ರಾಜ್ಯದಲ್ಲಿ ಮತ್ತೊಮ್ಮೆ ಕುಮಾರಸ್ವಾಮಿ ಸರ್ಕಾರ ಖಚಿತ: ಎಚ್ ಡಿಡಿ

KannadaprabhaNewsNetwork |  
Published : Apr 02, 2024, 01:05 AM IST
1ಎಚ್ಎಸ್ಎನ್19 : ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡರು ಮಾತನಾಡಿದರು. | Kannada Prabha

ಸಾರಾಂಶ

೧೯೯೧ರಲ್ಲಿ ಲೋಕಸಭೆಗೆ ನಿಂತಾಗ ಎಲ್ಲ ಕಡೆ ದೇವೇಗೌಡರು ಸೋಲುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆಗ ಜಿಲ್ಲೆಯ ಜನರು ನನಗೆ ೩೩ ಸಾವಿರ ಲೀಡ್ ಕೊಟ್ಟು ಗೆಲ್ಲಿಸಿದ್ದನ್ನು ನಾನೆಂದಿಗೂ ಮರೆಯುವುದಿಲ್ಲ.

ಕನ್ನಡಪ್ರಭ ವಾರ್ತೆ ಹಾಸನ

ಯಾರು ಏನೇ ಕುತ್ರಂತ್ರ ಮಾಡಿದರೂ, ಏನೇ ಹೋರಾಟ ನಡೆಸಿದರೂ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಸರ್ಕಾರ ಬರುವುದು ಖಚಿತ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.ತಾಲೂಕಿನ ಕಟ್ಟಾಯದಲ್ಲಿ ಸೋಮವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ೧೯೯೧ರಲ್ಲಿ ಲೋಕಸಭೆಗೆ ನಿಂತಾಗ ಎಲ್ಲ ಕಡೆ ದೇವೇಗೌಡರು ಸೋಲುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆಗ ಜಿಲ್ಲೆಯ ಜನರು ನನಗೆ ೩೩ ಸಾವಿರ ಲೀಡ್ ಕೊಟ್ಟು ಗೆಲ್ಲಿಸಿದ್ದನ್ನು ನಾನೆಂದಿಗೂ ಮರೆಯುವುದಿಲ್ಲ. ಕಟ್ಟಾಯ ಹೋಬಳಿ ಒಂದರಲ್ಲೇ ೧೫ ಸಾವಿರ ಲೀಡ್ ಕೊಟ್ಟ ಹಿನ್ನೆಲೆಯಲ್ಲಿ ಲೋಕಸಭೆಗೆ ಹೋಗಿ ಪ್ರಧಾನಿಯಾಗಿದ್ದನ್ನು ಗೌಡರು ಸ್ಮರಿಸಿದರು.

ಜಿಲ್ಲೆಯಲ್ಲಿ ಕೆಲವರು ಭಾಷಣ ಮಾಡಿದ್ದಾರೆ, ಅವರ ಹೆಸರನ್ನು ನಾನು ಹೇಳುವುದಿಲ್ಲ. ಸೋತಿದ್ದವರನ್ನು ಗಂಡಸಿ ಕ್ಷೇತ್ರದಲ್ಲಿ ಬೆಳೆಸಿದ್ದು ರೇವಣ್ಣ. ಇನ್ನೊಬ್ಬರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದೆ. ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಹಾಗೂ ಎಚ್.ಕೆ ಜವರೇಗೌಡ ಅವರಿಗೆ ಕುಟುಕಿದರು. ತಾನು ಪ್ರಧಾನಿ ಆಗಿದ್ದ ವೇಳೆ ಕಟ್ಟಾಯ ಭಾಗದ ಜನರ ಅನುಕೂಲಕ್ಕೆ ಯಗಚಿ ಜಲಾಶಯ ನಿರ್ಮಿಸಿದೆ,ಆದರೆ ೧೯೯೧ ರಲ್ಲಿ ನನ್ನನ್ನು ಸೋಲಿಸಿ ಜಿ. ಪುಟ್ಟಸ್ವಾಮಿಗೌಡ ಹಾಸನ ಜಿಲ್ಲೆಯ ಸುಮಾರು ೪೫ ಸಾವಿರ ಎಕರೆ ಜಮೀನಿಗೆ ಅನುಕೂಲವಾಗಿದ್ದ ನೀರನ್ನು ಚಿಕ್ಕಮಗಳೂರಿಗೆ ಕೊಂಡೊಯ್ಯುವ ಕೆಲಸ ಮಾಡಿದ್ದರಿಂದ ಈ ಭಾಗದ ಜನರಿಗೆ ಅನಾನುಕೂಲವಾಗಿದೆ ಎಂದರು.

ಸಭೆಯಲ್ಲಿ ಮಾಜಿ ಸಚಿವರಾದ ಎಚ್.ಡಿ. ರೇವಣ್ಣ, ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ಮುಖಂಡರಾದ ಕೆ.ಎಂ. ರಾಜೇಗೌಡ, ಬಿ.ವಿ. ಕರೀಗೌಡ, ಎಸ್. ದ್ಯಾವೆಗೌಡ, ರಂಗಶಟ್ಟಿ, ಮೊಸಳೆ ಹೊಸಳ್ಳಿ ಚಂದ್ರಣ್ಣ, ಕಾರ್ಲೆ ಇಂದ್ರೇಶ್, ನಾರಾಯಣಗೌಡ, ಮಾಯಿಗೌಡ, ಎಸ್.ಕೆ. ಕುಮಾರ್, ರುದ್ರಪ್ಪ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ