ಕುಯ್ಯಂಗೇರಿ: ನಿವೇಶನ ರಹಿತರಿಂದ 6 ದಿನಗಳಿಂದ ಟೆಂಟ್‌ವಾಸ ಪ್ರತಿಭಟನೆ

KannadaprabhaNewsNetwork | Published : Nov 7, 2024 11:47 PM

ಸಾರಾಂಶ

ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಒತ್ತಾಯಿಸಿ ನಿವೇಶನ ರಹಿತ ಕುಟುಂಬಸ್ಥರು ಕುಯ್ಯಂಗೇರಿಯಲ್ಲಿ ಆರು ದಿನಗಳಿಂದ ಟೆಂಟ್‌ನಲ್ಲಿ ವಾಸಿಸಿ ಪ್ರತಿಭಟಿಸುತ್ತಿದ್ದಾರೆ. ಹಕ್ಕುಪತ್ರ ದೊರಕದೆ ಸ್ಥಳದಿಂದ ಕದಲುವುದಿಲ್ಲ. ಶಾಸಕರು ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಲು ಪ್ರತಿಭಟನಾನಿತರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹೊದ್ದೂರು ಪಂಚಾಯಿತಿ ಹಾಗೂ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕುಯ್ಯಂಗೇರಿಯ ಸರ್ಕಾರಿ ಜಾಗದಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸಬೇಕು. ನಿವೇಶನ ರಹಿತರಿಗೆ ನಿವೇಶನ ಕೊಡಿಸಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ, ಹೊದ್ದೂರು ಪಂಚಾಯಿತಿ ಸದಸ್ಯ ಮೊಣ್ಣಪ್ಪ ಒತ್ತಾಯಿಸಿದ್ದಾರೆ.

ಕುಯ್ಯಂಗೇರಿ ಗ್ರಾಮದಲ್ಲಿ ನಿವೇಶನಾ ರಹಿತರ ಹೋರಾಟದನೇತೃತ್ವ ವಹಿಸಿ ಅವರು ಮಾತನಾಡಿದರು.

ಮಡಿಕೇರಿ ತಾಲೂಕಿನ ಹೊದ್ದೂರು ಪಂಚಾಯಿತಿ ಮತ್ತು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗಳಿಗೆ ಒಳಪಟ್ಟ 800ಕ್ಕೂ ಅಧಿಕ ನಿವೇಶನ ರಹಿತ ನಿರಾಶ್ರಿತ ಬಡ ಕುಟುಂಬಗಳಿಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸರ್ಕಾರಿ ಕಂದಾಯ ಭೂಮಿಯನ್ನು ಭೂ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದುವರೆಗೂ ಬಡವರಿಗೆ ನಿವೇಶನ ಸರ್ಕಾರ ನೀಡಲು ಮುಂದಾಗಿರುವುದಿಲ್ಲ. ಕುಯ್ಯಂಗೇರಿ ಗ್ರಾಮದ ಸರ್ವೆ ನಂ. 53/10 ,49/3 ಮತ್ತು 88/4 ರ ಜಾಗದ ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ಕಲ್ಪಿಸಿ ಕೊಡುವಂತೆ ಒತ್ತಾಯಿಸಿದರು.

ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಒತ್ತಾಯಿಸಿ ನಿವೇಶನ ರಹಿತ ಕುಟುಂಬಸ್ಥರು ಕುಯ್ಯಂಗೇರಿಯಲ್ಲಿ ಆರು ದಿನಗಳಿಂದ ಟೆಂಟ್‌ನಲ್ಲಿ ವಾಸಿಸಿ ಪ್ರತಿಭಟಿಸುತ್ತಿದ್ದಾರೆ. ಹಕ್ಕುಪತ್ರ ದೊರಕದೆ ಸ್ಥಳದಿಂದ ಕದಲುವುದಿಲ್ಲ. ಶಾಸಕರು ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಲು ಪ್ರತಿಭಟನಾನಿತರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.

ವಿಷಯಕ್ಕೆ ಸಂಬಂಧಪಟ್ಟಂತೆ ಕಂದಾಯ ಪರಿವೀಕ್ಷಕ (ರೆವಿನ್ಯೂ ಅಧಿಕಾರಿ) ಪ್ರಸಾದ್ ಹಾಗೂ ಗ್ರಾಮ ಲೆಕ್ಕಿಗ ಸಂತೋಷ್ ಪಾಟೀಲ, ಸಿಬ್ಬಂದಿ ಗುರುವಾರ ಸ್ಥಳಕ್ಕೆ ತೆರಳಿ ಸರ್ವೆ ಕಾರ್ಯ ನಡೆಸಿದರು.

ಪ್ರತಿಭಟನಾನಿರತ ನಿವೇಶನರಹಿತರು, ಸರ್ವೆ ಕಾರ್ಯ ನಡೆಸಿ ಜಾಗ ಗುರುತು ಮಾಡಿ ಹಕ್ಕು ಪತ್ರ ನೀಡಬೇಕು. ತಪ್ಪಿದಲ್ಲಿ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಹೊದ್ದೂರು ಪಂಚಾಯಿತಿ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕುಸುಮಾವತಿ, ಹೊದ್ದೂರು ಪಂಚಾಯಿತಿ ಮತ್ತು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗಳಿಗೆ ಒಳಪಟ್ಟ ನಿವೇಶನ ರಹಿತ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Share this article