹತ್ತಿರವಾದಂತೆ ಕಾಣುತ್ತಿದೆ.ಸುಲ್ಕೇರಿ ಮೊಗ್ರು ಗ್ರಾಮದ ಬಹುತೇಕ ಸಮೀಕ್ಷೆ ಪೂರ್ಣಗೊಂಡಿದ್ದು, ಪ್ರಸ್ತಾವನೆ ಅಂತಿಮ ಹಂತದಲ್ಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಅಗತ್ಯ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಮಲವಂತಿಗೆ ಗ್ರಾಮದ 33 ಮನೆಗಳಿಗೆ ಕಳೆದ ವರ್ಷವೇ ಈ ಯೋಜನೆಯಲ್ಲಿ ವಿದ್ಯುತ್ ಸಂಪರ್ಕವಾಗಿದ್ದು, ಇಲ್ಲಿನ ಉಳಿದಿರುವ ಮನೆಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಶಿರ್ಲಾಲು ಗ್ರಾಮದ 13 ಮನೆಗಳಿಗೂ ವಿದ್ಯುತ್ ಸಂಪರ್ಕ ಕಾರ್ಯ ಪೂರ್ಣಗೊಂಡಿದೆ.ಗುಡ್ಡಗಾಡು ಪ್ರದೇಶ:ಈ ಗ್ರಾಮಗಳು ಗುಡ್ಡಗಾಡು ಪ್ರದೇಶದಲ್ಲಿದ್ದು, ನೆಟ್ವರ್ಕ್ಸ್, ಜಿಪಿಎಸ್ ಸಮಸ್ಯೆ ಕಂಡು ಬರುತ್ತಿದೆ. ಆಯಾ ಗ್ರಾಮಗಳ ಸಮೀಕ್ಷೆಯನ್ನು ಆನ್‌ಲೈನ್ ಜಿಪಿಎಸ್ ಮೂಲಕ ಪೂರೈಸಿ ಅಪ್ಲೋಡ್ ಮಾಡಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶವಾದ ಕಾರಣ ಇಲ್ಲಿ ಸಾಕಷ್ಟು ಸಂಖ್ಯೆಯ ವನ್ಯಮೃಗಗಳು ಇವೆ. ಜತೆಗೆ ನಕ್ಸಲ್ ಪೀಡಿತ ಪ್ರದೇಶಗಳಾದ ಇಲ್ಲಿ ರಸ್ತೆ ಸಹಿತ ಅನೇಕ ಮೂಲ ಸೌಕರ್ಯಗಳ ಕೊರತೆಯೂ ಕಾಡುತ್ತಿದೆ.ಒಂದು ಗ್ರಾಮದಲ್ಲಿ ಸಮೀಕ್ಷೆ ನಡೆಸಲು ಕನಿಷ್ಠ ಮೂರು ದಿನಗಳು ಬೇಕಾಗಿದ್ದು, ಪ್ರಸ್ತುತ ಇದು ಪ್ರಗತಿಯಲ್ಲಿದೆ.ಈ ಗ್ರಾಮಗಳಲ್ಲಿ ವಿದ್ಯುತ್ ವ್ಯವಸ್ಥೆ ವಿಚಾರದಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಅದಕ್ಕೆ ಅರಣ್ಯ ಕಾನೂನು ತೊಡಕಾಗಿತ್ತು. ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಅರಣ್ಯ ಇಲಾಖೆಯ ಅನುಮತಿ ಅತ್ಯಗತ್ಯವಾಗಿದೆ. ಜನಪ್ರತಿನಿಧಿಗಳ ಸತತ ಹೋರಾಟ, ಸ್ಥಳೀಯ ಜನರ ಆಗ್ರಹದಂತೆ ಈಗ ಕಾನೂನು ಕೊಂಚ ಸಡಿಲ ಗೊಂಡಿದೆ. ಈ ಕಾರಣದಿಂದ ಇಲ್ಲಿನ ಜನರು ಕತ್ತಲಿನಿಂದ ಬೆಳಕಿಗೆ ಬರುವ ನಿರೀಕ್ಷೆ ಇದೆ.ಸೋಲಾರ್ ಸಾಧ್ಯವಿಲ್ಲ:ಅರಣ್ಯದಿಂದ ಕೂಡಿದ ಪ್ರದೇಶಗಳಾದ ಕಾರಣ ಇಲ್ಲಿ ಸೋಲಾರ್ ವ್ಯವಸ್ಥೆ ಮಾಡಲು ಅನನುಕೂಲವಿದೆ. ಕೆಲವೆಡೆ ಸೋಲಾರ್ ಅಳವಡಿಸಲಾಗಿದ್ದರೂ ಅದು ವಿಫಲವಾಗಿದೆ. ಗ್ರಾಮದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲು ಅರಣ್ಯ ಇಲಾಖೆಯಿಂದ ಅನುಮತಿ ಸಿಗುವುದಿಲ್ಲ. ಕಾಡಿನ ಪ್ರದೇಶವಾದ ಕಾರಣ ಇಲ್ಲಿ ಮರಗಳು ಉರುಳಿ ಬೀಳುವುದು ಸಾಮಾನ್ಯ, ಇದರಿಂದ ಕೇಬಲ್ ಮೂಲಕ ವಿದ್ಯುತ್ ಒದಗಿಸುವ ಚಿಂತನೆ ನಡೆದಿದೆ.-------------ಶೀಘ್ರ ಅನುಮೋದನೆಗೆ ಡಿಸಿ ಪತ್ರನ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅರಣ್ಯ ಮತ್ತು ಅರಣ್ಯದಂಚಿನಲ್ಲಿರುವ ಬುಡಕಟ್ಟು ಸಮುದಾಯದವರಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು ಮೊದಲಾದ ಸೌಕರ್ಯಗಳನ್ನು ತುರ್ತಾಗಿ ಒದಗಿಸುವಂತೆ ಸೂಚನೆ ನೀಡಿದ್ದರು. ಇದರ ಆಧಾರದಲ್ಲಿ ದ.ಕ. ಜಿಲ್ಲಾಧಿಕಾರಿ ಡಿ.5ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಸರ್ಕಾರದ ಅಪರ ಕಾರ್ಯದರ್ಶಿಗೆ ಪತ್ರ ಬರೆದು ಸುಲ್ಕೇರಿಮೊಗ್ರು ಗ್ರಾಮದ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಬಾಕಿಯಾಗಿರುವ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು. ಉಳಿದ ಸ್ಥಳಗಳಲ್ಲಿ ತಕ್ಷಣ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದರು.------------ವಿದ್ಯುತ್ ಸಂಪರ್ಕ ಇಲ್ಲದ ಪ್ರದೇಶಗಳ ಸಮೀಕ್ಷೆಯನ್ನು ಜ.12ರ ಒಳಗೆ ಮುಗಿಸಲು ಡಿಸಿ ಸೂಚನೆ ನೀಡಿದ್ದಾರೆ. ಸಮೀಕ್ಷೆ ಕಾರ್ಯಗಳು ಭರದಿಂದ ನಡೆಯುತ್ತಿವೆ. ಶಿರ್ಲಾಲು ಹಾಗೂ ಮಲವಂತಿಗೆ ಗ್ರಾಮಗಳ ಕೆಲವು ಮನೆಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.। ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್, ಎಇಇ, ಮೆಸ್ಕಾಂ, ಬೆಳ್ತಂಗಡಿ