ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಬೆಳಗ್ಗೆ ೭.೩೩ರ ಧನುರ್‌ಲಗ್ನ ಸುಮುಹೂರ್ತದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಉತ್ಸವದ ವಿವಿಧ ವೈಧಿಕ ವಿದಿವಿಧಾನ ನೆರವೇರಿಸಿದರು. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಬ್ರಹ್ಮರಥೋತ್ಸವ ಸೇವೆಯನ್ನು 148 ಭಕ್ತರು ಸಲ್ಲಿಸಿದರು. ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ ಭಕ್ತರಿಗೆ ರಥ ಎಳೆಯಲು ಅನುಕೂಲವಾಗುವಂತೆ ವಿಶೇಷ ಪಾಸ್ ನೀಡಲಾಗಿತ್ತು.
ಮೊದಲು ದೇವಳದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ನಂತರ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್,ಜಾಗಟೆ,ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಾಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಬೆಳಗ್ಗೆ ೭.೩೩ರ ಧನುರ್ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥಾರೂಢರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾ ಮಂಗಳಾರತಿ ನೆರವೇರಿತು.ಪೂಜೆಯ ಬಳಿಕ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಶ್ರೀದೇವರಿಗೆ ಸುವರ್ಣವೃಷ್ಟಿ ನೆರವೇರಿಸಿದರು. ಬಳಿಕ ಭಕ್ತಾದಿಗಳಿಗೆ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ರಥದಿಂದ ಭಕ್ತರತ್ತ ಎಸೆದರು. ಭಕ್ತಾದಿಗಳು ನಾಣ್ಯ, ಕಾಳು ಮೆಣಸು, ಸಾಸಿವೆಗಳನ್ನು ರಥಕ್ಕೆ ಎಸೆದರು. ಬಳಿಕ ಪ್ರಥಮವಾಗಿ ಪಂಚಮಿ ರಥೋತ್ಸವ ನೆರವೇರಿತು. ನಂತರ ಮಹಾರಥೋತ್ಸವ ನಡೆಯಿತು.
ಬೀದಿ ಉರುಳು ಸೇವೆ: ಕುಮಾರಧಾರ ತೀರ್ಥ ಸ್ನಾನದಿಂದ ದೇವಳದ ತನಕ ಸುಮಾರು ೨ಕಿ.ಮೀ ದೂರದವರೆಗೆ ಊರುಳುತ್ತಾ ಸಾಗುವ ಅತ್ಯಂತ ಕಠಿಣವಾದ ಹರಕೆ ಸೇವೆಯಾದ ಬೀದಿ ಉರುಳು ಸೇವೆಯು ಮಹಾರಥೋತ್ಸವದೊಂದಿಗೆ ಸಂಪನ್ನಗೊಂಡಿತು. ಹೆಚ್ಚಿನ ಸಂಖ್ಯೆಯ ಭಕ್ತರು ಈ ಸೇವೆ ನೆರವೇರಿಸಿದರು.
ಚಂಪಾಷಷ್ಠಿಯ ದಿನ ನಾಗಾರಾಧನೆಯ ಪ್ರಧಾನ ಕ್ಷೇತ್ರ ಕುಕ್ಕೆಗೆ ಭಕ್ತ ಸಾಗರವೇ ಹರಿದು ಬಂದಿತ್ತು.ಬ್ರಹ್ಮರಥೋತ್ಸವದ ಸಂದರ್ಭ ರಥಬೀದಿಯ ಇಕ್ಕೆಲದಲ್ಲಿ ಮತ್ತು ರಥೋತ್ಸವದ ಬಳಿಕ ರಥಬೀದಿ ತುಂಬೆಲ್ಲ ಭಕ್ತ ಸಂದೋಹವೇ ಕಂಡು ಬಂದಿತ್ತು. ಆದಿಸುಬ್ರಹ್ಮಣ್ಯ, ಶ್ರೀ ದೇವಳದ ಹೊರಾಂಗಣ, ಒಳಾಂಗಣದಲ್ಲಿ ಭಕ್ತ ಸಾಗರವೇ ಕಂಡು ಬಂದಿತ್ತು.ಷಷ್ಠಿಯ ಸುದಿನ ಷಣ್ಮುಖ ಪ್ರಸಾದ ಬೋಜನ ಶಾಲೆ ಮತ್ತು ಆದಿಸುಬ್ರಹ್ಮಣ್ಯ ಬೋಜನ ಶಾಲೆಯಲ್ಲಿ ಬೆಳಗ್ಗೆ ೧೦.೩೦ರಿಂದ ಸಂಜೆ ೫ ಗಂಟೆಯ ತನಕ ನಿರಂತರವಾಗಿ ಅನ್ನಪ್ರಸಾದವನ್ನು ಸಹಸ್ರಾರು ಭಕ್ತರು ಸ್ವೀಕರಿಸಿದರು.