ಕುದ್ರೋಳಿ ದಸರಾದ ದರ್ಬಾರು ಮಂಟಪಕ್ಕೆ ಬೇಲೂರು ವೈಭವದ ಟಚ್‌!

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಪ್ರತಿ ವರ್ಷ ಒಂದೊಂದು ಬ್ಲಾಕ್‌ ಮಾದರಿ ರಚಿಸಿ ಅದರಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರತಿಯೊಂದು ವಿಗ್ರಹಕ್ಕೂ ಪ್ರತ್ಯೇಕ ಗುಡಿ, ಮೇಲ್ಪಾಗದಲ್ಲಿ ಗೋಪುರದ ಪರಿಕಲ್ಪನೆ ನೀಡಿ ಮತ್ತಷ್ಟುಆಕರ್ಷಣೀಯವಾಗಿ ರಚಿಸಲಾಗಿದೆ. ಮೇಲ್ಚಾವಣಿವನ್ನು ಬೆಳಕಿನ ಶೃಂಗಾರದೊಂದಿಗೆ ಸುತ್ತು ಪಟ್ಟಿ, ಕಲಾಕೃತಿಯೊಂದಿಗೆ ಮೆರುಗು ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದಲ್ಲಿ ಮೂರ್ತಿಗಳು ಪ್ರತಿಷ್ಠಾಪಿಸಲ್ಪಡುವ ‘ದರ್ಬಾರು ಮಂಟಪ’ ಈ ಬಾರಿ ಬೇಲೂರಿನ ಕೆತ್ತನೆ, ಶಿಲಾಬಾಲಿಕೆಯ ಕಲಾಕೃತಿಗಳ ಮೂಲಕ ಕಂಗೊಳಿಸಲಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಒಂದೊಂದು ಬ್ಲಾಕ್‌ ಮಾದರಿ ರಚಿಸಿ ಅದರಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರತಿಯೊಂದು ವಿಗ್ರಹಕ್ಕೂ ಪ್ರತ್ಯೇಕ ಗುಡಿ, ಮೇಲ್ಪಾಗದಲ್ಲಿ ಗೋಪುರದ ಪರಿಕಲ್ಪನೆ ನೀಡಿ ಮತ್ತಷ್ಟುಆಕರ್ಷಣೀಯವಾಗಿ ರಚಿಸಲಾಗಿದೆ. ಮೇಲ್ಚಾವಣಿವನ್ನು ಬೆಳಕಿನ ಶೃಂಗಾರದೊಂದಿಗೆ ಸುತ್ತು ಪಟ್ಟಿ, ಕಲಾಕೃತಿಯೊಂದಿಗೆ ಮೆರುಗು ನೀಡಲಾಗಿದೆ. ಶಿಲಾಬಾಲಿಕೆಯರ ವೈಭವ: ದರ್ಬಾರು ಮಂಟಪದ ಪ್ರಧಾನ ದ್ವಾರ ಪ್ರವೇಶಿಸಿದ ಕೂಡಲೇ ವಿಶಾಲವಾದ ಮಂಟಪದ ಸುತ್ತ ಆಂಟಿಕ್‌ ವರ್ಣದೊಂದಿಗೆ ಅಲಂಕರಿಸಲಾದ 10ಕ್ಕೂ ಅಧಿಕ ಶಿಲಾಬಾಲಿಕೆಯರು ಬೇಳೂರು-ಹಳೇಬೀಡಿನ ಶಿಲ್ಪಕಲೆಯ ವೈಭವ ನೆನಪಿಸುವಂತಿದೆ. ಎಡ-ಭಾಗದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವರು, ಬ್ರಹ್ಮಶ್ರೀ ನಾರಾಯಣಗುರುಗಳ ಬೃಹತ್‌ ಚಿತ್ರಗಳನ್ನು ಅಳವಡಿಸಲಾಗಿದೆ. 80 ಕಂಬಗಳ ಬಳಕೆ: ದರ್ಬಾರು ಮಂಟಪಕ್ಕೆ 80 ಕಲಾತ್ಮಕವಾದ ಕಂಬಗಳನ್ನು ರಚಿಸಲಾಗಿದೆ. ಈ ಮಂಟಪ ರಚನೆಗೆ 24 ಕಲಾವಿದರು ಸುಮಾರು 25ಕ್ಕೂ ಅಧಿಕ ದಿನ ಹಗಲು-ಇರುಳೆನ್ನದೆ ದುಡಿದಿದ್ದಾರೆ. ಮಂಟಪ ನಿರ್ಮಾಣಕ್ಕೆ ಫೈಬರ್‌, ರೀಪರ್‌, ಕಬ್ಬಿಣದ ಫ್ರೇಮ್‌, ನಾನಾ ವಿಧದ ಬಟ್ಟೆಗಳನ್ನು ಬಳಕೆ ಮಾಡಲಾಗಿದೆ ಎನ್ನುತ್ತಾರೆ ಚಂದ್ರಶೇಖರ ಸುವರ್ಣ. ಗಾಳಿಯಲ್ಲೇ ತಿರುಗುವ ಮೇಲ್ಚಾವಣಿ ದಸರಾ ಮಹೋತ್ಸವದ ಶಾರದೆ ಮಂಟಪವನ್ನು ಆಂಟಿಕ್‌ ಮಾದರಿಯ ಕಲಾಕೃತಿಗಳನ್ನು ಬಳಸಿ ಅತ್ಯಾಕರ್ಷವಾಗಿ ರಚಿಸಲಾಗಿದೆ. ಶಾರದೆಯ ಮೇಲ್ಪಾಗದಲ್ಲಿ ಗಾಳಿಯ ವೇಗದಿಂದ ತಿರುಗುವ ಮೇಲ್ಪಾವಣಿ ರಚಿಸಲಾಗಿದ್ದು, ಇದಕ್ಕೆ ಯಾವುದೇ ಮೋಟಾರು ಬಳಕೆ ಮಾಡಿಲ್ಲ. ಇದು ಶಾರದಾ ಮಂಟಪಕ್ಕೆ ಮತ್ತಷ್ಟು ಆಕರ್ಷಣೆ ಹೆಚ್ಚಿಸಲಿದೆ ಎನ್ನುತ್ತಾರೆ ಕುದ್ರೋಳಿ ದರ್ಬಾರು ಮಂಟಪ ನಿರ್ಮಿಸುವ ಸುವರ್ಣ ಆರ್ಟ್ಸ್‌ ಮೂಲ್ಕಿ ಇದರ ಮಾಲೀಕ ಚಂದ್ರಶೇಖರ ಸುವರ್ಣ.

Share this article