ಕುಮಾರಸ್ವಾಮಿ ಸಿಎಂ ಮಾಡಿದವರನ್ನೇ ದ್ವೇಷಿಸುತ್ತಾರೆ: ಶಾಸಕ ನರೇಂದ್ರ

KannadaprabhaNewsNetwork | Published : Apr 12, 2024 1:01 AM

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದವರನ್ನೇ ಇಂದು ದ್ವೇಷ ಮಾಡುತ್ತಿದ್ದಾರೆ. ರಾಜಕೀಯ ಬೆಳವಣಿಗೆಗೆ ಕಾರಣರಾದವರನ್ನೇ ತುಳಿಯುವುದಕ್ಕೆ ಹೊರಟಿದ್ದೀರಾ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದವರನ್ನೇ ಇಂದು ದ್ವೇಷ ಮಾಡುತ್ತಿದ್ದಾರೆ. ರಾಜಕೀಯ ಬೆಳವಣಿಗೆಗೆ ಕಾರಣರಾದವರನ್ನೇ ತುಳಿಯುವುದಕ್ಕೆ ಹೊರಟಿದ್ದೀರಾ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಟೀಕಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕನಕಭವನದಲ್ಲಿ ಏರ್ಪಡಿಸಿದ್ದ ಕುರುಬ, ಈಡಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಮಾತೆತ್ತಿದರೆ ಒಕ್ಕಲಿಗ ಸಮುದಾಯವರು ಎನ್ನುವಿರಿ. ಒಕ್ಕಲಿಗ ಸಮುದಾಯ ನನ್ನ ಪರ ನಿಲ್ಲಿ ಎಂದು ಕೇಳುತ್ತೀರಿ. ನೀವು ಎಷ್ಟು ಜನ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಾ ನೆನಪು ಮಾಡಿಕೊಳ್ಳಿ. ಎಸ್.ಎಂ.ಕೃಷ್ಣ ಅವರು 2ನೇ ಬಾರಿ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದಿರಿ. ನಿಮ್ಮ ಮುಖ್ಯಮಂತ್ರಿ ಮಾಡಿದ ಚಲುವರಾಯಸ್ವಾಮಿ, ಬಾಲಕೃಷ್ಣರನ್ನು ಇವತ್ತು ತೆಗಳುತ್ತಿದ್ದೀರಾ. ನಿಮ್ಮ ನಡವಳಿಕೆಗಳು ನೀವು ಒಕ್ಕಲಿಗರೋ, ಅಲ್ಲವೋ ಎಂಬ ಅನುಮಾನ ಮೂಡುವಂತೆ ಮಾಡಿದೆ ಎಂದು ಛೇಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮೇಲೆ ಒಂದೆ ಒಂದು ಕಳಂಕ ಇಲ್ಲ. ಇವರು ನಮ್ಮ ಮಂಡ್ಯ ಜಿಲ್ಲೆಯವರು. ಎದುರಾಳಿ ಅಭ್ಯರ್ಥಿ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರು ಒಂದೊಂದು ಚುನಾವಣೆಯಲ್ಲಿ ಒಂದೊಂದು ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕರ ಬಗ್ಗೆ ನಿಷ್ಕೃಷ್ಟ ಮಾತುಗಳನ್ನಾಡುತ್ತಾರೆ. ಮಂಡ್ಯಕ್ಕೆ ನಿಮ್ಮ ಆಡಳಿತದ ಅವಧಿಯಲ್ಲಿ ಏನು ಮಾಡಿದ್ದೀರಿ. ಒಂದು ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ನಾಲೆ ಆಧುನೀಕರಣ ಮಾಡಲಿಲ್ಲ. ಸ್ಟಾರ್ ಚಂದ್ರು ನನಗೆ ಸಾಟಿಯೇ ಎನ್ನುವಿರಲ್ಲಾ ನಿಮಗೆ ಮಂಡ್ಯದ ಮಣ್ಣಿನ ಗುಣ, ಮಂಡ್ಯದ ಸ್ವಾಭಿಮಾನವೇ ಉತ್ತರ ನೀಡಲಿದೆ. ಮಂಡ್ಯದಲ್ಲಿ ಈ ಬಾರಿ ಮಾತು ಮಾತನಾಡಬಾರದು. ಮಂಡ್ಯದ ಹೃದಯ, ಮಂಡ್ಯದ ಸೊಗಡು ಮಾತನಾಡಬೇಕು. ನಮ್ಮ ಸ್ವಾಭಿಮಾನದ ಪ್ರತಿನಿಧಿ ಸ್ಟಾರ್ ಚಂದ್ರು ಸಂಸತ್‌ಗೆ ಹೋಗಲಿ ಎಂದು ಹೇಳಿದರು.ಸಭೆಯಲ್ಲಿ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಲೋಕಸಭೆ ಅಭ್ಯರ್ಥಿ ಸ್ಟಾರ್ ಚಂದ್ರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಶಿವಣ್ಣ, ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಎಂ.ಎಸ್‌.ಚಿದಂಬರ್‌, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಇತರರಿದ್ದರು.

Share this article