ನಾಗಮಂಗಲ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆಂದು ಹೇಳಿದವರ ಇಡೀ ಕುಟುಂಬವೇ ದಾರಿ ತಪ್ಪಿದೆ ಎಂದು ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ಕೊಟ್ಟರು.ತಾಲೂಕಿನ ಬೆಳ್ಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ (ಸ್ಟಾರ್ ಚಂದ್ರು) ಪರ ನಟ ದರ್ಶನ್ ನಡೆಸಿದ ರೋಡ್‌ಶೋನಲ್ಲಿ ಪಾಲ್ಗೊಂಡು ಮಾತನಾಡಿ, ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿಗೆ ರಾಮನಗರವೂಬೇಕು, ಚನ್ನಪಟ್ಟಣದ ಜೊತೆಗೆ ಮಂಡ್ಯ ಕೂಡ ಬೇಕೆನ್ನುವುದಾದರೆ ಪ್ರಧಾನಿ ನರೇಂದ್ರ ಮೋದಿಗೆ ಹೇಳಿ ಎಲ್ಲ ಕ್ಷೇತ್ರಗಳನ್ನೂ ಉಳಿಸಿಕೊಳ್ಳಬಹುದಿತ್ತು ಎಂದು ಜರಿದರು. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆದ್ದರೆ ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆಸಬೇಕು. ಅವರ್ ಬಿಟ್ ಇವರ್ ಬಿಟ್ ಅವರ್‍ಯಾರು ಎಂಬಂತೆ ಅಲ್ಲಿಗೆ ಮರಿಮೊಮ್ಮಗನನ್ನು ನಿಲ್ಲಿಸುತ್ತಾರೋ ಏನೋ ಯಾರಿಗೆ ಗೊತ್ತು. ಆದ್ದರಿಂದ ಕುಟುಂಬ ರಾಜಕಾರಣಕ್ಕೋಸ್ಕರ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಯಸ್ಸಿನ ಮಿತಿಯನ್ನು ಕೈಬಿಡುವಂತೆ ಪ್ರಧಾನಿ ನರೇಂದ್ರಮೋದಿಯಲ್ಲಿ ಮನವಿ ಮಾಡಿಕೊಳ್ಳುವುದಾಗಿ ಲೇವಡಿ ಮಾಡಿದರು.ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆಂದು ಹೇಳಿಕೆ ನೀಡಿರುವುದು ನನಗೆ ಬಹಳ ನೋವಾಗಿದೆ ಎಂದು ಕಿಡಿಕಾರಿದರು.ನರೇಂದ್ರ ಮೋದಿ ಪ್ರಧಾನಮಂತ್ರಿಯಾದರೆ ನಾನು ದೇಶ ಬಿಟ್ಟು ಹೋಗತ್ತೇನೆ, ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂತೆಲ್ಲಾ ಬಿಜೆಪಿಯನ್ನು ಬಹಳ ಕೆಟ್ಟದಾಗಿ ಬೈದಿದ್ದವರೇ ಇಂದು ಅದೇ ಪಕ್ಷದೊಂದಿಗೆ ದೋಸ್ತಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದರೆ ರಾಜ್ಯ ಮತ್ತು ರಾಷ್ಟ್ರದ ಜನರ ಹಿತಕ್ಕಲ್ಲ. ತಮ್ಮ ಕುಟುಂಬದವರ ಹಿತಕ್ಕೋಸ್ಕರ. ಆದ್ದರಿಂದ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಜಿಲ್ಲೆಯ ಜನರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ನಟ ದರ್ಶನ್ ಮತ್ತು ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಚಲುವರಾಯಸ್ವಾಮಿ ಪುತ್ರ ಸಚ್ಚಿನ್, ತಾಪಂ ಮಾಜಿ ಅಧ್ಯಕ್ಷ ಮೂಡ್ಲೀಗೌಡ, ಮುಖಂಡರಾದ ಸುನಿಲ್‌ಲಕ್ಷ್ಮೀಕಾಂತ್, ಪಾಪಣ್ಣ, ವೆಂಕಟೇಶ್, ಶಿವಣ್ಣ, ದಿನೇಶ್, ತಿಮ್ಮರಾಯಿಗೌಡ ಸೇರಿದಂತೆ ಹಲವರಿದ್ದರು.