ಕಾವೇರಿಗಾಗಿ ಕುಮಾರಸ್ವಾಮಿ ಗೆಲುವು ಅಗತ್ಯ: ಅಬ್ಬಾಸ್ ಆಲಿ ಬೋಹ್ರಾ

KannadaprabhaNewsNetwork | Published : Apr 14, 2024 1:47 AM

ಸಾರಾಂಶ

ಜಿಲ್ಲೆಯ ರೈತರು, ಯುವಕರು, ಶ್ರಮಿಕರು ಸೇರಿ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಕುಮಾರಸ್ವಾಮಿ ಅವರ ಅವಶ್ಯಕತೆ ಜಿಲ್ಲೆಗಿದೆ. ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ, ಬಡವರು, ಹಿಂದುಳಿದವರು, ಶೋಷಿತರು, ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಏಳಿಗೆಗೆ ಶ್ರಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ನೀರಿನ ರಕ್ಷಣೆಗಾಗಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಅನಿವಾರ್ಯ. ಕುಮಾರಸ್ವಾಮಿ ಅವರು ಸಂಸದರಾದರೆ ಕೇಂದ್ರದಲ್ಲಿ ಮಂತ್ರಿಯಾಗಲಿದ್ದು, ಮಂಡ್ಯ ಹಾಗೂ ರಾಜ್ಯದ ಪರವಾಗಿ ಸಂಸತ್‌ನಲ್ಲಿ ದನಿ ಎತ್ತಲಿದ್ದಾರೆ. ಕಾವೇರಿ ಉಳಿವಿಗಾಗಿ ಕುಮಾರಸ್ವಾಮಿ ಗೆಲುವು ಅನಿವಾರ್ಯ ಎಂದು ಕೇಂದ್ರ ವಕ್ಫ್ ಕೌನ್ಸಿಲ್ ಮಾಜಿ ಸದಸ್ಯ ಅಬ್ಬಾಸ್ ಆಲಿ ಬೋಹ್ರಾ ಹೇಳಿದರು.

ಜಿಲ್ಲೆಯ ರೈತರು, ಯುವಕರು, ಶ್ರಮಿಕರು ಸೇರಿ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಕುಮಾರಸ್ವಾಮಿ ಅವರ ಅವಶ್ಯಕತೆ ಜಿಲ್ಲೆಗಿದೆ. ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ, ಬಡವರು, ಹಿಂದುಳಿದವರು, ಶೋಷಿತರು, ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಏಳಿಗೆಗೆ ಶ್ರಮಿಸಿದ್ದಾರೆ. ಈ ಭಾಗದಲ್ಲಿ ರೈತರು ಮತ್ತು ಕಾವೇರಿ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಹಾಗಾಗಿ ಇಂತಹ ನಾಯಕರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇವೇಗೌಡರ ಅಲ್ಪಸಂಖ್ಯಾತ ಸಮುದಾಯದ ಮಿರಾಜುದ್ದೀನ್ ಪಟೇಲ್, ಸಿ.ಎಂಇಬ್ರಾಹಿಂ ಅವರನ್ನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಪ್ರತಿ ಬಾರಿ ಜನತಾದಳ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ನಾಲ್ಕರಿಂದ ಐದು ಮಂದಿ ಅಲ್ಪಸಂಖ್ಯಾತರನ್ನು ಕ್ಯಾಬಿನೆಟ್ ದರ್ಜೆಯ ಮಂತ್ರಿಗಳನ್ನಾಗಿ ಮಾಡಿದ್ದಾರೆ.ಈ ಹಿಂದೆ ರೋಷನ್ ಬೇಗ್ ಅವರಿಗೆ ಗೃಹಖಾತೆಯನ್ನು ನೀಡಿದ್ದರು. ಅಲ್ಪಸಂಖ್ಯಾತರಿಗೆ ಹೆಚ್ಚಿನ ಅಧಿಕಾರ ನೀಡಿರುವ ಜೆಡಿಎಸ್‌ನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಸಮುದಾಯದವರಲ್ಲಿ ಮನವಿ ಮಾಡಿದರು.

ಜೆಡಿಎಸ್ ಪಕ್ಷದಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಅನೇಕ ಕೊಡುಗೆ ಸಿಕ್ಕಿವೆ. ಅಲ್ಪಸಂಖ್ಯಾತರ ಭವಿಷ್ಯಕ್ಕಾಗಿ ಪ್ರಾದೇಶಿಕ ಪಕ್ಷ ಬಹಳ ಅನಿವಾರ್ಯವಾಗಿದೆ. ಕೇವಲ ಓಟ್‌ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಬಳಸಿಕೊಳ್ಳುವ ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ರಾಜ್ಯದ ಶೇ.೮೦ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಕೊಟ್ಟಿದ್ದು, ೯ ಮಂದಿ ಮುಸ್ಲಿಂ ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಆದರೆ, ಮಂತ್ರಿಸ್ಥಾನ ಕೊಟ್ಟಿರುವುದು ಇಬ್ಬರಿಗೆ ಮಾತ್ರ. ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ ಎಂದರು.

ರೈತರು ಬೆಳೆ ನಷ್ಟದಿಂದ ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಮ್ಮ ನೀರು ನಮಗೆ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರ ತಮಿಳುನಾಡಿನವರ ಓಲೈಕೆಗಾಗಿ ಕಾವೇರಿ ನೀರನ್ನು ಕದ್ದುಮುಚ್ಚಿ ಹರಿಸುತ್ತಾ ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ. ಜನರಿಗೆ ಕಾವೇರಿ ನೀರಿನ ವಿಚಾರದಲ್ಲಿ ಮೋಸ ಮಾಡಿರುವ ಕಾಂಗ್ರೆಸ್ಸಿಗರಿಗೆ ಜಿಲ್ಲೆಯ ಮತದಾರರ ಬಳಿ ಮತ ಕೇಳುವ ನೈತಿಕ ಹಕ್ಕಿಲ್ಲ. ಕಾವೇರಿ ಉಳಿವಿಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಸತ್‌ನಲ್ಲಿ ನೂರಾರು ಬಾರಿ ದನಿ ಎತ್ತಿದ್ದಾರೆ. ಕಾವೇರಿ ನದಿ ನೀರಿನ ರಕ್ಷಣೆಯನ್ನು ಕಾಂಗ್ರೆಸ್ ಸರ್ಕಾರದಿಂದ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದರು.

ಗೋಷ್ಠಿಯಲ್ಲಿ ಸಿ.ಟಿ.ಮಂಜುನಾಥ, ರವಿ, ಮಹಾಂತಪ್ಪ, ಸಿದ್ದರಾಜು, ರಾ.ಶಿ.ಸಿದ್ದರಾಜು, ಮಹೇಶ್ ಇದ್ದರು.

Share this article